ಕಡಿಮೆ ದರಕ್ಕೆ ಕಬ್ಬಿಣದ ಸರಳುಗಳನ್ನು ನೀಡುತ್ತೇವೆ ಎಂದು ನಂಬಿಸಿ, ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ವಂಚಕರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಉದ್ಯಮಿಗೆ ಕಬ್ಬಿಣದ ಸರಳುಗಳ ಅಗತ್ಯವಿದ್ದ ಕಾರಣ, ಯಾವುದು ಉತ್ತಮ ಹಾಗೂ ಕಡಿಮೆ ದರದಲ್ಲಿ ಸಿಗಬಹುದು ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅವರಿಗೆ Birla Estate Pvt Ltd ಎಂಬ ವೆಬ್‌ಸೈಟ್‌ನಲ್ಲಿ ಟೋಲ್ ಫ್ರೀ ಸಂಖ್ಯೆಯೊಂದು ಕಾಣಿಸಿದೆ. ಅದಕ್ಕೆ ಉದ್ಯಮಿ ಕರೆ ಮಾಡಿದಾಗ ವಂಚಕರು ತಮಗೆ ಕಡಿಮೆ ದರದಲ್ಲಿ ಸರಳುಗಳನ್ನು ಪೂರೈಸುವುದಾಗಿ ನಂಬಿಸಿದ್ದಾರೆ.ಇದನ್ನು ಸತ್ಯವೆಂದು ನಂಬಿದ ಉದ್ಯಮಿ, ತಮಗೆ 15 ಟನ್ ಕಬ್ಬಿಣದ ಸರಳುಗಳು ಅಗತ್ಯವಿದೆ ಎಂದು ತಿಳಿಸಿದ್ದಾರೆ.
ವಂಚಕರು 15 ಟನ್ ಕಬ್ಬಿಣಕ್ಕೆ 8,02,500 ಮೊತ್ತದ ಇನ್‌ವಾಯ್ಸ್ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಕಳುಹಿಸಿದ್ದಾರೆ. ಅಲ್ಲದೆ ಅಡ್ವಾನ್ಸ್ ಆಗಿ 4,50,000 ಪಾವತಿಸುವಂತೆ ತಿಳಿಸಿದ್ದಾರೆ. ಅದರಂತೆ ಉದ್ಯಮಿ ಮೊದಲು ಆ ಹಣವನ್ನು ಪಾವತಿಸಿದ್ದಾರೆ. ಮರುದಿನ ಮತ್ತೆ ಕರೆ ಮಾಡಿದ ವಂಚಕರು, ಬಾಕಿ ಇರುವ 3,52,500 ಹಣವನ್ನು ಪಾವತಿಸಿದರೆ ಕಬ್ಬಿಣದ ಸರಳುಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿದಾಗ, ಉದ್ಯಮಿ ಉಳಿದ ಹಣವನ್ನೂ ಕಳುಹಿಸಿದ್ದಾರೆ.
ಆದರೆ, ತದನಂತರವೂ ಕರೆ ಮಾಡಿದ ವಂಚಕರು ಇ-ವೇ ಬಿಲ್ ಮಾಡಲು ಇನ್ನಷ್ಟು ಹಣ, ಅಂದರೆ 91,500 ಪಾವತಿಸುವಂತೆ ಕೇಳಿದಾಗ ಉದ್ಯಮಿಗೆ ಅನುಮಾನ ಬಂದಿದೆ. ತಕ್ಷಣ ತಮ್ಮ ಸ್ನೇಹಿತರಲ್ಲಿ ವಿಚಾರಿಸಿದಾಗ ತಾವು ವಂಚನೆಗೊಳಗಾಗಿರುವುದು ತಿಳಿದುಬಂದಿದೆ. ಈ ರೀತಿಯಾಗಿ Birla Estate Pvt Ltd ಹೆಸರಿನಲ್ಲಿ ನಟಿಸಿ, ಕಬ್ಬಿಣದ ಸರಳುಗಳನ್ನು ಕೊಡುವುದಾಗಿ ನಂಬಿಸಿ ಒಟ್ಟು 8,02,500 ಹಣವನ್ನು ವಂಚನೆಯಿಂದ ವರ್ಗಾಯಿಸಿಕೊಂಡವರನ್ನು ಪತ್ತೆ ಹಚ್ಚಿಕೊಡುವಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
This video cannot be played in your browser. Open the video directly






