ಸಿದ್ದಾಪುರ: ಕರ್ತವ್ಯದ ನಿಮಿತ್ತ ಹೊರಟಿದ್ದ ಶಿಕ್ಷಕಿಯೊಬ್ಬರು ಅತಿವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶಿರಸಿ-ಸಿದ್ದಾಪುರ ಮುಖ್ಯರಸ್ತೆಯ ಕನ್ನಳ್ಳಿ ಚೆಕ್‌ಪೋಸ್ಟ್ ಬಳಿ ಸಂಭವಿಸಿದೆ.
ದುರ್ಘಟನೆಯ ವಿವರ: ಪಟ್ಟಣದ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ-ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪೂರ್ಣಿಮಾ ಗಣಪತಿ ಭಟ್ (47) ಮೃತಪಟ್ಟ ದುರ್ದೈವಿ. ಬಸವಗಿರಿಯ ಕೊಲಸಿರ್ಸಿ ಕ್ರಾಸ್ ನಿವಾಸಿಯಾದ ಇವರು, ಸರ್ಕಾರದ ಜನಗಣತಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಈ ಸಂಬಂಧ ಮಾಹಿತಿ ನೀಡಲು ತಮ್ಮ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಶಿರಸಿಯಿಂದ ಸಿದ್ದಾಪುರಕ್ಕೆ ಸೌದೆ ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್, ಸ್ಕೂಟರ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಟ್ರ್ಯಾಕ್ಟರ್ ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆಯೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ನರೇಗಾ ಕೆಲಸಕ್ಕೆ ಕೊರತೆ ಇಲ್ಲ: ಅಗತ್ಯವಿರುವವರು ಮುಂದೆ ಬರಲಿ – ಇಒ ಟಿ. ವಾಯ್. ದಾಸನಕೊಪ್ಪ
ಡಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಪೂರ್ಣಿಮಾ ಅವರು ಚಿಕಿತ್ಸೆ ಲಭಿಸುವ ಮೊದಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತಕ್ಕೆ ಕಾರಣವಾದ ಹಾವೇರಿ ಮೂಲದ ಟ್ರ್ಯಾಕ್ಟರ್ ಚಾಲಕ ಆಕಾಶ ಮಂಜಪ್ಪ ಬಾಲಣ್ಣನವರ್ ಎಂಬಾತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಮೃತ ಶಿಕ್ಷಕಿ ಪೂರ್ಣಿಮಾ ಭಟ್ ಅವರು ಶಾಲೆಯಲ್ಲಿ ಸದಾ ಹಸನ್ಮುಖಿಯಾಗಿದ್ದು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿದ್ದರು.
ಅವರ ಅಕಾಲಿಕ ನಿಧನಕ್ಕೆ ಹೊಸೂರು ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಶಿಕ್ಷಕ ವಲಯ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಈ ಘಟನೆಯಿಂದಾಗಿ ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ಆತಂಕ ಮನೆಮಾಡಿದೆ.




