ಈ ಐಪಿಎಲ್ ಸೀಸನ್‌ನಲ್ಲಿ ತಿಲಕ್ ವರ್ಮಾ ತಮ್ಮ 'ಭವಿಷ್ಯ'ವನ್ನು ಭದ್ರಮಾಡಿಕೊಂಡಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್‌ನ ಮುಂದಿನ ಪ್ರಮುಖ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅದಕ್ಕೆ ತಿಲಕವಿಟ್ಟಂತೆ ಭಾರತ 'ಎ' ತಂಡಕ್ಕೆ ತಿಲಕ್ ವರ್ಮಾನನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಒಂದು ಕಾಲದ ಸೂಪರ್ ಸ್ಟಾರ್ ತಂಡವಾದ ಮುಂಬೈ ಇಂಡಿಯನ್ಸ್, ಆಡಿದ 12 ಪಂದ್ಯಗಳಲ್ಲಿ 8ನ್ನು ಸೋತು ಹೀನಾಯ ಸ್ಥಿತಿಯಲ್ಲಿದೆ. ಅದು ಆ ತಂಡದ ನಾಯಕ ಹಾರ್ದಿಕ್ ಪಾಂಡ್ಯನ ಎಗರಾಟ, ಹಾರಾಟವನ್ನು ನಿಯಂತ್ರಣಕ್ಕೂ ತಂದಿದೆ. ಹಾಗೆಯೇ ಮತ್ತೊಬ್ಬ ಸೂಪರ್ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್‌ನನ್ನು ತಹಬಂದಿಗೆ ತಂದಿದೆ. ಆದರೆ, ಇವರ ಮೇಲೆ ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡು ಹಣ ಹೂಡಿದ್ದ ಅಂಬಾನಿಗಳಲ್ಲಿ ನಿರಾಶೆ ಮೂಡಿಸಿದೆ.
ಮುಂಬೈ ಇಂಡಿಯನ್ಸ್ ತಂಡದ ಸೋಲು ಮತ್ತು ಕಳಪೆ ಪ್ರದರ್ಶನಗಳ ನಡುವೆಯೇ ತಂಡಕ್ಕೆ ಕೊಂಚವಾದರೂ ಮರ್ಯಾದೆ ತಂದವರು ತಿಲಕ್ ವರ್ಮಾ ಮತ್ತು ರೋಹಿತ್ ಶರ್ಮಾ. ಅದರಲ್ಲೂ ನಿನ್ನೆಯ ಪಂಜಾಬ್ ಪೇರಿಸಿದ್ದ 201 ರನ್ ಗಳ ಸವಾಲಿನ ಮೊತ್ತಕ್ಕೆ ಮುಂಬೈ ಮತ್ತೊಮ್ಮೆ ಮುಗ್ಗರಿಸಲಿದೆ ಎಂದೇ ಎಲ್ಲರ ಅಭಿಮತವಾಗಿತ್ತು. ಆದರೆ ತಿಲಕ್ ವರ್ಮಾಗೆ ಸಿಕ್ಕ ಕೇವಲ 33 ಬಾಲ್‌ಗಳಲ್ಲಿ 6 ಸಿಕ್ಸರ್, 6 ಬೌಂಡರ್ ಎತ್ತುವ ಮೂಲಕ 75 ರನ್ ಕಲೆಹಾಕಿ, ತಂಡವನ್ನು ಗೆಲ್ಲಿಸಿಕೊಂಡ ಪರಿ ಅದ್ಭುತವಾಗಿತ್ತು. ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ತಿಲಕ್ ವರ್ಮಾ ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಆಡಿದ ರೀತಿಯನ್ನು ನೋಡಿದರೆ, ಆತ ಕೇವಲ ಪ್ರತಿಭಾವಂತ ಯುವ ಆಟಗಾರನಲ್ಲ; ಒತ್ತಡದ ಕ್ಷಣಗಳಲ್ಲಿ ದಿಟ್ಟವಾಗಿ ನಿಂತು ಆಡಬಲ್ಲ, ತಂಡವನ್ನು ಮುನ್ನಡೆಬಲ್ಲ ಬ್ಯಾಟರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಅಗತ್ಯಕ್ಕೆ ತಕ್ಕಂತೆ ಆಡುವ ಆಟರಾರನಾಗಿ ರೂಪುಗೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ. ಕೆಲ ವರ್ಷಗಳ ಹಿಂದೆ ‘ಭವಿಷ್ಯದ ತಾರೆ’ ಎಂದು ಹೇಳಲಾಗುತ್ತಿದ್ದ ತಿಲಕ್, ಈಗ ‘ಪ್ರಸ್ತುತದ ಭರವಸೆ’ ಎನ್ನುವ ಮಟ್ಟ ಮುಟ್ಟಿದ್ದಾರೆ.
ಈ ಸೀಸನ್‌ನಲ್ಲಿ ತಿಲಕ್ ವರ್ಮಾ ಅವರ ಬ್ಯಾಟಿಂಗ್‌ನ ಪ್ರಮುಖ ವಿಶೇಷತೆ ಎಂದರೆ, ಪರಿಸ್ಥಿತಿಗೆ ತಕ್ಕಂತೆ ಆಟವನ್ನು ಬದಲಾಯಿಸುವ ಸಾಮರ್ಥ್ಯ. ಆರಂಭಿಕ ಓವರ್‌ಗಳಲ್ಲಿ ಸ್ಪಿನ್ ಎದುರಿಸಿದಾಗ ಶಾಂತವಾಗಿ ಸಿಂಗಲ್-ಡಬಲ್ ತೆಗೆದುಕೊಳ್ಳುವುದು, ನಂತರ ವೇಗದ ಬೌಲರ್‌ಗಳ ಮೇಲೆ ದಾಳಿ ನಡೆಸುವುದು ಅವರ ಆಟದ ಪರಿಪಕ್ವತೆಯನ್ನು ತೋರಿಸುತ್ತದೆ. ಹಲವಾರು ಯುವ ಬ್ಯಾಟರ್‌ಗಳು ಐಪಿಎಲ್‌ನಲ್ಲಿ ಕೇವಲ ಸ್ಟ್ರೈಕ್‌ರೇಟ್‌ಗಾಗಿ ಆತುರಪಡುವಾಗ, ತಿಲಕ್ ತಂಡದ ಅವಶ್ಯಕತೆ ಯಾವುದು ಎಂಬುದನ್ನು ಅರ್ಥಮಾಡಿಕೊಂಡು ಆಡುವ ಪರಿ ಮುಖ್ಯವೆನಿಸುತ್ತಿದೆ.
ಇದನ್ನು ಓದಿದ್ದೀರಾ?: ಪಂಜಾಬ್‌ಗೆ ಸತತ 5ನೇ ಸೋಲು: ಕೋಚ್ ರಿಕಿ ಪಾಂಟಿಂಗ್‌ಗೆ ಪ್ರೀತಿ ಜಿಂಟಾ ತರಾಟೆ?
ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ಅವರು ನೀಡಿದ ಸ್ಥಿರತೆ ಗಮನಾರ್ಹ. ಆರಂಭಿಕ ವಿಕೆಟ್‌ಗಳು ಬೇಗ ಬೀಳುವ ಪಂದ್ಯಗಳಲ್ಲಿ ಇನ್ನಿಂಗ್ಸ್ ಕಟ್ಟುವ ಹೊಣೆ ಹೊತ್ತು, ಕೊನೆಯ ಓವರ್‌ಗಳಲ್ಲಿ ವೇಗ ಹೆಚ್ಚಿಸಿಕೊಳ್ಳುವ ಗುಣ ತೋರುವುದು ತಿಲಕ್ ವರ್ಮಾನ ವಿಶೇಷ. ಇದೇ ಬೆಳೆಯಬಲ್ಲ, ದೊಡ್ಡ ಆಟಗಾರನಾಗಬಲ್ಲವನ ಲಕ್ಷಣ. ಆತನ ಬ್ಯಾಟಿಂಗ್‌ನಲ್ಲಿ ಅತಿಯಾದ ಅಲಂಕಾರ ಇಲ್ಲ; ಬದಲಿಗೆ ಟೈಮಿಂಗ್, ಗ್ಯಾಪ್ ಹುಡುಕುವ ಸಾಮರ್ಥ್ಯ ಮತ್ತು ಶಾಟ್ ಆಯ್ಕೆಗಳಲ್ಲಿ ಸ್ಪಷ್ಟತೆ ಇದೆ.
ತಿಲಕ್ ವರ್ಮಾ ಅವರ ಆಟದಲ್ಲಿ ಮತ್ತೊಂದು ಪ್ರಮುಖ ಅಂಶ ಎಂದರೆ ಸ್ಪಿನ್ ವಿರುದ್ಧದ ಆತ್ಮವಿಶ್ವಾಸ. ಭಾರತದ ಅನೇಕ ಯುವ ಬ್ಯಾಟರ್‌ಗಳು ವೇಗದ ಬೌಲಿಂಗ್ ಎದುರಿಸಲು ಸಿದ್ಧರಾಗಿದ್ದರೂ, ಗುಣಮಟ್ಟದ ಸ್ಪಿನ್ ಎದುರು ಸಂಕಷ್ಟಕ್ಕೆ ಸಿಲುಕುತ್ತಾರೆ. ಬಾಲ್ ನಿಭಾಯಿಸುವಿಕೆಯಲ್ಲಿ ಗೊಂದಲಕ್ಕೆ ಬೀಳುತ್ತಾರೆ. ಆದರೆ ತಿಲಕ್ ಕ್ರೀಸ್‌ನ ಬಳಕೆ, ಫುಟ್‌ವರ್ಕ್ ಮತ್ತು ಲೆಗ್‌ಸೈಡ್ ಮೇಲಿನ ನಿಯಂತ್ರಣದಿಂದ ಸ್ಪಿನ್ನರ್‌ಗಳನ್ನು ಒತ್ತಡಕ್ಕೆ ತಳ್ಳುತ್ತಾರೆ. ಇದು ಇವರ ಆಟದ ವೈಖರಿ. ಇದು ಭವಿಷ್ಯದಲ್ಲಿ ಟಿ20 ಮಾತ್ರವಲ್ಲ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಯಶಸ್ಸಿಗೆ ಮೆಟ್ಟಿಲಾಗಬಲ್ಲದು.
ಆದರೆ ಅವರ ಆಟದಲ್ಲಿ ಇನ್ನೂ ಸುಧಾರಿಸಬೇಕಾದ ಅಂಶಗಳು ಇವೆ. ಕೆಲ ಪ್ರಮುಖ ಪಂದ್ಯಗಳಲ್ಲಿ ಒಳ್ಳೆಯ ಆರಂಭವನ್ನು ದೊಡ್ಡ ಶತಕ ಅಥವಾ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. 30-40 ರನ್‌ಗಳ ನಂತರ ವಿಕೆಟ್ ಒಪ್ಪಿಸುವ ಪ್ರವೃತ್ತಿ ಕಡಿಮೆಯಾಗಬೇಕು. ವಿರಾಟ್ ಕೊಹ್ಲಿ ಅಥವಾ ಸೂರ್ಯಕುಮಾರ್ ಯಾದವ್ ಅಥವಾ ರೋಹಿತ್ ಶರ್ಮಾ ಮಟ್ಟದ ನಿರಂತರತೆ ತಲುಪಬೇಕಾದರೆ, ಉತ್ತಮ ಆರಂಭವನ್ನು ತಾಳ್ಮೆಯಿಂದ ತಣ್ಣಗೆ ನಿಭಾಯಿಸುವುದನ್ನು ಕಲಿಯಬೇಕು.

ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ, ತಿಲಕ್ ಅವರ ದೇಹಭಾಷೆ. ಒತ್ತಡದ ಸಂದರ್ಭಗಳಲ್ಲಿಯೂ ಗಾಬರಿಗೊಳ್ಳದ ಶಾಂತ ಮನಸ್ಥಿತಿ. ಇದು ಯುವ ಆಟಗಾರರಲ್ಲಿ ತೀರಾ ಅಪರೂಪ. ಇದೇ ಕಾರಣಕ್ಕೆ ತಂಡದ ಮ್ಯಾನೇಜ್‌ಮೆಂಟ್ ಅವರ ಮೇಲೆ ವಿಶ್ವಾಸ ಇಡುತ್ತಿದೆ. ಐಪಿಎಲ್ ಎನ್ನುವುದು ಕೇವಲ ಪ್ರತಿಭೆ ಪ್ರದರ್ಶನದ ವೇದಿಕೆ ಅಲ್ಲ; ಮನೋಬಲ, ನಿರ್ಧಾರ, ಸಾಮರ್ಥ್ಯ ಮತ್ತು ಒತ್ತಡ ನಿರ್ವಹಣೆಯ ಪರೀಕ್ಷೆ ಕೂಡ ಹೌದು. ಈ ಪರೀಕ್ಷೆಯಲ್ಲಿ ತಿಲಕ್ ಉತ್ತಮ ಅಂಕ ಗಳಿಸಿದ್ದಾರೆ.
ಒಟ್ಟಿನಲ್ಲಿ, ಈ ಐಪಿಎಲ್ ಸೀಸನ್‌ನಲ್ಲಿ ತಿಲಕ್ ವರ್ಮಾ ತಮ್ಮ ‘ಭವಿಷ್ಯ’ವನ್ನು ಭದ್ರಮಾಡಿಕೊಂಡಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್‌ನ ಮುಂದಿನ ಪ್ರಮುಖ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅದಕ್ಕೆ ತಿಲಕವಿಟ್ಟಂತೆ ಭಾರತ ‘ಎ’ ತಂಡಕ್ಕೆ ತಿಲಕ್ ವರ್ಮಾನನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಶ್ರೀಲಂತಾ ವಿರುದ್ಧ ಜೂನ್ 9ರಿಂದ ನಡೆಯಲಿರುವ ತ್ರಿಕೋನ ಏಕದಿನ ಸರಣಿ, ಈತನ ಪ್ರತಿಭೆಯನ್ನು ಒರೆಗೆ ಹಚ್ಚಲಿದೆ. ಅಕಸ್ಮಾತ್ ಕ್ಲಿಕ್ಕಾದರೆ, ಜೂನ್ 26ರಿಂದ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವ ಸೀನಿಯರ್ ತಂಡದಲ್ಲಿ ಸ್ಥಾನ ಗಳಿಸುವ ಸಾಧ್ಯತೆ ಇದೆ.

ಲೇಖಕ, ಪತ್ರಕರ್ತ



