ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೊಸಗದ್ದೆ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಹೊಸಗದ್ದೆಯ ನಿವಾಸಿ ಶ್ರೀಧರ್ ಪರಮೇಶ್ವರ ಹೆಗಡೆ ಎಂಬುವವರಿಗೆ ಸೇರಿದ ಕೊಟ್ಟಿಗೆಗೆ ನುಗ್ಗಿದ ಚಿರತೆ, ಅಲ್ಲಿ ಕಟ್ಟಿ ಹಾಕಿದ್ದ ಕರುವಿನ ಮೇಲೆ ದಾಳಿ ನಡೆಸಿದೆ.
ಮುಂಜಾನೆಯ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಚಿರತೆಯು ಕರುವಿನ ಅರ್ಧ ಭಾಗವನ್ನು ತಿಂದು ಹಾಕಿ ಪರಾರಿಯಾಗಿದೆ. ಈ ಭಾಗದಲ್ಲಿ ಚಿರತೆಯ ಉಪಟಳ ಹೆಚ್ಚಾಗಿದ್ದು, ಈಗಾಗಲೇ ಕಾನಸೂರು ಸೇರಿದಂತೆ ಸುತ್ತಮುತ್ತಲಿನ ಹಲವು ಕಡೆಗಳಲ್ಲಿ ಸಂಚರಿಸುತ್ತಿರುವ ಚಿರತೆಯು ಸಾಕು ಪ್ರಾಣಿಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಜೂನ್ 20ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; 12.30 ಲಕ್ಷ ಮತದಾರರ ವಿವರಗಳ ಮರುಪರಿಶೀಲನೆ
ಈ ಹಿಂದೆ ಕೂಡ ನಾಯಿಗಳು ಹಾಗೂ ದನಗಳ ಮೇಲೆ ದಾಳಿ ನಡೆಸಿರುವ ಘಟನೆಗಳು ವರದಿಯಾಗಿದ್ದು, ಇದೀಗ ಕರುವಿನ ಮೇಲೆ ನಡೆದಿರುವ ಈ ದಾಳಿಯಿಂದ ಗ್ರಾಮಸ್ಥರು ಭೀತಿಯಲ್ಲಿದ್ದಾರೆ. ತಮ್ಮ ಜಾನುವಾರುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಚಿರತೆಯನ್ನು ಸೆರೆಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





