17 ವರ್ಷದ ಎಸ್. ಅನಿತಾ ತನ್ನ ವೈದ್ಯಕೀಯ ಕನಸು ಭಗ್ನಗೊಂಡಿದ್ದನ್ನು ಸಹಿಸಲಾಗದೆ ನೇಣಿಗೆ ಶರಣಾಗಿದ್ದಳು. ಕೂಲಿ ಕಾರ್ಮಿಕನ ಮಗಳಾಗಿದ್ದ ಅನಿತಾ, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದ ತನ್ನ ತಾಯಿಯ ನೆನಪಿನಲ್ಲಿ ಬಡವರಿಗಾಗಿ ವೈದ್ಯೆಯಾಗುವ ಹಠ ತೊಟ್ಟಿದ್ದಳು. NEET ಪ್ರವೇಶಾತಿ ಕಡ್ಡಾಯದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕೆ ಸ್ವತಃ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಹೋರಾಡಿದಳು. ಆದರೆ ಸುಪ್ರೀಂ ತೀರ್ಪು ಆಕೆ ಎಣಿಸಿದಂತೆ ಬರಲಿಲ್ಲ. ಆತ್ಮಹತ್ಯೆಯ ಹಾದಿ ಹಿಡಿದಳು
ಅಂದು 2017ರ ಸೆಪ್ಟೆಂಬರ್ 1ನೇ ತಾರೀಕು. ಇಡೀ ದೇಶದ ಶೈಕ್ಷಣಿಕ ವಲಯದ ಕಣ್ಣು ತಮಿಳುನಾಡಿನತ್ತ ತಿರುಗಿತ್ತು. ಅರಿಯಾಲೂರು ಜಿಲ್ಲೆಯ ಮುರುಗನ್‌ಕುಡಿಕಾಡು ಎಂಬ ಸಣ್ಣ ಹಳ್ಳಿಯ ದಲಿತ ಹುಡುಗಿ, 17 ವರ್ಷದ ಎಸ್. ಅನಿತಾ ತನ್ನ ವೈದ್ಯಕೀಯ ಕನಸು ಭಗ್ನಗೊಂಡಿದ್ದನ್ನು ಸಹಿಸಲಾಗದೆ ನೇಣಿಗೆ ಶರಣಾಗಿದ್ದಳು. ಕೂಲಿ ಕಾರ್ಮಿಕನ ಮಗಳಾಗಿದ್ದ ಅನಿತಾ, ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದ ತನ್ನ ತಾಯಿಯ ನೆನಪಿನಲ್ಲಿ ಬಡವರಿಗಾಗಿ ವೈದ್ಯೆಯಾಗುವ ಹಠ ತೊಟ್ಟಿದ್ದಳು. NEET ಪ್ರವೇಶಾತಿ ಕಡ್ಡಾಯದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆಕೆ ಸ್ವತಃ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಹೋರಾಡಿದಳು. ಆದರೆ ಸುಪ್ರೀಂ ತೀರ್ಪು ಆಕೆ ಎಣಿಸಿದಂತೆ ಬರಲಿಲ್ಲ. ಆತ್ಮಹತ್ಯೆಯ ಹಾದಿ ಹಿಡಿದಳು. ಆಕೆಯ ಸಾವು ಇಡೀ ದೇಶದಲ್ಲಿ ಮನೆ ಮಾಡಿಕೊಂಡಿರುವ ಶೈಕ್ಷಣಿಕ ಪಿಡುಗಿನ ವಿರುದ್ಧದ ಹೋರಾಟದ ಭಾಗವಾಗಿ ನೆನಪಾಗುತ್ತಲೇ ಇರುತ್ತದೆ. ಇದು ಅಲ್ಲಿಗೇ ನಿಂತಿಲ್ಲ. ಇಂದಿಗೂ ಮುಂದುವರೆದಿದೆ. ಈ NEET ಎನ್ನುವ ಬಲಿಪೀಠ ಆವಾಹನೆ ಮಾಡಿಕೊಂಡು ಬಲಿಪಡೆ ವಿದ್ಯಾರ್ಥಿಗಳ ಕಥೆ, ವ್ಯವಸ್ಥೆಯ ವೈಫಲ್ಯ ಚರ್ಚಾಯೋಗ್ಯ.
ಭಾರತದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಆಯಾ ರಾಜ್ಯಗಳ ಪ್ರಾದೇಶಿಕ ಪಠ್ಯಕ್ರಮದಲ್ಲಿ ಮತ್ತು ಮಾತೃಭಾಷೆಯಲ್ಲೇ (ಅನಿತಾದು ತಮಿಳು) ಕಲಿಯುತ್ತಾರೆ. ಆದರೆ ಕೇಂದ್ರದ ಸಿಬಿಎಸ್‌ಇ ಪಠ್ಯಕ್ರಮವು ಕೇವಲ ಹಿಂದಿ ಅಥವಾ ಇಂಗ್ಲಿಷ್ ಭಾಷೆಯ ಬೋಧನೆಯನ್ನು ಬಯಸುತ್ತದೆ, ಇದು ತಮಿಳುನಾಡಿನ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಅಪರಿಚಿತ. ಈ ಭಾಷೆ ಹಾಗೂ ಪಠ್ಯಕ್ರಮದ ತಾರತಮ್ಯದ ನಡುವೆಯೇ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ವೈದ್ಯಕೀಯ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ಕಡ್ಡಾಯಗೊಳಿಸಿತು. ತಮಿಳುನಾಡಿನಲ್ಲಿ ಪರೀಕ್ಷೆ ಬರೆದ ಶೇ. 88 ರಷ್ಟು ವಿದ್ಯಾರ್ಥಿಗಳು ರಾಜ್ಯ ಪಠ್ಯಕ್ರಮದಲ್ಲಿ ಓದಿದವರಾಗಿದ್ದರೂ, ನೀಟ್ ಪರೀಕ್ಷೆಯಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಪ್ರಶ್ನೆಗಳನ್ನು ಕೇಳಲಾಗಿತ್ತು.
ನೀಟ್ ಫಲಿತಾಂಶ ಬಂದಾಗ ಅನಿತಾ ವೈದ್ಯಕೀಯ ಸೀಟು ಪಡೆಯಲು ಅಗತ್ಯವಿರುವ ಅಂಕ ಗಳಿಸಲು ವಿಫಲಳಾಗಿದ್ದಳು (ಒಂದು ವೇಳೆ ರಾಜ್ಯ ಮಂಡಳಿಯ ಅಂಕಗಳನ್ನೇ ಪರಿಗಣಿಸಿದ್ದರೆ ಆಕೆಗೆ ಸುಲಭವಾಗಿ ಸೀಟು ಸಿಗುತ್ತಿತ್ತು). ಆಕೆಗೆ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚಿತ ಸೀಟು ಸಿಗುತ್ತಿದ್ದರೂ, ಆಕೆ ಅದನ್ನು ನಿರಾಕರಿಸಿದಳು. ವೈದ್ಯಕೀಯ ಸೀಟಿಗಾಗಿ ಹೋರಾಡಿದಳು. ರಾಜಕಾರಣಿಗಳನ್ನು ಭೇಟಿಯಾಗಿ ಮನವಿ ಮಾಡಿದಳು. ನೀಟ್ ಪರೀಕ್ಷೆ ಹೇಗೆ ದಲಿತ ಹಾಗೂ ಆದಿವಾಸಿ ವಿದ್ಯಾರ್ಥಿಗಳನ್ನು ವ್ಯವಸ್ಥಿತವಾಗಿ ಗುರಿಮಾಡುತ್ತಿದೆ ಎಂದು ಆಂದೋಲನ ನಡೆಸಿದಳು. ಆದರೆ, 2017 ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ನೀಟ್ ವ್ಯವಸ್ಥೆಯನ್ನೇ ಎತ್ತಿಹಿಡಿದಾಗ ಆಕೆಯ ತಾಳ್ಮೆ ಮತ್ತು ನಿರೀಕ್ಷೆಯ ಗೋಡೆ ಕುಸಿದುಬಿದ್ದಿತ್ತು. ತನ್ನ ಹತೋಟಿಯಲ್ಲಿಲ್ಲದ ಕ್ರೂರ ವ್ಯವಸ್ಥೆಯ ಕಾರಣದಿಂದಾಗಿ ಆಕೆಯ ಕನಸು ಭಗ್ನಗೊಂಡಿತ್ತು!

ತಮಿಳುನಾಡು ಮೊದಲಿನಿಂದಲೂ ನೀಟ್ ಪರೀಕ್ಷೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿದೆ. ನೀಟ್ ಜಾರಿಗೆ ಬರುವ ಮುನ್ನ ತಮಿಳುನಾಡಿನಲ್ಲಿ 12ನೇ ತರಗತಿಯ (+2) ಅಂಕಗಳ ಆಧಾರದ ಮೇಲೆಯೇ ವೈದ್ಯಕೀಯ ಸೀಟುಗಳನ್ನು ಹಂಚಲಾಗುತ್ತಿತ್ತು. ಇದರಿಂದಾಗಿ ಪ್ರಾದೇಶಿಕ ಭಾಷೆಯಲ್ಲೇ ಓದಿದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟುಗಳು ಸುಲಭವಾಗಿ ಸಿಗುತ್ತಿದ್ದವು. ಆದರೆ, ನೀಟ್ ಕಡ್ಡಾಯವಾದ ನಂತರ ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಓದಿದ ನಗರ ಪ್ರದೇಶದ ವಿದ್ಯಾರ್ಥಿಗಳ ಕೈ ಮೇಲಾಗುತ್ತಿದೆ. ತಮಿಳುನಾಡು ಸರ್ಕಾರ ನೇಮಿಸಿದ್ದ ಜಸ್ಟಿಸ್ ಪಿ.ಕೆ. ರಾಜನ್ ಸಮಿತಿಯ ವರದಿಯು ಸಹ ಇದನ್ನೇ ಸ್ಪಷ್ಟಪಡಿಸಿದ್ದು, ನೀಟ್ ಪರೀಕ್ಷೆಯು ಕೇವಲ ಶ್ರೀಮಂತ ಮತ್ತು ನಗರದ ವಿದ್ಯಾರ್ಥಿಗಳಿಗೆ ಮಾತ್ರ ವರದಾನವಾಗಿದೆ ಎಂದು ವರದಿ ತಿಳಿಸಿತ್ತು. ಈ ಸಾಮಾಜಿಕ ಅನ್ಯಾಯದ ವಿರುದ್ಧ ತಮಿಳುನಾಡು ವಿಧಾನಸಭೆಯು ನೀಟ್ ಪರೀಕ್ಷೆಯಿಂದ ರಾಜ್ಯಕ್ಕೆ ವಿನಾಯಿತಿ ನೀಡಬೇಕು ಎಂದು ಕೋರಿ ಹಲವು ಬಾರಿ ಸರ್ವಾನುಮತದ ವಿಧೇಯಕವನ್ನು ಅಂಗೀಕರಿಸಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸುವ ಮೂಲಕ ನಿರಂತರ ಶಾಸನಾತ್ಮಕ ಹೋರಾಟ ನಡೆಸುತ್ತಿದೆ.
ಮತ್ತೊಂದೆಡೆ, ನೀಟ್ ಪರೀಕ್ಷೆಯು ದೇಶದಲ್ಲಿ ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಬೃಹತ್ “ಕೋಚಿಂಗ್ ಉದ್ಯಮ” ಸೃಷ್ಟಿಯಾಗಲು ಕಾರಣವಾಗಿದೆ. ರಾಜಸ್ಥಾನದ ಕೋಟಾ, ಬಿಹಾರದ ಪಾಟ್ನಾ ಅಥವಾ ಕರ್ನಾಟಕದ ಪ್ರಮುಖ ನಗರಗಳಲ್ಲಿ ನೀಟ್ ಕೋಚಿಂಗ್ ಪಡೆಯಲು ವಾರ್ಷಿಕ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದ್ದು, ಇದು ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಭರಿಸಲಾಗದ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಕೇವಲ ಮೂರು ಗಂಟೆಯ ಈ ಪರೀಕ್ಷೆಗಾಗಿ ವಿದ್ಯಾರ್ಥಿಗಳು ತಮ್ಮ ಜೀವನದ ಎರಡು-ಮೂರು ವರ್ಷಗಳ ಕಾಲ ಕೋಚಿಂಗ್ ಸೆಂಟರ್‌ಗಳಲ್ಲಿ, ತೀವ್ರ ಸ್ಪರ್ಧೆ ಮತ್ತು ಮಾನಸಿಕ ಒತ್ತಡದ ನಡುವೆ ಕಳೆಯಬೇಕಾಗಿದೆ. ಈ ಅತಿಯಾದ ನಿರೀಕ್ಷೆ ಮತ್ತು ಒತ್ತಡವನ್ನು ತಡೆಯಲಾರದೆ, ಕೋಟಾ ಒಂದರಲ್ಲೇ ಪ್ರತಿವರ್ಷ ಹತ್ತಾರು ಅಮಾಯಕ ವಿದ್ಯಾರ್ಥಿಗಳು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ.
ಇಷ್ಟೆಲ್ಲಾ ಕಷ್ಟಗಳ ನಡುವೆ ನಡೆಸಲಾಗುವ ಈ ಪರೀಕ್ಷೆಯ ಪಾರದರ್ಶಕತೆಯೇ ಈಗ ದೊಡ್ಡ ಪ್ರಶ್ನೆಯಾಗಿದೆ. ಪ್ರಸ್ತುತ ದೇಶಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಗಳಿಗೆ NTA ನಡೆಸಿದ ಪರೀಕ್ಷೆಯ ತಾಂತ್ರಿಕ ಲೋಪಗಳು ಮತ್ತು ಭ್ರಷ್ಟಾಚಾರವೇ ಕಾರಣವಾಗಿದೆ. ಬಿಹಾರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಪರೀಕ್ಷೆಗೆ ಮುನ್ನವೇ ಕೋಟ್ಯಂತರ ರೂಪಾಯಿಗೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಒಂದೇ ಪರೀಕ್ಷಾ ಕೇಂದ್ರದ ಹಲವು ಅಭ್ಯರ್ಥಿಗಳು ಸೇರಿದಂತೆ ದೇಶಾದ್ಯಂತ ಒಟ್ಟು 67 ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಗಳಿಸಿರುವುದು ಅಂಕಗಳ ಅಕ್ರಮವನ್ನೂ ಎತ್ತಿ ತೋರಿಸುತ್ತದೆ. ಜೊತೆಗೆ, ಸಮಯದ ನಷ್ಟದ ನೆಪವೊಡ್ಡಿ NTA ಸುಮಾರು 1,563 ವಿದ್ಯಾರ್ಥಿಗಳಿಗೆ ಅಸಮರ್ಪಕವಾಗಿ ಕೃಪಾಂಕಗಳನ್ನು ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿ, ನಂತರದ ಆಕ್ರೋಶಕ್ಕೆ ಹೆದರಿ ಅದನ್ನು ರದ್ದುಪಡಿಸಲಾಯಿತು.
ಇನ್ನು ನೀಟ್ ಬಲಿಪಡೆದ ಅನಿತಾಳ ಕಥೆಗೆ ಬಂದರೆ, ಆಕೆಯ ಸಾವಿನ 9 ವರ್ಷಗಳ ಬಳಿಕವೂ ವ್ಯವಸ್ಥೆ ಸುಧಾರಿಸಿಲ್ಲ. ಮತ್ತಷ್ಟು ಭ್ರಷ್ಟಗೊಂಡಿದೆ ಎಂಬುದಕ್ಕೆ ಪ್ರಸ್ತುತ ದೇಶ ಎದುರಿಸುತ್ತಿರುವ ನೀಟ್-ಯುಜಿ ಹಗರಣವೇ ಸಾಕ್ಷಿ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸಿದ ಪರೀಕ್ಷೆಯಲ್ಲಿ ವ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬರೆ ಎಳೆದು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಸದ್ಯ ಸಿಬಿಐ ತನಿಖೆ ನಡೆಯುತ್ತಿದ್ದು, ಜೂನ್ 21 ರಂದು ಮರುಪರೀಕ್ಷೆ ಯೋಜಿಸಲಾಗಿದೆ. ಆದರೆ, ಈ ಮಹಾಮಾರಿ ಅಮಾಯಕ ವಿದ್ಯಾರ್ಥಿಗಳನ್ನು ಬಲಿಪಡೆಯುತ್ತಿರುವುದು ಇನ್ನೂ ನಿಂತಿಲ್ಲ!
ಇತ್ತೀಚಿನ ಪರೀಕ್ಷಾ ಅಕ್ರಮ ಮತ್ತು ಪರೀಕ್ಷೆ ರದ್ದತಿಯ ಅನಿಶ್ಚಿತತೆಗೆ ಸಿಲುಕಿ ದೇಶದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಅಡುಗೆ ಕೆಲಸಗಾರರೊಬ್ಬರು ತಮ್ಮ ಮಗಳು 18 ವರ್ಷದ ಆಕಾಂಕ್ಷಾಳನ್ನು ಸಾಲ ಮಾಡಿ ಓದಿಸುತ್ತಿದ್ದರು. ಮೊದಲ ಯತ್ನದಲ್ಲೇ ಉತ್ತಮವಾಗಿ ಪರೀಕ್ಷೆ ಬರೆದಿದ್ದ ಆಕಾಂಕ್ಷಾ, ತನಗೆ ಸೀಟು ಸಿಗುವ ಭರವಸೆಯಲ್ಲಿದ್ದಳು. ಆದರೆ ಪೇಪರ್ ಲೀಕ್ ಆಗಿ ಪರೀಕ್ಷೆ ರದ್ದಾದ ಸುದ್ದಿ ಕೇಳಿ ತೀವ್ರ ಖಿನ್ನತೆಗೆ ಒಳಗಾದ ಆಕೆ, ಮೇ.20 ರಂದು ಆತ್ಮಹತ್ಯೆ ಮಾಡಿಕೊಂಡಳು. ಆಕೆ ಬರೆದ ಡೆತ್‌ನೋಟ್‌ನಲ್ಲಿ “ಅಮ್ಮ-ಅಪ್ಪ, ನಿಮ್ಮ ಮಗಳು ವೈದ್ಯೆಯಾಗುತ್ತಾಳೆ ಎಂಬ ನಂಬಿಕೆ ನಿಮಗಿತ್ತು. ಆದರೆ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯ ನನಗಿಲ್ಲ. ನನ್ನನ್ನು ಕ್ಷಮಿಸಿ…” ಎಂದು ಬರೆದು ಕಣ್ಮುಚ್ಚಿದ್ದಳು.

ರಾಜಸ್ಥಾನದ ಝುಂಜುನು ಜಿಲ್ಲೆಯ ಪ್ರದೀಪ್ ಮಹೀಚ್ ಎಂಬ ವಿದ್ಯಾರ್ಥಿ ಸೀಕರ್‌ನಲ್ಲಿ ಕಳೆದ ಮೂರು ವರ್ಷಗಳಿಂದ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಮೇ.3 ರಂದು ನಡೆದಿದ್ದ ಪರೀಕ್ಷೆಯಲ್ಲಿ ಆತ 650ಕ್ಕೂ ಹೆಚ್ಚು ಅಂಕಗಳನ್ನು ನಿರೀಕ್ಷಿಸುತ್ತಿದ್ದ ಮತ್ತು ಸರ್ಕಾರಿ ಸೀಟು ಸಿಗುವ ಸಂಪೂರ್ಣ ವಿಶ್ವಾಸದಲ್ಲಿದ್ದ. ಆದರೆ ಪರೀಕ್ಷೆ ರದ್ದತಿಯ ನಿರ್ಧಾರ ಆತನನ್ನು ತೀವ್ರ ಆಘಾತಕ್ಕೆ ತಳ್ಳಿದ್ದರಿಂದ ಆತ ಜೂನ್ ಮೊದಲ ವಾರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದ ಲಖಿಂಪುರ ಖೇರಿಯ ಋತಿಕ್ ಮಿಶ್ರಾ ಎಂಬ ವಿದ್ಯಾರ್ಥಿ ಕೂಡ ನೀಟ್ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾಗ, ಪರೀಕ್ಷಾ ಅಕ್ರಮದ ವಿವಾದಗಳು ಮತ್ತು ರದ್ದತಿಯಿಂದ ಉಂಟಾದ ಮಾನಸಿಕ ಒತ್ತಡವನ್ನು ತಡೆಯಲಾರದೆ ತನ್ನ ಜೀವನ ಕೊನೆಗೊಳಿಸಿಕೊಂಡಿದ್ದಾನೆ.
ಇದನ್ನೂ ಓದಿಭಾರತದ ಮೆಗಾ ಪ್ರಾಜೆಕ್ಟ್‌ಗಳು ಮತ್ತು ಪರಿಸರದ ಆಹುತಿ!
ವಿದ್ಯಾರ್ಥಿಗಳ ಸಾಲು ಸಾಲು ಸಾವುಗಳು ದೇಶದಲ್ಲಿ ಸಾಮಾಜಿಕ ಆಕ್ರೋಶಕ್ಕೆ ಕಾರಣವಾಗಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. “ಇದು ವಿದ್ಯಾರ್ಥಿಗಳ ಆತ್ಮಹತ್ಯೆಯಲ್ಲ, ಬದಲಿಗೆ ಕಳೆದ 12 ವರ್ಷಗಳಿಂದ ಮೋದಿ ಸರ್ಕಾರ ಸಂಪೂರ್ಣವಾಗಿ ಹಾಳುಗೆಡವಿರುವ ಭ್ರಷ್ಟ ಮತ್ತು ಮುರಿದುಬಿದ್ದ ಶೈಕ್ಷಣಿಕ ವ್ಯವಸ್ಥೆ ಮಾಡಿರುವ ಕೊಲೆ” ಎಂದು ಅವರು ಆರೋಪಿಸಿದ್ದಾರೆ. ಇಷ್ಟೆಲ್ಲಾ ದುರಂತಗಳು ಸಂಭವಿಸಿದರೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನದಲ್ಲೇ ಮುಂದುವರೆದು ತಮ್ಮ ಹೊಣೆಗೇಡಿತನವನ್ನ ತಾವೇ ಪ್ರದರ್ಶಿಸಿಕೊಂಡಿದ್ದಾರೆ.
2017 ರಲ್ಲಿ ಅನಿತಾ ಬಡತನ ಮತ್ತು ಕೋಚಿಂಗ್ ಪಡೆಯಲಾಗದೆ ವ್ಯವಸ್ಥೆಗೆ ಬಲಿಯಾದರೆ, 2026 ರಲ್ಲೂ ಸರ್ಕಾರದ ಭ್ರಷ್ಟಾಚಾರ ಮತ್ತು ಪೇಪರ್ ಲೀಕ್‌ನಿಂದಾಗಿ ಬಡ ರೈತರ ಮಕ್ಕಳ ಕನಸುಗಳಿಗೆ ಬೆಂಕಿ ಬೀಳುತ್ತಿದೆ. ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸಲಾಗದ, ಪಾರದರ್ಶಕತೆ ಕಾಪಾಡಲಾಗದ (ತಂತ್ರಜ್ಞಾನದ!) ಯುಗದಲ್ಲಿ ವಿದ್ಯಾರ್ಥಿಗಳ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮರುಪರೀಕ್ಷೆಗಳನ್ನು ನಡೆಸುವುದು ಪರಿಹಾರವಲ್ಲ; ಇಡೀ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸದಿದ್ದರೆ ಭಾರತದ ಭವಿಷ್ಯದ ಆಧಾರಗಳು ಬೀದಿಯಲ್ಲಿ ಹೆಣವಾಗುವುದನ್ನು ತಡೆಯಲು ಸಾಧ್ಯವಿಲ್ಲ.





