ತಮಿಳುನಾಡು ರಾಜಕಾರಣದಲ್ಲಿ ಕಳೆದ 6 ವರ್ಷಗಳಿಂದ ಬಿಜೆಪಿಯ ಅತ್ಯಂತ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಹೊಸ ರಾಜಕೀಯ ಚಳವಳಿಯೊಂದನ್ನು ಪ್ರಕಟಿಸಿರುವ ಅವರು, ಇದು ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ರೂಪಾಂತರಗೊಂಡು 2031ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.
ಸುದೀರ್ಘ ಆನ್‌ಲೈನ್‌ನಲ್ಲಿ ನಿರ್ಧಾರ ಪ್ರಕಟಿಸಿರುವ ಅಣ್ಣಾಮಲೈ, ತಮ್ಮ ರಾಜೀನಾಮೆ ತತ್‌ಕ್ಷಣದ ನಿರ್ಧಾರವಲ್ಲ, ಬದಲಿಗೆ ಸುದೀರ್ಘ ಆಂತರಿಕ ಚಿಂತನೆಯ ಫಲವಾಗಿದೆ ಎಂದಿದ್ದಾರೆ.
“ನಾನು 2024ರ ಡಿಸೆಂಬರ್ 4ರಂದೇ ಬಿಜೆಪಿಗೆ ನನ್ನ ನಿರ್ಧಾರವನ್ನು ತಿಳಿಸಿದ್ದೆ. ಆದರೆ, ಪಕ್ಷದ ನಾಯಕತ್ವವು ಚುನಾವಣಾ ಕೆಲಸಗಳನ್ನು ಮುಗಿಸಿ ನಂತರ ನಿರ್ಗಮಿಸುವಂತೆ ಕೋರಿತ್ತು” ಎಂದು ಅವರು ಬಹಿರಂಗಪಡಿಸಿದ್ದಾರೆ.
ಸಿಎಂ ಸಿ. ಜೋಸೆಫ್ ವಿಜಯ್ ಅವರ ಉದಯ ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ದುರ್ಬಲಗೊಳ್ಳುವಿಕೆಯಿಂದಾಗಿ ತಮಿಳುನಾಡು ರಾಜಕೀಯದಲ್ಲಿ ಭಾರಿ ಬದಲಾವಣೆಗಳ ಗಾಳಿ ಬೀಸುತ್ತಿರುವ ಬೆನ್ನಲ್ಲೇ ಅಣ್ಣಾಮಲೈ ಅವರ ಈ ನಿರ್ಧಾರ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಅಣ್ಣಾಮಲೈ ಅವರು ‘ವಿ ದ ಲೀಡರ್ಸ್’ (We The Leaders) ಸಂಘಟನೆಯನ್ನು 2020ರಲ್ಲೇ ಆರಂಭಿಸಿದ್ದರು. ಕೊಯಮತ್ತೂರಿನಲ್ಲಿ ‘ಎ ಪಿ ಜೆ ಅಬ್ದುಲ್ ಕಲಾಂ ನೀತಿ ಮತ್ತು ರಾಜಕಾರಣ ಕೇಂದ್ರ’ವನ್ನು ಸ್ಥಾಪಿಸಿ, ಅಲ್ಲಿ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಹೊಸ ರಾಜಕೀಯ ಆಕಾಂಕ್ಷಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಹೊಸ ರಾಜಕೀಯ ಸಿದ್ಧಾಂತದ ಬಗ್ಗೆ ಮಾತನಾಡಿದ ಅಣ್ಣಾಮಲೈ, ತಮಿಳುನಾಡಿನಲ್ಲಿರುವ ವ್ಯಕ್ತಿ ಆರಾಧನೆಯ (ಸಂಸ್ಕೃತಿಯಿಂದ ಹೊರಬಂದು, ‘ಸಾಮಾನ್ಯ ಜನರ ರಾಜಕಾರಣ’ವನ್ನು ಉತ್ತೇಜಿಸುವುದಾಗಿ ತಿಳಿಸಿದರು. ಅಲ್ಲದೆ, ತಮ್ಮ ಭಾವೀ ಪಕ್ಷದಲ್ಲಿ ನಾಯಕರಿಗೆ ಅವಧಿ ಮಿತಿಯನ್ನು ತರುವುದಾಗಿ ಘೋಷಿಸಿರುವ ಅವರು, ಶಾಶ್ವತ ನಾಯಕರು, ಶಾಶ್ವತ ಶಾಸಕರು ಅಥವಾ ಸಂಸದರ ಸಂಸ್ಕೃತಿಗೆ ಮುಕ್ತಿ ಹಾಡುವುದಾಗಿ ಹೇಳಿದ್ದಾರೆ.
ತಾವು 2020ರಲ್ಲಿ ಬಿಜೆಪಿ ಸೇರಿದ ಹಿನ್ನೆಲೆಯನ್ನು ನೆನಪಿಸಿಕೊಂಡ ಅವರು, ತಾವು ಬಿಜೆಪಿ ಸೇರುವ ಒಂದು ದಿನ ಮುನ್ನ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಸ್ವತಃ ಕರೆ ಮಾಡಿ ತಮ್ಮ ರಾಜಕೀಯ ಚಳವಳಿಗೆ ಸೇರುವಂತೆ ಆಹ್ವಾನಿಸಿದ್ದರು ಎಂದು ತಿಳಿಸಿದ್ದಾರೆ.
“ಆ ಸಮಯದಲ್ಲಿ ರಜನಿಕಾಂತ್ ಅವರು ದೆಹಲಿಯಿಂದ ಮರಳಿ ಬಂದು ತಮ್ಮೊಂದಿಗೆ ಕೈಜೋಡಿಸಲು ಕೋರಿದ್ದರು. ಆದರೆ ನಾನು ಈಗಾಗಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಮಾತು ಕೊಟ್ಟಿದ್ದೆ. ಕೊಟ್ಟ ಮಾತನ್ನು ಮುರಿಯಬಾರದು ಎಂಬ ಕಾರಣಕ್ಕೆ ರಜನಿಕಾಂತ್ ಅವರ ಆಹ್ವಾನವನ್ನು ನಿರಾಕರಿಸಿದ್ದೆ” ಎಂದಿದ್ದಾರೆ.
ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಯಾವುದೇ ವೈಯಕ್ತಿಕ ವಾಗ್ದಾಳಿ ನಡೆಸದೆ, ತಮಿಳುನಾಡಿನ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಕಳೆದ 18 ತಿಂಗಳುಗಳಿಂದ ಪಕ್ಷದ ನಾಯಕತ್ವದೊಂದಿಗೆ ತಮಗಿದ್ದ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತದ ಮೆಗಾ ಪ್ರಾಜೆಕ್ಟ್‌ಗಳು ಮತ್ತು ಪರಿಸರದ ಆಹುತಿ!
ಮೇಕೆದಾಟು ಅಣೆಕಟ್ಟು ಯೋಜನೆ, ಮೀಥೇನ್ ಮತ್ತು ಹೈಡ್ರೋಕಾರ್ಬನ್ ಯೋಜನೆಗಳು ಹಾಗೂ ಭಾಷಾ ನೀತಿಯಲ್ಲಿ ತಾವು ತಮಿಳುನಾಡಿನ ಪರವಾಗಿಯೇ ನಿಂತಿದ್ದನ್ನು ಅವರು ನೆನಪಿಸಿಕೊಂಡು, “ನಾನು ಸಾಂಪ್ರದಾಯಿಕ ತಮಿಳು ಅಸ್ಮಿತೆಯುಳ್ಳ ಹೆಮ್ಮೆಯ ಭಾರತೀಯ” ಎಂದು ತಮ್ಮ ರಾಜಕೀಯ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ತರಾತುರಿಯಲ್ಲಿ ಬೇರೆ ಪಕ್ಷಗಳನ್ನು ತೊರೆದು ಬರುವುದು ಬೇಡ, ಸಂಘಟನೆಯನ್ನು ವ್ಯವಸ್ಥಿತವಾಗಿ ಕಟ್ಟುವವರೆಗೆ “ತಾಳ್ಮೆ, ತಾಳ್ಮೆ, ತಾಳ್ಮೆ” ಯಿಂದ ಇರುವಂತೆ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ತಮಿಳುನಾಡಿನಲ್ಲಿ ದೊಡ್ಡ ಕ್ರಾಂತಿ ಮತ್ತು ಬದಲಾವಣೆ ತಂದು, ಭಾರತ ದೇಶದೊಳಗೆ ತಮಿಳುನಾಡನ್ನು ಅಗ್ರಗಣ್ಯ ರಾಜ್ಯವನ್ನಾಗಿ ಮಾಡುವುದೇ ನಮ್ಮ ಏಕೈಕ ಗುರಿ” ಎಂದು ಹೇಳಿದ್ದಾರೆ.





