ಮೈಸೂರು ನಗರದ ಚಂಪ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾನೂನಿನ ಬಹುಮುಖ್ಯ ಆಯಾಮ ಸರಣಿ ಉಪನ್ಯಾಸ ಮಾಲಿಕೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಿರಿಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕೆ.ಕೆ. ಅಮರನಾಥ್, ಕಾನೂನು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ವಿದ್ಯಾರ್ಥಿ ದಿಸೆಯಲ್ಲಿಯೇ ಉತ್ತಮವಾದ ಅಧ್ಯಯನದಲ್ಲಿ ತೊಡಗಿದರೆ ಭವಿಷ್ಯ ಸುಂದರವಾಗಿರಲಿದೆ ಎಂದು ಸಲಹೆ ನೀಡಿದರು.
ಹಿಂದೆಲ್ಲಾ ಯಾವುದೇ ಆಯ್ಕೆಗಳು ಇಲ್ಲದೆ ಎಲ್ ಎಲ್ ಬಿ ಮಾಡುತ್ತಾರೆ ಎನ್ನುವ ವಾತಾವರಣ ಇತ್ತು. ಆದರೆ, ಈಗ ಕಾನೂನಿನ ವ್ಯಾಪ್ತಿ, ಮಹತ್ಚ ಸಾಕಷ್ಟು ವಿಶಾಲವಾಗಿದೆ. ವಿದ್ಯಾರ್ಥಿಯಾಗಿದ್ದಾಗಲೇ ಕಾಯ್ದೆಗಳ ಓದು, ಬರವಣಿಗೆ ಮನನ ಮಾಡುವುದರ ಮೂಲಕ ಕಾಯ್ದೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು. ಇದರಿಂದ ಮುಂದಿನ ವೃತ್ತಿ ಜೀವನ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರ ಮಟ್ಟದಿಂದ ತಾಲೂಕು ಮಟ್ಟದವರೆಗೂ ಕಾನೂನು ಸೇವಾ ಪ್ರಾಧಿಕಾರಗಳ ರಚನೆಯಾಗಿವೆ. ಮಹಿಳೆಯರು, ಮಕ್ಕಳು, ಎಸ್ಸಿ, ಎಸ್ಟಿ ಸಮುದಾಯ, ಅಸಹಾಯಕರು, ಬಡತನ ರೇಖೆಗಿಂತ ಕೆಳಗೆ ಇರುವ ಎಲ್ಲರಿಗೂ ಇಲ್ಲಿ ಉಚಿತ ಕಾನೂನಿನ ನೆರವು ದೊರೆಯಲಿದೆ. ಇದರ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಈಗಿನಿಂದಲೇ ಜನರಿಗೆ ಅನುಕೂಲ ಆಗುವ ರೀತಿಯ ಕೆಲಸಗಳನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೆ ಎಸ್ ಎಲ್ ಯು ಉಪ ಕುಲಪತಿ ಸಿ. ಬಸವರಾಜು ತಮ್ಮ ಅನುಪಸ್ಥಿತಿಯಲ್ಲಿ ಧ್ವನಿ ಸಂದೇಶ ಕಳಿಸಿ, ಸದ್ಯ ಜಾರಿಯಲ್ಲಿರುವ ಕಾನೂನುಗಳು, ಅವುಗಳ ಮಹತ್ವ ಸೇರಿ ಹಲವು ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಚಂಪ ಸ್ಕೂಲ್ ಆಫ್ ಲಾ ಕಾಲೇಜು ಸರಣಿ ಉಪನ್ಯಾಸ ಮಾಲಿಕೆ ಆರಂಭಿಸಿರುವುದು ಉತ್ತಮ ವಿಚಾರ ಎಂದು ಅಭಿನಂದಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ರಕ್ತದಾನಿ ದಿನ’ ಆಚರಣೆಗೆ ಮುಂದಾಗಬೇಕು: ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ
ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಆಸ್ಮತ್ತುನ್ನೀಸಾ, ಉಪನ್ಯಾಸಕ ಭರತ್ ರಾಜ್, ಸೇರಿದಂತೆ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ಇದ್ದರು.




