ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳನ್ನು ಸತ್ಕರಿಸಿ, ಗೌರವಿಸುವ ರಕ್ತದಾನಿಗಳ ಹಬ್ಬದಲ್ಲಿ ಮಾತನಾಡಿದ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ದಾನದಲ್ಲಿ ಅತ್ಯಂತ ಶ್ರೇಷ್ಠವಾದದ್ದು ರಕ್ತದಾನ. ಪ್ರಾಣ ಉಳಿಸುವ ಮಹತ್ ಕಾರ್ಯದಲ್ಲಿ ಭಾಗಿಯಾಗುವವವರ ಅನನ್ಯ ಕಾರ್ಯಕ್ಕೆ ‘ರಕ್ತದಾನಿ ದಿನ’ ಆಚರಣೆಯನ್ನು ರಾಜ್ಯ, ಕೇಂದ್ರ ಸರ್ಕಾರಗಳು ಹಮ್ಮಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್, ಬ್ಲಡ್ ಆನ್ ಕಾಲ್ ಕ್ಲಬ್ ಸಹಯೋಗದಲ್ಲಿ ಮೈಸೂರು ನಗರದ ಜೆಕೆ ಮೈದಾನದ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಮಂದಿ ರಕ್ತದಾನಿಗಳು ಭಾಗವಹಿಸಿದರು.
ಶ್ರೀರಂಗಪಟ್ಟಣದ ಚಂದ್ರವನ ಆಶ್ರಮ ಮತ್ತು ಬೇಬಿಮಠದ ಪೀಠಾಧಿಪತಿ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, “ಅನ್ನದಾಸೋಹಿಗಳಿಗೆ ‘ದಾಸೋಹ ದಿನ’ ಎಂದು ಮಾಡುತ್ತಿದ್ದೀರಿ, ಅಂತೆಯೇ ರಕ್ತದಾನ ಮಾಡುವವರಿಗೆ ‘ರಕ್ತದಾನಿ ದಿನ’ ಆಚರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಒಂದು ಜೀವ ಜೀವಂತವಾಗಿ ಇರಲು ರಕ್ತ ಅಷ್ಟೇ ಮುಖ್ಯವಾಗುತ್ತದೆ. ಇಂದು ಅನ್ನದಾನ ಶ್ರೇಷ್ಠದಾನ ಮಹಾದಾನ ಎನ್ನುತ್ತಾರೆ, ಅದು ನಿಜವೂ ಹೌದು. ನಮ್ಮ ಹೃದಯ ಒಂದು ಹನಿ ರಕ್ತ ಪಡೆದು ಅದನ್ನು ನಮ್ಮ ಎಲ್ಲಾ ಅಂಗಗಳಿಗೂ ಹಂಚಿಕೆ ಮಾಡುತ್ತದೆ. ಅಂತಹ ರಕ್ತವನ್ನು ಹೊರಗಿನಿಂದ ನೀಡುವ ರಕ್ತದಾನಿಗಳು ನಿಜವಾದ ಹೃದಯವಂತರಾಗಿದ್ದಾರೆ” ಎಂದರು.
ಬಹುಶಃ ಅನೇಕ ಟ್ರಸ್ಟ್ ಗಳು ನಮ್ಮಲ್ಲಿದ್ದು ಅವೆಲ್ಲವೂ ಹಣ ಹಾಗೂ ಹೆಸರು ಮಾಡುತ್ತಿವೆ. ಆದರೆ, ಸೇವೆ ಮಾಡುವ ನಿಟ್ಟಿನಲ್ಲಿ ಲಯನ್ಸ್, ಜೀವಧಾರ, ಕೆಎಂಪಿಕೆ ಟ್ರಸ್ಟ್ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಹಾಗೆಯೇ, ವಿಶ್ವಕ್ಕೆ ಕಾಳಜಿ ವ್ಯಕ್ತ ಪಡಿಸುವ ಯಾವುದಾದರೂ ದೇಶ ಇದ್ದರೆ ಅದು ಭಾರತ ಎಂದು ಹೇಳಿದರು.
ಶಾಸಕರಾದ ಕೆ. ಹರೀಶ್ ಗೌಡ ಮಾತನಾಡಿ, ನಾನು 18 ವರ್ಷಕ್ಕೂ ಮೊದಲೇ ನಮ್ಮಅಜ್ಜಿಗೆ ಮೊದಲನೇ ಬಾರಿಗೆ ರಕ್ತದಾನ ಮಾಡಿದ್ದೆ, ಅದಾದ ಬಳಿಕ ಕಾಲೇಜು ಸಮಯದಲ್ಲಿ 35ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದೇನೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಹೊದಿಕೆ ವಿತರಣೆ, ಆಹಾರ ವಿತರಣೆ, ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹೀಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ನೀಡುತ್ತಾ ಬಂದಿದ್ದಾರೆ. ಇವರೆಲ್ಲರ ಸೇವಾ ಕಾರ್ಯ ಒಮ್ಮೊಮ್ಮೆ ನನಗೂ ಪ್ರೇರಣೆಯಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಕೆ ಆರ್ ಪೇಟೆ | ಭ್ರಷ್ಟಾಚಾರ ತಡೆಗಟ್ಟುವಂತೆ ಆಗ್ರಹಿಸಿ ಏ.9ರಂದು ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ
ಕಾರ್ಯಕ್ರಮದಲ್ಲಿ ಡಿಸಿಪಿ ಕೆ.ಎಸ್. ಸುಂದರ್ ರಾಜ್, ಕಿರುತೆರೆ ನಟಿ ಮೀನಾಕ್ಷಿ, ವಿ. ಭೂಪೇಂದ್ರನ್, ಎಸ್. ಭಾಸ್ಕರ್ ರಾವ್, ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ಲಯನ್ಸ್ ಬ್ಲಡ್ ಸೆಂಟರ್ ಜೀವಾಧಾರ ಸಂಸ್ಥಾಪಕ ಟ್ರಸ್ಟಿ ಲಯನ್ ಮನೋಜ್ ಕುಮಾರ್, ಲಯನ್ಸ್ ಬ್ಲಡ್ ಸೆಂಟರ್ ಜೀವಾಧಾರ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಇ. ಗಿರೀಶ್, ಎಕ್ಸಿಕ್ಯೂಟಿವ್ ಟ್ರಸ್ಟಿ ಸಿ.ಜೆ. ಲಯನ್ ಮುತ್ತಣ್ಣ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕ ದೇವೇಂದ್ರ ಕುಮಾರ್, ಆನಂದ್ ಮಂದೂತ್ ಸೇರಿದಂತೆ ಇನ್ನಿತರರು ಇದ್ದರು.




