ದೇಶದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಬುನಾದಿಯಾಗಿದೆ. ಶಿಕ್ಷಣ ಬಗ್ಗೆ ಎಲ್ಲರಿಗೂ ಕಾಳಜಿ ಇತ್ತೀಚಿಗೆ ಇದ್ದರೂ ‘ಕಾಮನ್ ಸೆನ್ಸ್’ ಎಂಬ ಶಿಕ್ಷಣ ಮಕ್ಕಳಿಗೆ ಕಲಿಸುವ ವಿಚಾರದಲ್ಲಿ ಹಿಂದೆ ಇದ್ದೇವೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಾಲಾ ಪಠ್ಯ ಜೊತೆಗೆ ಹೊರಗಿನ ಪ್ರಪಂಚದ ಅರಿವು ಬೆಳೆಸಬೇಕು ಎಂದು ತುಮಕೂರು ಜಿಪಂ ಸಿಇಓ ಜಿ.ಪ್ರಭು ಕರೆ ನೀಡಿದರು.
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಕೆ.ಮತ್ತಿಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯ್ತಿ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಂಡಿಯಾ ಲಿಟ್ರಸಿ ಪ್ರಾಜಕ್ಟ್ ಮತ್ತು ಎಪ್ಸಾನ್ ಸಂಸ್ಥೆ ಆಯೋಜಿಸಿದ್ದ ಬಹು ಆಯಾಮ ಕಲಿಕಾ ಅಂಗಳದ ಮೂಲಕ ಸ್ಮಾರ್ಟ್ ಕ್ಲಾಸ್, ವಿಜ್ಞಾನ ಪ್ರಯೋಗ ಕಿಟ್ ಹಾಗೂ ಮಕ್ಕಳ ಸ್ನೇಹಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು ಯುವ ಜನಾಂಗದ ಸರಾಸರಿ ವಯಸ್ಸು ನಮ್ಮ ದೇಶದಲ್ಲಿ 27 ವರ್ಷ ಇರುವ ಕಾರಣ ಮಕ್ಕಳ ಶಿಕ್ಷಣ ರೂಪಿಸುವ ಬಗ್ಗೆ ಶಿಕ್ಷಕರು ಬದ್ಧತೆ ತೋರಬೇಕು ಎಂದರು.
ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿ ಮಾಡಬೇಕಿದೆ. ಪಠ್ಯ ಕ್ರಮದ ಭೋದನೆ ಮೀರಿ ಅನುಭವನಾತ್ಮಕ ಚಟುವಟಿಕೆ ಮಾತ್ರ ಮಕ್ಕಳಲ್ಲಿ ಬಹುಬೇಗ ಅಳವಡಿಕೆ ಆಗುತ್ತದೆ ಎಂಬ ಅಂಶವನ್ನು ಮಾನದಂಡ ಮಾಡಿಕೊಂಡ ಐ ಎಲ್ ಪಿ ಹಾಗೂ ಎಪ್ಸಾನ್ ಸಂಸ್ಥೆ ಹೊಸ ಪ್ರಯೋಗ ನಡೆಸಿದೆ. ಜಿಲ್ಲೆಯ 70 ಶಾಲೆಯಲ್ಲಿ ಬಹು ಆಯಾಮ ಕಲಿಕಾ ಅಂಗಳ ರಚಿಸಿ ಸ್ಮಾರ್ಟ್ ಕ್ಲಾಸ್ ನಡೆಸಿದ್ದಾರೆ. ಮಕ್ಕಳಿಗೆ ವಿಜ್ಞಾನ ಕಲಿಕೆಗೆ ಪ್ರಾಯೋಗಿಕ ತರಬೇತಿ ಹಾಗೂ ಪಠ್ಯ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸುವ ಗ್ರಂಥಾಲಯ ಮಕ್ಕಳ ಒಡನಾಟಕ್ಕೆ ಬಂದಿವೆ. ಈ ಕ್ರಮದಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ವೃದ್ಧಿಸುತ್ತದೆ ಎಂದರು.
ಜಿಲ್ಲೆಯಲ್ಲಿ ಎರಡು ಉಪ ನಿರ್ದೇಶಕರ ಅಡಿಯಲ್ಲಿ 5 ಸಾವಿರಕ್ಕೂ ಅಧಿಕ ಶಾಲೆ ನಡೆದಿದೆ. ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಯೋಗಿಕ ತರಬೇತಿ ಮೂಲಕ ಮಕ್ಕಳಲ್ಲಿ ಪ್ರವಚನ ಮಾಡಬೇಕು. ಶಾಲಾ ಆವರಣ ಹೊರತಾಗಿ ತಿಳಿದುಕೊಳ್ಳುವ ವಿಚಾರ ಮಕ್ಕಳಿಗೆ ನೈತಿಕ ಶಿಕ್ಷಣ ಒದಗಿಸುತ್ತದೆ ಎಂದ ಅವರು ಆಧುನಿಕತೆಗೆ ತಕ್ಕಂತೆ ಸ್ಮಾರ್ಟ್ ಕ್ಲಾಸ್ ಸ್ಕ್ರೀನ್ ಮೂಲಕ ಪಾಠಗಳು ಬೇಗ ಮನದಟ್ಟು ಆಗುತ್ತದೆ. ಬೋಧನೆ ಕೌಶಲ್ಯ ಮೊದಲು ಶಿಕ್ಷಕರು ರೂಢಿಸಿಕೊಳ್ಳಬೇಕು. ಈ ಜೊತೆಗೆ ಉಪ ನಿರ್ದೇಶಕರು ಸ್ಮಾರ್ಟ್ ಕ್ಲಾಸ್ ಬಗ್ಗೆ ಪ್ರತಿ ತಿಂಗಳು ಮಾಹಿತಿ ಪಡೆದು ಅಲ್ಲಿನ ಪರಿಕರಗಳು ಉಪಯೋಗ ಎಷ್ಟರ ಮಟ್ಟಿಗೆ ನಡೆದಿದೆ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಇದನ್ನು ಓದಿದ್ದೀರಾ? ರಾಯಚೂರು | ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ; ತಿಳಿಯದೆ ಮಣ್ಣು ಸುರಿದ ಜೆಸಿಬಿ; ಮಹಿಳೆ ಸಾವು
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಚಟುವಟಿಕೆ ಬಗ್ಗೆ ಪರಿಶೀಲನೆ ನಡೆಸಿದರು. ಡಿಡಿಪಿಐ ಮಂಜುನಾಥ್, ಬಿಇಓ ಪಾಲಾಕ್ಷಪ್ಪ, ಬಿಆರ್ ಸಿ ಮಧುಸೂದನ್, ಎಸ್ ಡಿಎಂಸಿ ಅಧ್ಯಕ್ಷ ಸೋಮು ಪ್ರಭುಸ್ವಾಮಿ, ಇಂಡಿಯಾ ಲಿಟ್ರೆಸಿ ಪ್ರಾಜೆಕ್ಟ್ ಟ್ರಸ್ಟಿ ಡಾ.ಎಚ್.ಎಸ್.ಸುಧೀರ, ಎಸ್ಪಾನ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ರಾಜೇಂದ್ರಕುಮಾರ್ ಸಿಂಗ್, ವಿನಾಯಕ, ಪ್ರಾಚಾರ್ಯ ವಾಸುದೇವ್, ಐಪಿಎಲ್ ಸಂಸ್ಥೆಯ ಹರೀಶ್, ಲಲಿತಾ, ಆನಂದ್, ಮುಖ್ಯ ಶಿಕ್ಷಕ ವಾಗೀಶ್ ಇತರರು ಇದ್ದರು.