ನಗರದಲ್ಲಿ ಬುಧವಾರ ಜಿಲ್ಲಾಡಳಿತ, ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ 800 ಮೀಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜ ಮೆರವಣಿಗೆ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಭಾರತೀಯರೆಲ್ಲರು ಒಂದೇ ಎಂಬ ಮನೋಭಾವನೆಯಿಂದ ದೇಶದ ಸುಸ್ಥಿರ ಅಭಿವೃದ್ಧಿಯತ್ತ ಸಾಗುವಲ್ಲಿ ಸಲ್ಲಿಸುವ ಸೇವೆಯು ಅಮೂಲ್ಯವಾದದ್ದು. ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ. ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ತುಂಬುವುದು ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಯಾವುದೇ ಭೇದ ಭಾವವಿಲ್ಲದೆ ಭಾವೈಕ್ಯತೆಯಿಂದ ಶ್ರಮಿಸಲು ಈ ಜಾಗೃತಿ ಜಾಥಾ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಈ ರೀತಿಯ ಜಾಥಾ ಕಾರ್ಯಕ್ರಮಗಳು ದೇಶದ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರಾಭಿಮಾನವನ್ನು ಪ್ರೇರೇಪಿಸುತ್ತದೆ. ಅದರಲ್ಲೂ ವಿದ್ಯಾರ್ಥಿ ಯುವಜನರಲ್ಲಿ ದೇಶಪ್ರೇಮ ಮತ್ತು ದೇಶಭಕ್ತಿಯನ್ನು ಜಾಗೃತಗೊಳಿಸುತ್ತದೆ. ರಾಷ್ಟ್ರದಲ್ಲಿ ಜೀವಿಸುವವರೆಲ್ಲರೂ ರಾಷ್ಟ್ರಕ್ಕೆ ಗೌರವ, ಘನತೆಯನ್ನು ತಂದು ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು. ಇಂದಿನ ಪೀಳಿಗೆಯವರಲ್ಲಿ ರಾಷ್ಟ್ರಾಭಿಮಾನವು ಮತ್ತಷ್ಟು ಹೆಚ್ಚಾಗಬೇಕು. ಅದು ಮುಂದಿನ ಪೀಳಿಗೆಗಳಿಗೆ ಹಸ್ತಾಂತರವಾಗಬೇಕು ಎಂದು ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಿಂದ ಆರಂಭವಾದ 800 ಮೀಟರ್ ಬೃಹತ್ ರಾಷ್ಟ್ರ ಧ್ವಜ ಮೆರವಣಿಗೆಯು, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜೂನಿಯರ್ ಕಾಲೇಜು ಮುಂಭಾಗದ ಬಲಮುರಿ ವೃತ್ತದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಧ್ವಜವನ್ನು ಹೊತ್ತು ಹೆಜ್ಜೆ ಹಾಕಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಕಾರಿನ ಗಾಜು ಹೊಡೆದು 2 ಲಕ್ಷ ರೂ. ದೋಚಿದ ಕಳ್ಳ ; ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ
ಮೆರವಣಿಗೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.