ತುಮಕೂರು | ₹119 ಕೋಟಿಯಷ್ಟು ಗ್ರಾ.ಪಂ. ಕರ ಬಾಕಿ; ಹೊಣೆ ಹೊರುವರೇ ಜಿ.ಪಂ ಸಿಇಓ?

Date:

ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳ ವ್ಯಾಪ್ತಿಯ 330 ಗ್ರಾಮ ಪಂಚಾಯತಿಗಳಲ್ಲಿ ₹119 ಕೋಟಿಯಷ್ಟು ಕರ ವಸೂಲಿಯಾಗದೆ ಬಾಕಿ ಉಳಿದಿದ್ದು, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಕುಂಠಿತವಾಗಿದೆ.

ಜಿಲ್ಲೆಯ ಒಟ್ಟು 330 ಗ್ರಾಮ ಪಂಚಾಯಿತಿಗಳಿಂದ ಸುಮಾರು ₹18.16 ಕೋಟಿಯಷ್ಟು ಮಾತ್ರ ಕಂದಾಯ ಸಂಗ್ರಹವಾಗಿದ್ದು, ₹119 ಕೋಟಿಗೂ ಅಧಿಕ ಹಣ ವಸೂಲಾಗದೆ ಬಾಕಿ ಉಳಿದಿದೆ. ಜೊತೆಗೆ 78 ಮಂದಿ ಕರ ವಸೂಲಿಗಾರರ ಹುದ್ದೆಗಳು ಖಾಲಿಯಿರುವುದು ಕಂದಾಯ ವಸೂಲಾಗದಿರುವುದಕ್ಕೆ ಪ್ರಮುಖ ಕಾರಣವಾಗಿದ್ದು, ಇದು ಅಭಿವೃದ್ಧಿಗೂ ತೊಡಕಾಗಿ ಪರಿಣಮಿಸಿದೆ.

  • ತಾಲೂಕುಗಳು                  ಕಂದಾಯ ಬಾಕಿ ಮೊತ್ತ             ಬೇಡಿಕೆ ಮೊತ್ತ
  • ಚಿಕ್ಕನಾಯಕನಹಳ್ಳಿ             ₹5.8 ಕೋಟಿ                           ₹1.77 ಕೋಟಿ
  • ಗುಬ್ಬಿ                                ₹7.44 ಕೋಟಿ                          ₹3.57 ಕೋಟಿ
  • ಕೊರಟಗೆರೆ                         ₹8.2ಕೋಟಿ                             ₹2.19 ಕೋಟಿ
  • ಕುಣಿಗಲ್                           ₹9.26 ಕೋಟಿ                          ₹4.18 ಕೋಟಿ
  • ಮಧುಗಿರಿ                           ₹7.20 ಕೋಟಿ                          ₹2.19ಕೋಟಿ
  • ಪಾವಗಡ                            ₹7.19 ಕೋಟಿ                         ₹2.62 ಕೋಟಿ
  • ಶಿರಾ                                  ₹13.21 ಕೋಟಿ                        ₹4.11 ಕೋಟಿ
  • ತಿಪಟೂರು                          ₹11.2 ಕೋಟಿ                         ₹3.39 ಕೋಟಿ 
  • ತುಮಕೂರು                         ₹22.19 ಕೋಟಿ                       ₹13.8 ಕೋಟಿ
  • ತುರುವೇಕೆರೆ                         ₹5.79 ಕೋಟಿ                          ₹2.24ಕೋಟಿ
  • ಒಟ್ಟು ಸಂಗ್ರಹ                     ₹18,16,62,443 
  • ಬಾಕಿ                                  ₹119,19,23,039 

ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು ₹18,16,62,443ರಷ್ಟು ಕಂದಾಯದ ಸಂಗ್ರಹವಾಗಿದ್ದು, ₹119,19,23,039ರಷ್ಟು ಬಾಕಿ ವಸೂಲಿಯಾಗದೆ ಹಾಗೇ ಉಳಿದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಟ್ಟಡಗಳ ತೆರಿಗೆ, ಕೃಷಿಯೇತರ ಸ್ಥಳಗಳ ತೆರಿಗೆ, ಸಿನಿಮಾ ಹೊರತುಡಿಸಿ ಇತರ ಮನೋರಂಜನಾ ಕಾರ್ಯಕ್ರಮಗಳ ತೆರಿಗೆ, ವಾಹನ ತೆರಿಗೆ, ಜಾಹೀರಾತು ತೆರಿಗೆ, ಗ್ರಾ.ಪಂ ಆಸ್ತಿ ಮಾರುವುದರಿಂದ ಬರುವ ಆದಾಯ, ಗ್ರಾಪಂ ಕಟ್ಟಡಗಳ ಬಾಡಿಗೆ, ಜಾತ್ರೆ ಶುಲ್ಕ, ಪರವಾನಗಿ ಶುಲ್ಕ, ನಿವೇಶನಗಳು ಮತ್ತು ಮನೆಗಳ ಮೇಲಿನ ತೆರಿಗೆ, ಒದಗಿಸುವ ಮೂಲ ಭೂತ ಸೌಕರ್ಯಗಳ ಮೇಲಿನ ಸುಂಕ ಗ್ರಾಮ ಪಂಚಾಯಿತಿಗಳ ಮುಖ್ಯ ಆದಾಯದ ಮೂಲಗಳಾಗಿವೆ.

ಪ್ರಭಾವ, ಒತ್ತಡ, ಕರ ವಸೂಲಿಗಾರರ ಖಾಲಿ ಹುದ್ದೆಗಳು ಮತ್ತು ಇತರೆ ಕಾರಣದಿಂದ ಸರ್ಕಾರಕ್ಕೆ ಬರಬೇಕಾದ ದೊಡ್ಡಮಟ್ಟದ ಕಂದಾಯದ ಹಣ ಸ್ಥಗಿತವಾಗಿದೆ. ತುಮಕೂರು ತಾಲೂಕು ಪಂಚಾಯಿತಿಗೆ ಒಳಪಡುವ ನಾಗವಲ್ಲಿ ಗ್ರಾ.ಪಂನಲ್ಲಿ ₹38.79 ಲಕ್ಷಕ್ಕೂ ಅಧಿಕ ಹಾಗೂ ಮಲ್ಲಸಂದ್ರ ಗ್ರಾ.ಪಂನಲ್ಲಿ ₹98.04 ಲಕ್ಷಕ್ಕೂ ಅಧಿಕ ಕಂದಾಯದ ಹಣ ವಸೂಲಿಯಾಗಿಲ್ಲ. ಪ್ರತಿಯೊಂದು ಪಂಚಾಯಿತಿಗಳಲ್ಲಿ ಲಕ್ಷಾಂತರ ರೂಪಾಯಿ ಕಂದಾಯ ಹಣ ಸಂಗ್ರಹವಾಗದೆ ಉಳಿದಿರುವುದಕ್ಕೆ ಈ ಎರಡು ಗ್ರಾ.ಪಂ.ಗಳು ಸಾಕ್ಷಿ ಎನ್ನಬಹುದು.

“ಪ್ರತಿ ಹಳ್ಳಿಗಳಲ್ಲಿರುವ ಬಹುಪಾಲು ಚಿಲ್ಲರೆ ಅಂಗಡಿ, ಹೋಟೆಲ್‌ಗಳಿಗೆ ಪರವಾನಗಿಯೇ ಇಲ್ಲ. ಪಂಚಾಯಿತಿಗಳಿಂದ ಅನುಮತಿಯನ್ನೂ ತೆಗೆದುಕೊಳ್ಳದೆ ವ್ಯಾಪಾರ, ವಹಿವಾಟು ನಡೆಸಲಾಗುತ್ತಿದೆ ಎಂಬುದು ಹೊಸ ವಿಚಾರವೇನಲ್ಲ. ಎಂಥದ್ದೇ ಒತ್ತಡ ಎದುರಾದರೂ ಕಾನೂನು ಪಾಲನೆ ಮಾಡಬೇಕಿರುವುದು ಅಧಿಕಾರಿಗಳ ಕರ್ತವ್ಯ. ಕಂದಾಯ ಕಟ್ಟದಿರುವ ನಿವೇಶನ, ಮನೆಗಳು, ಅಂಗಡಿ ಮಳಿಗೆಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿಯಾದರೂ ತೆರಿಗೆ ವಸೂಲು ಮಾಡಬೇಕು. ಅದಕ್ಕೂ ಬಗ್ಗದವರ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳಬೇಕು. ಇನ್ನೂ ಮೂಲ ಸೌಕರ್ಯಗಳನ್ನೇ ಕಾಣದ ಹಳ್ಳಿಗಳಿಗೆ ಸೌಲಭ್ಯಗಳನ್ನು ಒದಗಿಸಿ ಆದಾಯಕ್ಕೆ ದಾರಿ ಮಾಡಿಕೊಳ್ಳಬೇಕು” ಎಂಬುದು ಸಾರ್ವಜನಿಕರ ಅಭಿಪ್ರಾಯ.

“ಸಾರ್ವಜನಿಕರಿಂದ ವಿವಿಧ ರೀತಿಯ ತೆರಿಗೆ ಸಂಗ್ರಹಿಸಿ, ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಶಾಸನ ಬದ್ಧ ಅಧಿಕಾರವನ್ನು ಗ್ರಾಪಂಗಳು ಹೊಂದಿವೆ. ಆಯ-ವ್ಯಯ ಮಂಡಿಸುವ ಅಧಿಕಾರವೂ ಇವುಗಳಿಗಿದೆ. ಪಂಚಾಯತ್ ರಾಜ್ ಕಾಯ್ದೆಯ ಧ್ಯೇಯೋದ್ದೇಶಗಳು ನಿರೀಕ್ಷಿತ ಮಟ್ಟದಲ್ಲಿ ಸಫಲವಾಗದಿರುವುದಕ್ಕೆ ಅಶಿಸ್ತಿನ ಆಡಳಿತ ಕ್ರಮವೇ ಮುಖ್ಯ ಕಾರಣ. ಕಂದಾಯ ಸಂಗ್ರಹದಲ್ಲೂ ಇದು ಅನ್ವಯಿಕ.

“ಶಾಸಕರು ಹಾಗೂ ಸಂಸದರ ಚೇಲಾಗಳು ಅವರ ಪ್ರಭಾವಗಳನ್ನು ಬಳಸಿ ಕಂದಾಯ ಕಟ್ಟದೆ ತಪ್ಪಿಸಿಕೊಳ್ಳುತ್ತಿದ್ದಾರೆ. ವಸೂಲಾತಿಗೆ ಹೋದರೆ ಒತ್ತಡ ತರುತ್ತಾರೆ” ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಸಬೂಬು ನೀಡಿದ್ದಾರೆ.

“ಅಧಿಕಾರ ವಿಕೇಂದ್ರಿಕರಣದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳನ್ನು ಸ್ಥಳೀಯ ಸರ್ಕಾರಗಳೆಂದು ಕರೆಯಲಾಗುತ್ತದೆ. ಇವುಗಳೂ ತಮ್ಮದೇ ಆದ ಆಯವ್ಯಯ ಮಂಡಿಸುವ ಅಧಿಕಾರವನ್ನು ಹೊಂದಿರುತ್ತವೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಮೀಸಲಿರುಸುವ ಮತ್ತು ಖರ್ಚು ಮಾಡುವ ಸಂಪೂರ್ಣ ಅವಕಾಶವಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಅವಶ್ಯವಿರುವ ನೀರು ಮತ್ತು ನೈರ್ಮಲ್ಯ, ಕರೆ ಕಟ್ಟೆ, ಸೇತುವೆ, ರಸ್ತೆ, ಚರಂಡಿ ಹಾಗೂ ಶಾಲಾ ಕಟ್ಟಡಗಳ ದುರಸ್ತಿ ಸೇರಿದಂತೆ ನಾನಾ ರೀತಿಯ ಅಭಿವೃದ್ಧಿ ಚಟುವಟಿಕೆಗಳಿಗೆ ತೆರಿಗೆ ಹಣವನ್ನು ಬಳಸಕೊಳ್ಳಲಾಗುತ್ತದೆ. ಹೀಗಿರುವಾಗ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡದೆ ಬಾಕಿ ಉಳಿಸಿಕೊಂಡರೆ ಗ್ರಾಮೀಣಾಭಿವೃದ್ಧಿ ಹೇಗೆ ಸಾಧ್ಯ” ಎಂಬುದು ಬುದ್ಧಿ ಜೀವಿಗಳ ಪ್ರಶ್ನೆ

“ಅಧಿಕಾರ ಬಳಸಿ ಕಾರ್ಯ ನಿರ್ವಹಿಸುವಲ್ಲಿ ಗ್ರಾ.ಪಂ ಅಧಿಕಾರಿಗಳು ಸೋತಿದ್ದಾರೆ. ಪ್ರತಿಯೊಂದು ಅಭಿವೃದ್ಧಿ ಚಟುವಟಿಕೆಗಳಿಗೂ ಸರ್ಕಾರದ ಅನುದಾನ ಅವಲಂಬಿಸಿ ಆಡಳಿತ ನಡೆಸುವುದು ಅವರಿಗೆ ರೂಢಿಯಾಗಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 112 ರಂತೆ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದಲ್ಲಿ ಕರ ವಸೂಲಿಗಾರ, ಗುಮಾಸ್ತರ ಹುದ್ದೆಗಳನ್ನು ಸರ್ಕಾರದ ಆದೇಶದ ಅನ್ವಯ ಭರ್ತಿ ಮಾಡಲು ಅವಕಾಶವವಿದೆ. ನೇಮಕಾತಿಯಲ್ಲಿ ರೋಸ್ಟರ್ ನಿಯಮದ ಪಾಲನೆ ಮಾಡಬೇಕು ಮತ್ತು ಸಿಇಒ ಅವರ ಅನುಮೋದನೆ ಪಡೆಯಬೇಕಿದೆ. ಆದ್ದರಿಂದ ಜಿಲ್ಲೆಯಲ್ಲಿ ಕರವಸೂಲಿಗಾರರ 78 ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ. ಇದಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಅವರೇ ಉತ್ತರ ಹೇಳಬೇಕು” ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಇದನ್ನೂ ಓದಿದ್ದೀರಾ? ವಿಜಯನಗರ | ರಸ್ತೆ ಮೇಲೆ ಕಸ ಸುರಿದ ನಗರಸಭೆ; ಗ್ರಾಮಸ್ಥರಿಗೆ ಕಿರಿಕಿರಿ

“ಹಳ್ಳಿಗಳ ಏಳಿಗೆಯೇ ಭಾರತದ ಅಭಿವೃದ್ಧಿ ಎನ್ನುವ ಗಾಂಧಿಯವರ ಗ್ರಾಮ ಸ್ವರಾಜ್ ಕನಸನ್ನು ನನಸು ಮಾಡುವಲ್ಲಿ ಪಂಚಾಯತ್ ರಾಜ್ ಯೋಜನೆಗಳು ಸಿದ್ಧವಿದ್ದರೂ ಸಾಕಾರಗೊಳಿಸುವ ಕೆಲಸಗಳು ಮಾತ್ರ ಸಮರ್ಪಕವಾಗಿಲ್ಲ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಥವಾ ಕಾರ್ಯದರ್ಶಿಗಳಿಗೆ ಕಂದಾಯ ವಸೂಲಾತಿಯ ನೇರ ಜವಾಬ್ದಾರಿ ಇರುವುದರಿಂದ ವಿಫಲತೆಯ ಹೊಣೆಯನ್ನು ಇಒಗಳು ಹೊರಬೇಕು” ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ತುಮಕೂರು ಜಿಲ್ಲೆಯ ಚಿ.ನಾ.ಹಳ್ಳಿ 8, ಗುಬ್ಬಿ 4, ಕುಣಿಗಲ್ 3, ಪಾವಗಡ 32, ತಿಪಟೂರು 21, ಮಧುಗಿರಿ 4, ತುಮಕೂರು 3, ಕೊರಟಗೆರೆ 1, ತುರುವೇಕೆರೆ 2 ಸೇರಿದಂತೆ ಒಟ್ಟು 78 ಕರ ವಸೂಲಿಗಾರರ ಖಾಲಿ ಹುದ್ದೆಗಳಿವೆ.

ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿನ ಕಂದಾಯ ಬಾಕಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಪಂಚಾಯತ್ ಸಿಇಒ ಜಿ ಪ್ರಭು ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದೆ. ಆದರೆ, ಅವರು ಲಭ್ಯವಾಗಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಧುಗಿರಿ | ಕಾರುಗಳ ನಡುವೆ ಅಪಘಾತ : ಐವರು ಸಾವು

ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಐದು ಜನರು ಮೃತಪಟ್ಟಿರುವ ಘಟನೆ...

ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಮೊಂತಿ ಫೆಸ್ಟ್ ಆಚರಣೆ

ಜಿಲ್ಲಾದ್ಯಂತ ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ಟ್ ಅನ್ನು ಕ್ರೆಸ್ತರು ಭಾನುವಾರ ಸಂಭ್ರಮದಿಂದ...

ಕೊಪ್ಪ | ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಪಿಎಸ್ಐ ಬಸವರಾಜ್ ವಿರುದ್ಧ ಆರೋಪ

ಕೊಪ್ಪ ಪಿಎಸ್ಐ ಬಸವರಾಜ್ ತಮ್ಮದೇ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಗೆ ಲೈಂಗಿಕ...