ನಾಟಕ ಸಮಾಜದ ಕನ್ನಡಿಯಾಗಿದ್ದು, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿಯನ್ನು ಹೊಂದಿರುವ ಜೀವಂತ ಕಲೆಯಾಗಿದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ತಿಪಟೂರು ಸತೀಶ್ ಹೇಳಿದರು.
ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮೈಸೂರು ರಂಗಾಯಣ ವತಿಯಿಂದ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಐದು ದಿನಗಳ ರಂಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಇಂದಿನ ಪೀಳಿಗೆಯ ಮಕ್ಕಳಿಗೆ ನಾಟಕ ಮತ್ತು ರಂಗಭೂಮಿಯ ಪರಿಚಯ ಕಡಿಮೆಯಾಗುತ್ತಿರುವುದು ಆತಂಕದ ಸಂಗತಿ ಎಂದು ಅವರು ವಿಷಾದಿಸಿದರು.
ಗುಬ್ಬಿಯಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣವಾಗಿರುವುದು ಸಂತಸದ ವಿಚಾರ. ಇಂತಹ ವೇದಿಕೆಗಳ ಮೂಲಕ ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಹೊರತರುವ ಕೆಲಸ ನಡೆಯಬೇಕು. ಇದೇ ಉದ್ದೇಶದಿಂದ ರಂಗೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.
‘ಮೈ ಫ್ಯಾಮಿಲಿ’ ನಾಟಕ ಮಕ್ಕಳ ಬದುಕಿಗೆ ಹತ್ತಿರವಾಗಿದ್ದು, ಕುಟುಂಬ ಮೌಲ್ಯಗಳು ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಈ ನಾಟಕ ಈಗಾಗಲೇ ರಾಜ್ಯದ 70ಕ್ಕೂ ಹೆಚ್ಚು ಕಡೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ ಎಂದು ಹೇಳಿದರು.
ರಂಗೋತ್ಸವವನ್ನು ವಾದ್ಯ ಬಾರಿಸುವ ಮೂಲಕ ಉದ್ಘಾಟಿಸಿದ ಡಾ. ಗುಬ್ಬಿ ವೀರಣ್ಣ ಟ್ರಸ್ಟ್ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ, ಊರಿಂದ ಊರಿಗೆ ಹಾಗೂ ರಾಜ್ಯದಿಂದ ರಾಜ್ಯಕ್ಕೆ ಸಂಚರಿಸಿ ಕನ್ನಡ ರಂಗಭೂಮಿಯನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸಿದ ಗುಬ್ಬಿ ವೀರಣ್ಣ ಕಂಪನಿಯ ಪರಂಪರೆಯನ್ನು ಇಂದು ರಂಗಾಯಣ ಮುಂದುವರಿಸುತ್ತಿದೆ ಎಂದು ಹೇಳಿದರು.
ಅದ್ಭುತ ನಾಟಕಗಳು ಅಗತ್ಯ ಪರಿಕರಗಳೊಂದಿಗೆ ಪ್ರದರ್ಶನಗೊಳ್ಳಬೇಕು. ‘ಮೈ ಫ್ಯಾಮಿಲಿ’ ನಾಟಕವೂ ಅಂತಹ ಉತ್ತಮ ಪ್ರಯತ್ನಗಳಲ್ಲಿ ಒಂದಾಗಿದ್ದು, ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸುವ ದಿಕ್ಕು ತೋರಿಸುವ ಕೃತಿಯಾಗಿದೆ. ಬಿ. ಜಯಶ್ರೀ ಅವರ ಶ್ರಮದಿಂದ ನಿರ್ಮಾಣಗೊಂಡಿರುವ ಈ ರಂಗಮಂದಿರ ಮಕ್ಕಳ ನಾಟಕೋತ್ಸವಕ್ಕೆ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಡಾ. ಗುಬ್ಬಿ ವೀರಣ್ಣ ಟ್ರಸ್ಟ್ ಖಜಾಂಚಿ ಡಾ. ರಾಜೇಶ್ ಗುಬ್ಬಿ ಮಾತನಾಡಿ ಹಿಂದೆ ಮಕ್ಕಳಿಗೆ ವರ್ಷಕ್ಕೊಮ್ಮೆ ಸಿನಿಮಾ ತೋರಿಸುವ ಪದ್ಧತಿ ಇತ್ತು. ಈಗ ಸಿನಿಮಾ ಮೊಬೈಲ್‌ನಲ್ಲೇ ಲಭ್ಯವಾಗುತ್ತದೆ. ಆದರೆ ಜೀವಂತ ಕಲೆಯಾದ ನಾಟಕದ ಅನುಭವ, ಕಲಾವಿದರ ಶ್ರಮ ಹಾಗೂ ಸಿನಿಮಾ ಮತ್ತು ರಂಗಭೂಮಿಯ ನಡುವಿನ ವ್ಯತ್ಯಾಸವನ್ನು ಮಕ್ಕಳು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದರು
ಕಾರ್ಯಕ್ರಮದಲ್ಲಿ ಪ್ರಿಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದೀಪಕ್, ಪ್ರಾಂಶುಪಾಲ ಅರುಣ್, ರಂಗಾಯಣದ ಮಧು ಸೇರಿದಂತೆ ಹಲವರು ಉಪಸ್ಥಿತರಿದ್ದರು.




