“ಅಂಕ ಗಳಿಸುವುದೇ ಶಿಕ್ಷಣದ ಗುರಿಯಲ್ಲ; ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಬಾಳುವುದೇ ನಿಜವಾದ ಶಿಕ್ಷಣ” ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಹೇಳಿದರು.
ಗೊಲ್ಲಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನದಡಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮ ಮತ್ತು ಔಷಧೀಯ ಸಸ್ಯಗಳ ಉದ್ಯಾನವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಔಷಧೀಯ ಸಸ್ಯವೊಂದನ್ನು ನೆಡುವ ಮೂಲಕ ಉದ್ಯಾನವನಕ್ಕೆ ಚಾಲನೆ ನೀಡಿದರು.
ವ್ಯಕ್ತಿತ್ವ ರೂಪಣೆಯಲ್ಲಿ ಮೌಲ್ಯಗಳ ಮಹತ್ವವನ್ನು ವಿವರಿಸಿದ ಶಾಸಕರು, ವಿದ್ಯಾರ್ಥಿಗಳು ಕೇವಲ ಅಂಕಗಳ ಹಿಂದೆ ಬೀಳದೆ ಶಿಸ್ತು, ಪ್ರಾಮಾಣಿಕತೆ, ಸಮಯಪಾಲನೆಯಂತಹ ಜೀವನ ಮೌಲ್ಯಗಳೊಂದಿಗೆ ಕೌಶಲ್ಯಗಳನ್ನೂ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕು ಎಂದು ಕರೆ ನೀಡಿದರು. ಪೋಷಕರು ಮಕ್ಕಳ ಆಸಕ್ತಿ ಮತ್ತು ಆಶಯಗಳನ್ನು ಅರಿತು, ಬಾಲ್ಯದಿಂದಲೇ ಶ್ರಮದ ಗೌರವವನ್ನು ಕಲಿಸುವ ಮೂಲಕ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಸಂಸ್ಕೃತಿ ಮತ್ತು ಸಂಸ್ಕಾರಧಾರಿತ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಹಾಗೂ ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿದ ಅವರು, ತಾವು ಫಿನ್‌ಲ್ಯಾಂಡ್‌ಗೆ ಭೇಟಿ ನೀಡಿದ್ದಾಗ ಅಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ನೀಡಲಾಗುವ ಹೆಚ್ಚಿನ ಪ್ರಾಮುಖ್ಯತೆಯನ್ನು ನೆನಪಿಸಿಕೊಂಡರು.
ಪ್ರಾಂಶುಪಾಲ ಸುಂದರ ಕುಮಾರ್ ಮಾತನಾಡಿ, ಪ್ರಕೃತಿಯ ಕಾಳಜಿ ಪ್ರತಿಯೊಬ್ಬರಲ್ಲಿ ಮೂಡಬೇಕು ಮತ್ತು ವಿದ್ಯಾರ್ಥಿಗಳಲ್ಲಿ ಔಷಧೀಯ ಸಸ್ಯಗಳ ಅರಿವು ಮೂಡಿಸುವುದು ಅಗತ್ಯ ಎಂದರು. ಈ ಉದ್ದೇಶದಿಂದಲೇ ವಿದ್ಯಾಲಯದ ಆವರಣದಲ್ಲಿ ಔಷಧೀಯ ಸಸ್ಯಗಳ ಉದ್ಯಾನವನ ಬೆಳೆಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಪೋಷಕ ಶಿಕ್ಷಕ ಸಮಿತಿ ಸದಸ್ಯ ರಾಜು ಅವರು, ವಿದ್ಯಾಲಯವು ವಿದ್ಯಾರ್ಥಿಗಳ ಭವಿಷ್ಯಕ್ಕೆ ತಕ್ಕಂತೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಹೇಳಿ, ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಶಾಸಕರ ಸಹಕಾರ ಕೋರಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಪ್ರವೀಣ್ ಕುಮಾರ್ ಅವರು ನವೋದಯ ವಿದ್ಯಾರ್ಥಿಗಳ ಸಾಧನೆಗಳನ್ನು ಪ್ರಶಂಸಿಸಿದರು. ಇದೇ ಸಂದರ್ಭದಲ್ಲಿ ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಊರ್ಡಿಗೆರೆ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ರವಿಕುಮಾರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆಂಪಸಿದ್ದಯ್ಯ, ಪೋಷಕ ರಾಜು ಬಿ.ಎಚ್., ಹಳೆ ವಿದ್ಯಾರ್ಥಿ ಸಂಘದ ಮಲ್ಲೇಶ್, ಅಧ್ಯಾಪಕರಾದ ಚೆನ್ನಪ್ಪ ಲಮಾಣಿ, ನಾಗರಾಜ ರಾವ್, ಕುಸುಮಾಧರ ಡಿ.ಎಸ್., ಸಾಬು ಕುಟ್ಟಿ ಹಾಗೂ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಸುಮಾಧರ ಡಿ.ಎಸ್. ನಿರೂಪಿಸಿ, ಸಿ.ಕೆ. ಲಮಾಣಿ ವಂದಿಸಿದರು.




