ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ನಡೆದ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ರಾಜ್ಯಾದ್ಯಂತ ಆಗ್ರಹಗಳು ಕೇಳಿ ಬರುತ್ತಿವೆ. ಈ ನಡುವೆ ಸ್ಯಾಂಡಲ್‌ವುಡ್‌ನ ನಟ ದುನಿಯಾ ವಿಜಯ್, ಸೌಜನ್ಯ ಕುಟುಂಬಕ್ಕೆ ಬೆಂಬಲ ಸೂಚಿಸಿದ್ದಾರೆ.
ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಟ್ವೀಟ್ ಮಾಡಿರುವ ವಿಜಯ್, “ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ, ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ” ಎಂದಿದ್ದಾರೆ.
“ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು” ಎಂದು ಗೌತಮ ಬುದ್ಧನ ಮಾತನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ʼಜಸ್ಟೀಸ್ ಫಾರ್ ಸೌಜನ್ಯʼ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಅವರು ಪ್ರಕರಣದ ಮರು ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳದ ಸಂತೋಷ್ ರಾವ್ ಅವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ನಂತರ ಈ ಪ್ರಕರಣ ಸಿಬಿಐ ಕೈಸೇರಿತ್ತು. 11 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಇತ್ತೀಚೆಗೆ ಸಿಬಿಐನ ವಿಶೇಷ ನ್ಯಾಯಾಲಯ ಸಂತೋಷ್ ದೋಷಮುಕ್ತ ಎಂದು ತೀರ್ಪು ಪ್ರಕಟಿಸಿತ್ತು. ಅದಾದ ನಂತರ ಪ್ರಕರಣದ ಅಸಲಿ ಹಂತಕರನ್ನು ಬಂಧಿಸುವಂತೆ ಸೌಜನ್ಯಳ ಕುಟುಂಬಸ್ಥರು ಮತ್ತು ಹಲವು ಸಾಮಾಜಿಕ ಹೋರಾಟಗಾರರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಪ್ರತಿಭಟನೆಗಳು ಕೂಡ ನಡೆದಿವೆ. ಜನಪರ ಸಂಘಟನೆಗಳು ಮತ್ತು ಸೌಜನ್ಯಳ ಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪ್ರಕರಣದ ಮರು ತನಿಖೆಗೆ ಆದೇಶಿಸುವಂತೆ ಮನವಿಯನ್ನೂ ಮಾಡಿದ್ದಾರೆ.