ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸಂಬಂಧ ಚುನಾವಣಾ ಆಯೋಗ ಹಾಗೂ ಎನ್‌ಡಿಎ ಪಕ್ಷಗಳು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಸಂಚಾಲಕ ಸಮಿತಿಯ ಪ್ರಧಾನ ಸಂಚಾಲಕ ಕೆ. ಫಣಿರಾಜ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಸ್‌ಐಆರ್ ಆರಂಭವಾದ ವಾರದಲ್ಲೇ ಕೆಲಸದ ಒತ್ತಡದಿಂದ ನಾಲ್ವರು ಬಿಎಲ್ವೊಗಳು ಮೃತಪಟ್ಟಿರುವುದಾಗಿ ವರದಿಯಾಗಿದ್ದು, ಬಿಎಲ್ವೊಗಳೂ ದೈಹಿಕ ಮಿತಿಗಳಿರುವ ಮನುಷ್ಯರೇ ಎಂಬುದನ್ನು ಗಮನಿಸಬೇಕಾಗಿದೆ ಎಂದರು.
ಮೂರು ತಿಂಗಳ ಗಡುವಿನೊಳಗೆ ದಿನಕ್ಕೆ 50 ಮನೆಗಳನ್ನು ತಲುಪುವ ಕಠಿಣ ಗುರಿ ನಿಗದಿ ಮಾಡಿರುವುದೇಕೆ? ಚುನಾವಣೆ ಇನ್ನೂ ಎರಡುವರೆ ವರ್ಷ ದೂರವಿರುವಾಗ ಪ್ರಕ್ರಿಯೆಯನ್ನು 6ರಿಂದ 9 ತಿಂಗಳಿಗೆ ವಿಸ್ತರಿಸಿ ಸಮರ್ಪಕವಾಗಿ ನಡೆಸಲು ಅಡ್ಡಿಯೇನು ಎಂದು ಪ್ರಶ್ನಿಸಿದರು.
ಪ್ರತಿ ಮನೆಗೆ ತೆರಳಿ ನಮೂನೆ ವಿತರಣೆ, ಮಾಹಿತಿ ನೀಡುವುದು, ಅಗತ್ಯವಿದ್ದರೆ ಭರ್ತಿ ಮಾಡಿಸುವುದು ಸೇರಿದಂತೆ ಅನೇಕ ಹೊಣೆಗಾರಿಕೆಗಳಿದ್ದು, ಇದಕ್ಕೆ ಬೇಕಾಗುವ ಸರಾಸರಿ ಸಮಯದ ವೈಜ್ಞಾನಿಕ ಅಂದಾಜು ಮಾಡಿಯೇ ಗುರಿ ನಿಗದಿಪಡಿಸಿದ್ದೀರಾ ಎಂದು ಕೇಳಿದರು.
ಕೆಲವೆಡೆ ಬಿಎಲ್ವೊಗಳು ಸಾಮೂಹಿಕವಾಗಿ ನಮೂನೆ ವಿತರಣೆ ಹಾಗೂ ಭರ್ತಿ ಕಾರ್ಯ ನಡೆಸುತ್ತಿರುವುದನ್ನು ಅಕ್ರಮ ಎಂದು ಕರೆಯಲಾಗುತ್ತಿದೆ. ಆದರೆ ಸಹಾಯ ಕೇಂದ್ರಗಳು ಹಾಗೂ ರಾಜಕೀಯ ಪಕ್ಷಗಳ ಏಜೆಂಟರು ಸಾಮೂಹಿಕವಾಗಿ ನೆರವು ನೀಡುವುದು ನಿಯಮಬದ್ಧವಾದರೆ, ಬಿಎಲ್ವೊಗಳು ಅದೇ ಕಾರ್ಯ ಮಾಡಿದರೆ ಅದು ಹೇಗೆ ಅಕ್ರಮವಾಗುತ್ತದೆ ಎಂದು ಪ್ರಶ್ನಿಸಿದರು.
ಆನ್‌ಲೈನ್‌ನಲ್ಲಿ ನಮೂನೆ ಭರ್ತಿ ಮಾಡುವುದು ಸಕ್ರಮವಾದರೆ, ಮತದಾರರು ಅಥವಾ ಅವರ ಸಂಬಂಧಿಕರು ಹಾಜರಿರುವ ಸಾಮೂಹಿಕ ಸ್ಥಳದಲ್ಲಿ ಭರ್ತಿ ಮಾಡುವುದನ್ನು ಅಕ್ರಮ ಎನ್ನುವುದು ಯಾವ ಆಧಾರದ ಮೇಲೆ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ 20ರಿಂದ 25 ಲಕ್ಷ ಅಕ್ರಮ ವಲಸಿಗರು ಮತದಾರರ ಪಟ್ಟಿಗೆ ಸೇರಿಸಲ್ಪಡುತ್ತಿದ್ದಾರೆ ಎಂಬ ಎನ್‌ಡಿಎ ನಾಯಕರ ಹೇಳಿಕೆಗಳ ಕುರಿತು, ಅಂತಹ ಮಾಹಿತಿ ಮತ್ತು ಸಾಕ್ಷ್ಯಗಳಿದ್ದರೆ ಚುನಾವಣಾ ಆಯೋಗಕ್ಕೆ ಸಲ್ಲಿಸದೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವುದೇಕೆ ಎಂದು ಕೆ. ಫಣಿರಾಜ್ ಪ್ರಶ್ನಿಸಿದರು.
ಚುನಾವಣಾ ಆಯೋಗ ಮತ್ತು ಎನ್‌ಡಿಎ ಪಕ್ಷಗಳು ವೈಜ್ಞಾನಿಕ ತರ್ಕದ ನೆಲೆಯಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಹಾಗೂ ಬಿಎಲ್ವೊಗಳು ಮಾನವ ಸಾಧ್ಯವಾದ ಅವಧಿಯಲ್ಲಿ ಕೆಲಸ ನಿರ್ವಹಿಸುವಂತಹ ವಾತಾವರಣ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.





