ಉಡುಪಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡವನ್ನು ಶೀಘ್ರವಾಗಿ ಕಾರ್ಯಾರಂಭಗೊಳಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಎಂ. ಇಕ್ಬಾಲ್ ಮನ್ನಾ ಅವರು ಕರ್ನಾಟಕದ ನೂತನ ಆರೋಗ್ಯ ಸಚಿವರಾದ ಯು ಟಿ ಖಾದರ್ ಅವರಿಗೆ ಉದ್ದೇಶಿಸಿದ ಮನವಿಯನ್ನು ಉಡುಪಿ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಇಂದು ಅವರ ಕಚೇರಿಯಲ್ಲಿ ಸಲ್ಲಿಸಿದರು.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಇಕ್ಬಾಲ್ ಮನ್ನಾ, ಆರೋಗ್ಯ ಇಲಾಖೆಯ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಉಡುಪಿ ಜಿಲ್ಲೆಯ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸಿರುವುದಾಗಿ ತಿಳಿಸಿದರು.
ಮನವಿಯಲ್ಲಿ, ಉಡುಪಿ ನೂತನ ಜಿಲ್ಲಾಸ್ಪತ್ರೆ ಕಟ್ಟಡವು ಹಲವು ವರ್ಷಗಳ ಹಿಂದೆಯೇ ಬಾಹ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ, ಒಳಾಂಗಣ ಕಾಮಗಾರಿಗಳು, ಅಗತ್ಯ ವೈದ್ಯಕೀಯ ಸೌಲಭ್ಯಗಳು ಹಾಗೂ ಸೇವೆಗಳ ಅಳವಡಿಕೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಉಲ್ಲೇಖಿಸಲಾಗಿದೆ. ಇದರ ಪರಿಣಾಮವಾಗಿ ಸಾರ್ವಜನಿಕರ ಬಹುಕಾಲದ ನಿರೀಕ್ಷೆಯಾಗಿರುವ ಈ ಆಸ್ಪತ್ರೆ ಇನ್ನೂ ಜನಸೇವೆಗೆ ಲಭ್ಯವಾಗಿಲ್ಲ ಎಂದು ತಿಳಿಸಲಾಗಿದೆ.

ಹೀಗಾಗಿ ಬಾಕಿ ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ, ನೂತನ ಜಿಲ್ಲಾಸ್ಪತ್ರೆಯನ್ನು ಆದಷ್ಟು ಬೇಗ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದೆ.
ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ಕಾರ್ಯಾರಂಭಗೊಂಡರೆ ಉಡುಪಿ ಜಿಲ್ಲೆಯ ಆರೋಗ್ಯ ಸೇವೆಗಳು ಮತ್ತಷ್ಟು ಬಲಿಷ್ಠವಾಗಲಿದ್ದು, ಸಾವಿರಾರು ರೋಗಿಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ ಎಂದು ಇಕ್ಬಾಲ್ ಮನ್ನಾ ಅಭಿಪ್ರಾಯಪಟ್ಟಿದ್ದಾರೆ. ಅವರು ಈ ವಿಷಯದಲ್ಲಿ ಸಚಿವರ ತ್ವರಿತ ಮಧ್ಯಸ್ಥಿಕೆ ಮತ್ತು ಸಕಾರಾತ್ಮಕ ಕ್ರಮವನ್ನು ನಿರೀಕ್ಷಿಸುವುದಾಗಿ ತಿಳಿಸಿದ್ದಾರೆ.






