ರಾಜ್ಯ ಸರ್ಕಾರವು ಕಳೆದ ಮೇ ತಿಂಗಳಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಕನಿಷ್ಠ ಕೂಲಿಯನ್ನು ಶೀಘ್ರ ಜಾರಿಗೊಳಿಸುವಂತೆ ಆಗ್ರಹಿಸಿ, ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ (ಸಿಐಟಿಯು) ಕುಂದಾಪುರ ಘಟಕದ ವತಿಯಿಂದ ಗುರುವಾರ ಕುಂದಾಪುರ ಕಾರ್ಮಿಕರ ನಿರೀಕ್ಷಕರ ಕಚೇರಿ ಎದುರು ಧರಣಿ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ. ಚಂದ್ರಶೇಖರ್, ಕನಿಷ್ಠ ಕೂಲಿ ಜಾರಿಯಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ತೀವ್ರವಾಗಿ ಟೀಕಿಸಿದರು. “ಈಗಾಗಲೇ ಎಂಟು ವರ್ಷಗಳು ಕಳೆದಿವೆ. ಪ್ರಕಟಿಸಿರುವ ಕನಿಷ್ಠ ಕೂಲಿಯನ್ನು ಜಾರಿಗೊಳಿಸಲು ಇನ್ನೂ ವಿಳಂಬ ಮಾಡುತ್ತಿರುವುದು ಅರ್ಥವಾಗುತ್ತಿಲ್ಲ. ಹಣಕಾಸು ಇಲಾಖೆಯ ಒಪ್ಪಿಗೆ ಬೇಕು ಎಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಸರ್ಕಾರವನ್ನು ನಡೆಸುತ್ತಿರುವುದು ಹಣಕಾಸು ಇಲಾಖೆಯೇ ಅಥವಾ ಜನರಿಂದ ಆಯ್ಕೆಯಾದ ಸರ್ಕಾರವೇ ಎಂಬ ಪ್ರಶ್ನೆ ಉದ್ಭವಿಸಿದೆ. ಕಾರ್ಮಿಕರ ಹಿತಕ್ಕಿಂತ ಮಾಲಕರ ಹಿತವನ್ನೇ ಸರ್ಕಾರ ಗಮನಿಸುತ್ತಿದೆ. ಇದರ ಹಿಂದೆ ದೊಡ್ಡ ಉದ್ಯಮಿಗಳ ಪ್ರಭಾವವಿದೆ. ಕಾರ್ಮಿಕರ ಶಕ್ತಿಯನ್ನು ಸರ್ಕಾರ ಕಡೆಗಣಿಸಬಾರದು” ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ಕುಂದಾಪುರ ಘಟಕದ ಅಧ್ಯಕ್ಷ ವಿ. ನರಸಿಂಹ ಮಾತನಾಡಿ, ಕನಿಷ್ಠ ಕೂಲಿ ಜಾರಿಯಲ್ಲಿ ಇನ್ನಷ್ಟು ವಿಳಂಬವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟವನ್ನು ಸಂಘಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. “ಕೆಲಸ ಮಾಡಿದರೂ ಜೀವನ ಸಾಗಿಸುವುದೇ ಕಷ್ಟವಾಗಿರುವ ಸಂದರ್ಭದಲ್ಲಿ, ಕನಿಷ್ಠ ಕೂಲಿಯನ್ನಾದರೂ ಗೌರವಯುತವಾಗಿ ಜಾರಿಗೊಳಿಸಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಮುಖಂಡರಾದ ಕೆ. ಶಂಕರ್, ಜಿ.ಡಿ. ಪಂಜು, ವಾಸು ಪೂಜಾರಿ, ಲಕ್ಷ್ಮಣ ಡಿ., ಪ್ರಕಾಶ ಕೋಣಿ, ಚಂದ್ರ ಪೂಜಾರಿ, ಗೋಪಾಲ ಮೇವಿನಕೆರೆ, ಜಿ.ಎಂ. ಶಂಕರ ಶೆಟ್ಟಿ, ವಸಂತ, ರಾಘವೇಂದ್ರ ಸೇರಿದಂತೆ ಹಲವರು ಭಾಗವಹಿಸಿದ್ದರು. ಸಿಐಟಿಯು ಕುಂದಾಪುರ ಘಟಕದ ಪ್ರಧಾನ ಕಾರ್ಯದರ್ಶಿ ಎಚ್. ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಕೋಶಾಧಿಕಾರಿ ಸುರೇಂದ್ರ ಎಚ್. ವಂದಿಸಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ. ಚಂದ್ರಶೇಖರ್, ರಾಜ್ಯ ಸರ್ಕಾರವು 2026ರ ಮೇ 22ರಂದು ಪರಿಷ್ಕರಿಸಿ ಹೊರಡಿಸಿರುವ ಕನಿಷ್ಠ ಕೂಲಿ ಅಧಿಸೂಚನೆಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸಿದ್ದೇವೆ. ಕನಿಷ್ಠ ಕೂಲಿ ಪರಿಷ್ಕರಣೆ ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿದೆ. ಸುಪ್ರೀಂ ಕೋರ್ಟ್‌ನ ರಫ್ತಾ ಕೋಸ್ ಬ್ರೆಟ್ ಪ್ರಕರಣದ ತೀರ್ಪಿನಲ್ಲಿ ಸೂಚಿಸಿರುವ ಮಾನದಂಡಗಳ ಆಧಾರದ ಮೇಲೆ ಅಕುಶಲ (3ನೇ ವಲಯ) ಕಾರ್ಮಿಕರಿಗೆ ಮಾಸಿಕ ₹36,000 ಕನಿಷ್ಠ ಕೂಲಿ ನಿಗದಿಪಡಿಸುವಂತೆ ಸಂಘವು ಒತ್ತಾಯಿಸಿತ್ತು ಎಂದು ತಿಳಿಸಿದರು.
ಪ್ರಸ್ತುತ ಪ್ರಕಟಿಸಲಾಗಿರುವ ಪರಿಷ್ಕೃತ ಕನಿಷ್ಠ ಕೂಲಿ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿನ ಪರಿಹಾರವಾಗಲಿದೆ. ಆದರೆ, ಇದನ್ನು ಜಾರಿಗೊಳಿಸುವುದನ್ನು ವಿಳಂಬಗೊಳಿಸಲು ಉದ್ಯಮಿಗಳ ಪರವಾಗಿ ನ್ಯಾಯಾಲಯದಲ್ಲಿ ವಿವಾದ ಸೃಷ್ಟಿಸುವ ಪ್ರಯತ್ನವನ್ನು ಸಿಐಟಿಯು ಖಂಡಿಸುತ್ತದೆ ಎಂದು ಹೇಳಿದರು.
ಇದೇ ವೇಳೆ, ಆರ್ಥಿಕ ಇಲಾಖೆಯ ಒಪ್ಪಿಗೆ ಅಗತ್ಯವಿದೆ ಎಂಬ ಕಾರಣ ನೀಡಿ ಕನಿಷ್ಠ ವೇತನ ಜಾರಿಯನ್ನು ವಿಳಂಬಗೊಳಿಸುವ ರೀತಿಯ ಹೇಳಿಕೆಗಳು ಕಾರ್ಮಿಕರಲ್ಲಿ ಆತಂಕ ಉಂಟುಮಾಡಿವೆ ಎಂದು ಅವರು ಅಭಿಪ್ರಾಯಪಟ್ಟರು.
ಹಲವು ಹಂತಗಳ ಚರ್ಚೆಗಳು, ಸಮಿತಿಗಳ ಶಿಫಾರಸುಗಳು ಹಾಗೂ ಕಾನೂನು ತಿದ್ದುಪಡಿಗಳ ಬಳಿಕ ಹೊರಬಂದಿರುವ ಕನಿಷ್ಠ ಕೂಲಿ ಅಧಿಸೂಚನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಬೆಲೆ ಏರಿಕೆಯ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕಾರ್ಮಿಕ ಕುಟುಂಬಗಳಿಗೆ ತಕ್ಷಣದ ನೆರವಾಗುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘ (ಸಿಐಟಿಯು) ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದೆ ಎಂದು ವಿ. ಚಂದ್ರಶೇಖರ್ ತಿಳಿಸಿದ್ದಾರೆ.







