ಮಾನವ ಬಂಧುತ್ವ ವೇದಿಕೆ ಹಾಗೂ ಮಹಿಳಾ ಬಂಧುತ್ವ ವೇದಿಕೆ, ಉಡುಪಿ ಜಿಲ್ಲಾ ಸಂಚಾಲನ ಸಮಿತಿಯ ವತಿಯಿಂದ ತಾಲ್ಲೂಕು ಪದಾಧಿಕಾರಿಗಳಿಗೆ ಶನಿವಾರ ನಗರದ ಅಂಬಾಗಿಲಿನಲ್ಲಿರುವ ಅನುಗ್ರಹ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಕಾರ್ಯಾಗಾರವನ್ನು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ, ಡಾ. ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿ ಮಾತನಾಡಿ, “ಮಾನವ ಬಂಧುತ್ವ ವೇದಿಕೆಯ ಆಶಯಗಳು ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆಯನ್ನು ಬಲಪಡಿಸುವಲ್ಲಿ ಪ್ರಮುಖವಾಗಿವೆ” ಎಂದು ತಿಳಿಸಿದರು.


ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಮಿತಿ ಸದಸ್ಯರಾದ ರೊನಾಲ್ಡ್ ಮನೋಹರ್ ಕರ್ಕಡ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ವೇದಿಕೆಯ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
This video cannot be played in your browser. Open the video directly
ಪ್ರತಿ ತಿಂಗಳು ವಿವಿಧ ಜಿಲ್ಲಾ ಪ್ರದೇಶಗಳಲ್ಲಿ ಇಂತಹ ಕಾರ್ಯಾಗಾರಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗಿದೆ. ಈ ಸಂಬಂಧವಾಗಿ ಸತೀಶ್ ಜಾರಕಿಹೊಳಿಯವರು ಈಗಾಗಲೇ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಿದ್ದು, ಅವರ ಮೇಲ್ವಿಚಾರಣೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಬಂಧುತ್ವದ ಮೂಲಕವೇ ಸಮಾಜದಲ್ಲಿ ಶಾಂತಿ ಮತ್ತು ಸಹಜೀವನವನ್ನು ನಿರ್ಮಿಸಲು ಸಾಧ್ಯ. ಕೋಮು ಸಾಮರಸ್ಯವನ್ನು ಬೆಳೆಸುವುದು ಹಾಗೂ ಪರಸ್ಪರ ಸಹೋದರತ್ವದ ಭಾವನೆಗಳನ್ನು ಸಮಾಜದಲ್ಲಿ ಬಿತ್ತುವುದು ಮಾನವ ಬಂಧುತ್ವ ವೇದಿಕೆಯ ಮುಖ್ಯ ಆಶಯವಾಗಿದೆ ಎಂದು ಅವರು ಹೇಳಿದರು.

ಮೊದಲ ಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರಾದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶ್ರೀ ಜಯಪ್ರಕಾಶ್ ಹೆಗಡೆ ಅವರು “ಪ್ರಜಾಪ್ರಭುತ್ವದಲ್ಲಿ ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯದ ಮಹತ್ವ” ಕುರಿತು ಉಪನ್ಯಾಸ ನೀಡಿದರು.
ಲೇಖಕ ಹಾಗೂ ಪತ್ರಕರ್ತರಾದ ಬಿಪಿನ್ ಚಂದ್ರಪಾಲ್ ಅವರು “ಶ್ರೀ ನಾರಾಯಣ ಗುರುಗಳ ಜಾತ್ಯಾತೀತ ಆದರ್ಶಗಳ ಮಹತ್ವ” ಕುರಿತು ವಿವರಿಸಿದರು. ಚಿಂತಕರಾದ ವಿನಯ ಕುಮಾರ್ ಕಬ್ಬಾಡಿ ಅವರು “ಶಿಥಿಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಜಾಗೃತಿ ಸವಾಲುಗಳು” ಕುರಿತು ಉಪನ್ಯಾಸ ನೀಡಿ, ಸಮಾಜದಲ್ಲಿ ಜಾಗೃತಿಯ ಅಗತ್ಯತೆಯನ್ನು ಒತ್ತಿಹೇಳಿದರು.

ಕಾರ್ಯಕ್ರಮದ ಅವಧಿಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ಹಾಗೂ ಶಿಬಿರಾರ್ಥಿಗಳೊಂದಿಗೆ ಸಂವಾದವೂ ನಡೆಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಸಂಘಟನೆಯ ಬಲವರ್ಧನೆಗೆ ಎಲ್ಲ ಪದಾಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು ಮತ್ತು ಕರಾವಳಿಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಶೋಕ್ ಕೊಡವೂರು, ಎಂ ಎ ಗಫೂರ್, ಎನ್. ಸುಜೀತ್ ಕುಮಾರ್, ಶೇಖ್ ಫಯಾಜ್ ಅಲಿ ಬೈಂದೂರು, ಶೀಶ್ ಅಹ್ಮದ್, ಮನೋಜ್ ಪಿ.ವಿ. ಕೊಲ್ಲೂರು, ವಿಜಯಕುಮಾರ್ ಶೆಟ್ಟಿ ಆವರ್ಸೆ, ಹರಿ ಪ್ರಸಾದ್ ರೈ, ಪ್ರಖ್ಯಾತ್ ಶೆಟ್ಟಿ, ಅಶೋಕ್ ಸುವರ್ಣ, ಹರೀಶ್ ಕಿಣಿ, ಮಹಬಲ ಕುಂದರ್, ಜಯನ್ ಮಲ್ಪೆ, ನಾಗೇಶ್ ಉದ್ಯಾವರ್, ಮಾನವ ಬಂಧುತ್ವ ವೇದಿಕೆ ವಲಯ ಸಂಚಾಲಕರಾದ ಕೆ.ಎಸ್. ಸತೀಶ್ ಕುಮಾರ್ ಉಪಸ್ಥಿತರಿದ್ದರು. ಶಾಂತಿ ಪೆರೇರಾ ಸ್ವಾಗತಿಸಿ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಚಾರ್ಲ್ಸ್ ಆ್ಯಂಬರ್ ಧನ್ಯವಾದವಿತ್ತರು.






