ಸರ್ಕಾರಿ ಉದ್ಯೋಗದತ್ತ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇರೇಪಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸೂಕ್ತ ಮಾಹಿತಿ ನೀಡುವುದು ಹಾಗೂ ಸರ್ಕಾರಿ ಸೇವೆಯಲ್ಲಿ ಸಮುದಾಯದ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಎನ್.ಎಸ್. ಅಕಾಡೆಮಿ ಹಾಗೂ ಎನ್.ಎನ್.ಓ ಕಮ್ಯೂನಿಟಿ ಸೆಂಟರ್, ಕಾರ್ಕಳ ಇವರ ವತಿಯಿಂದ “ಸರ್ಕಾರಿ ಉದ್ಯೋಗದಲ್ಲಿ ಸಮುದಾಯದ ಪಾತ್ರ” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಚಿಂತನ ಶಿಬಿರ ಇಂದು ಕಾರ್ಕಳದ ಎನ್.ಎಸ್. ಅಕಾಡೆಮಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ಅಧ್ಯಕ್ಷ ಡಾ. ರಿಜ್ವಾನ್ ಅಹಮದ್ ಕಾರ್ಕಳ, ಸರ್ಕಾರಿ ಉದ್ಯೋಗವನ್ನು ಪಡೆಯುವುದು ಕೇವಲ ವೈಯಕ್ತಿಕ ಸಾಧನೆಯಲ್ಲ, ಅದು ಸಮುದಾಯದ ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೂ ಪ್ರಮುಖ ಕೊಡುಗೆ ನೀಡುತ್ತದೆ. ಯುವಕರು ಸರ್ಕಾರಿ ಉದ್ಯೋಗದ ಅವಕಾಶಗಳ ಬಗ್ಗೆ ತಿಳಿದುಕೊಂಡು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವ್ಯವಸ್ಥಿತವಾಗಿ ಸಿದ್ಧತೆ ನಡೆಸಬೇಕು. ಸೂಕ್ತ ಮಾರ್ಗದರ್ಶನ, ನಿರಂತರ ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೂಲಕ ಹೆಚ್ಚಿನ ಸಂಖ್ಯೆಯ ಯುವಕರು ಸರ್ಕಾರಿ ಸೇವೆಗೆ ಪ್ರವೇಶಿಸುವಂತಾಗಬೇಕು ಎಂದು ಹೇಳಿದರು.
ನಮ್ಮ ನಾಡ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಸಲೀಂ ಮೂಡಬಿದ್ರೆ ಮಾತನಾಡಿ, ಯಶಸ್ಸನ್ನು ಸಾಧಿಸಲು ತಾಳ್ಮೆ, ಪರಿಶ್ರಮ ಮತ್ತು ಆರಾಧನೆಯ ಮನೋಭಾವ ಅಗತ್ಯ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ತಕ್ಷಣ ದೊರೆಯುವುದಿಲ್ಲ. ಗುರಿಯನ್ನು ಹೊಂದಿಕೊಂಡು ನಿರಂತರವಾಗಿ ಕಾರ್ಯನಿರ್ವಹಿಸಿದರೆ ಖಂಡಿತವಾಗಿಯೂ ಯಶಸ್ಸು ಸಾಧ್ಯ. ಯುವಜನರ ಭವಿಷ್ಯ ನಿರ್ಮಾಣಕ್ಕೆ ಇಂತಹ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಸ್ತಾಕ್ ಅಹಮದ್ ಬೆಳ್ವೆ ಮಾತನಾಡಿ, ಸರ್ಕಾರಿ ಉದ್ಯೋಗದ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಇರುವ ಗೊಂದಲಗಳನ್ನು ನಿವಾರಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಸಿದ್ಧತೆ, ಸಮಯ ನಿರ್ವಹಣೆ, ಅಧ್ಯಯನದ ವಿಧಾನ ಹಾಗೂ ವಿವಿಧ ಸರ್ಕಾರಿ ಹುದ್ದೆಗಳ ಅವಕಾಶಗಳ ಕುರಿತು ಅರಿವು ಮೂಡಿಸುವ ಕೆಲಸ ಮುಂದುವರಿಯಬೇಕು. ಸಮುದಾಯದ ಯುವಕರು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮುಂದೆ ಬರಲು ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ನೌಜಲ್ ಮುಲ್ಕಿ ಹಾಗೂ ಅಬ್ದುಲ್ ರಜಾಕ್ ಅವರು ತರಬೇತುದಾರರಾಗಿ ಭಾಗವಹಿಸಿ ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿಧಾನ, ಪರೀಕ್ಷಾ ಮಾದರಿ, ಅಧ್ಯಯನದ ತಂತ್ರಗಳು ಹಾಗೂ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ವೇಳೆ ಸರ್ಕಾರಿ ಉದ್ಯೋಗ ಪಡೆದು ಯಶಸ್ವಿಯಾದ ಅಹಮದ್ ಎಫ್.ಎಚ್. ಹಾಗೂ ಸಾದತ್ ಯಾಸಿನ್ ಅವರನ್ನು ಸನ್ಮಾನಿಸಲಾಯಿತು. ತರಬೇತುದಾರರಾದ ನೌಜಲ್ ಮುಲ್ಕಿ ಹಾಗೂ ಅಬ್ದುಲ್ ರಜಾಕ್ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಉದ್ಯೋಗದತ್ತ ಸಾಗುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ವಿ ಅಭ್ಯರ್ಥಿಗಳು ಪ್ರೇರಣೆಯಾಗಬೇಕು ಎಂಬ ಆಶಯ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ನಮ್ಮ ನಾಡ ಒಕ್ಕೂಟದ ಕೇಂದ್ರ ಸಮಿತಿ ಕೋಶಾಧಿಕಾರಿ ಫಿರು ಸಾಹೇಬ್ ಉಡುಪಿ, ಟ್ರಸ್ಟಿಗಳಾದ ಮೊಹಮ್ಮದ್ ಹುಸೇನ್ ಕಾರ್ಕಳ ಹಾಗೂ ಅಬ್ದುಲ್ ಹಮೀದ್ ಮೂಡಬಿದ್ರೆ, ಉಡುಪಿ ಜಿಲ್ಲಾ ಅಧ್ಯಕ್ಷ ನಕ್ವ ಯಾಹ್ಯ, ಪುರಸಭೆ ಸದಸ್ಯ ಅಶ್ಫಾಕ್ ಅಹ್ಮದ್ ಕಾರ್ಕಳ, ಕೆ.ಎಂ.ಇ.ಎಸ್ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ನಾಸೀರ್ ಶೇಖ್, ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್ ಹಾಗೂ ಆಯಿಷಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಖಾಸಿಂ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮೌಲಾನಾ ಹಫೀಝ್ ಕಾಸಿಮಿ ಅವರು ಕಿರಾತ್ ಪಠಿಸಿದರು. ಎನ್.ಎಸ್. ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ಹಾಗೂ ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಸಮುದಾಯದ ಯುವಜನರು ಹೆಚ್ಚಿನ ಸಾಧನೆ ಮಾಡುವ ಅಗತ್ಯವನ್ನು ವಿವರಿಸಿದರು.
ಕಾರ್ಯಕ್ರಮವನ್ನು ಎನ್.ಎಸ್. ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಶುಕುರ್ ಬೆಳ್ವೆ ನಿರೂಪಿಸಿದರು. ಎನ್.ಎಸ್. ಅಕಾಡೆಮಿ ಕೋಶಾಧಿಕಾರಿ ಶಾಕಿರ್ ಶೀಶ್ ಸ್ವಾಗತಿಸಿದರು. ಎನ್.ಎನ್.ಓ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಮುಸ್ತಾಫಾ ಕಾರ್ಕಳ ವಂದಿಸಿದರು.





