ಬೆಲೆ ಏರಿಕೆ, ನಿರುದ್ಯೋಗ, ನೀಟ್ ಹಗರಣದ ಬಗ್ಗೆ ಮೌನವಹಿಸಿ ಆರ್‌ಎಸ್‌ಎಸ್ ವಿಚಾರದಲ್ಲಿ ಬಿಜೆಪಿ ನಾಟಕ ಮಾಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್‌ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಡುಪಿ ನಗರಸಭೆಯ ನಾಮ ನಿರ್ದೇಶಿತ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಅವರು ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್ ಹಾಗೂ ಗ್ಯಾಸ್ ದರ ಹೆಚ್ಚಳ, ನೀಟ್ ಮತ್ತು ಸಿಬಿಎಸ್‌ಇ ಪರೀಕ್ಷಾ ಅವ್ಯವಹಾರಗಳು, ನಿರುದ್ಯೋಗ ಸಮಸ್ಯೆ ಮುಂತಾದ ಗಂಭೀರ ವಿಷಯಗಳ ಬಗ್ಗೆ ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ ಎಂದು ಅವರು ಆರೋಪಿಸಿದರು.
ಆರ್‌ಎಸ್‌ಎಸ್ ನೋಂದಣಿ ವಿಚಾರದಲ್ಲಿ ಮಾತ್ರ ಬಿಜೆಪಿ ನಾಯಕರು ರಾಜಕೀಯ ನಾಟಕ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗಿಂತ ಸಂಘಟನೆಗಳ ಪರವಾಗಿ ವರ್ತಿಸುತ್ತಿರುವುದು ರಾಜ್ಯ ಮತ್ತು ದೇಶದ ದುರಾದೃಷ್ಟಕರ ಬೆಳವಣಿಗೆಯಾಗಿದೆ ಎಂದು ಅವರು ಟೀಕಿಸಿದರು.
ಹಿಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದಾಗ ಯಾವುದೇ ಕ್ರಮ ಕೈಗೊಳ್ಳದವರು, ಈಗ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಈ ಮೋಸದ ರಾಜಕೀಯವನ್ನು ಜನರು ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.






