ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಬಹಿರಂಗ ಸಭೆಯಲ್ಲಿ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಖಂಡಿಸಿ ಜುಲೈ 31ರಂದು ಉಡುಪಿ ಜಟ್ಕಾ ಸ್ಟ್ಯಾಂಡ್ (ಬಸ್ ನಿಲ್ದಾಣ) ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ.
ಇಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಶಾಸಕ ಯಶಪಾಲ್ ಸುವರ್ಣ ಅವರು ಜನಪ್ರತಿನಿಧಿಗೆ ತಕ್ಕುದಲ್ಲದ ಕಳಪೆ ಹಾಗೂ ಆಕ್ಷೇಪಾರ್ಹ ಭಾಷೆಯನ್ನು ಬಳಸಿರುವುದು ಖಂಡನೀಯ ಎಂದು ಆರೋಪಿಸಿದರು.
ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ತಮ್ಮ ಮಾತು ಹಾಗೂ ವರ್ತನೆಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸೌಜನ್ಯದ ರಾಜಕೀಯವನ್ನು ಕಾಪಾಡುವ ಉದ್ದೇಶದಿಂದ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಉಡುಪಿ ಜಟ್ಕಾ ಸ್ಟ್ಯಾಂಡ್ ಬಳಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸುಧೀರ್ ಕುಮಾರ್ ಮರೋಳಿ ಹಾಗೂ ನಿಕೇತ್ ರಾಜ್ ಮೌರ್ಯ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದು, ಪಕ್ಷದ ವಿವಿಧ ಬ್ಲಾಕ್‌ಗಳ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೆ. ಜಯಪ್ರಕಾಶ್ ಹೆಗ್ಡೆ, ಪ್ರಸಾದ್ ರಾಜ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಳೆಬೈಲ್, ಜ್ಯೋತಿ ಹೆಬ್ಬಾರ್, ಹರೀಶ್ ಕಿಣಿ ಅಲೆವೂರು, ರಮೇಶ್ ಕಾಂಚನ್ ಹಾಗೂ ಪ್ರಶಾಂತ್ ಜತ್ತನ್ ಉಪಸ್ಥಿತರಿದ್ದರು.







