ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟ್‌ಔಟ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಇಬ್ಬರು ಆರೋಪಿಗಳೊಂದಿಗೆ ಪೊಲೀಸರು ಮಂಗಳವಾರ ಸ್ಥಳ ಮಹಜರು ನಡೆಸಿದರು.
ಪ್ರಕರಣದ ಆರೋಪಿಗಳಾದ ಉತ್ತರಾಖಂಡದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ಹಾಗೂ ಬಿಹಾರದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಅವರನ್ನು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಸ್ಥಳ ಮಹಜರು ನಡೆಸಿದರು.
ಮುದರಂಗಡಿಯಲ್ಲಿ ಶೂಟೌಟ್ ನಡೆದ ಸ್ಥಳ ಹಾಗೂ ಆರೋಪಿಗಳು ಸಂಚರಿಸಿದ ಮಾರ್ಗದಲ್ಲಿ ಪೊಲೀಸ್ ತಂಡವು ಆರೋಪಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿತು. ಶೂಟೌಟ್ ಬಳಿಕ ಪರಾರಿಯಾಗಲು ಆರೋಪಿಗಳು ಬಳಸಿದ್ದ ಬೈಕ್‌ನ್ನು ಎರ್ಮಾಳ್ ಬಳಿ ಬಿಟ್ಟು, ಬಳಿಕ ಬಸ್‌ನಲ್ಲಿ ತೆರಳಿದ್ದರು ಎನ್ನಲಾಗಿದೆ.
ಆರೋಪಿಗಳು ಬೈಕ್ ಬಿಟ್ಟು ತೆರಳಿದ್ದ ಎರ್ಮಾಳ್ ಮಸೀದಿಯ ಮುಂಭಾಗಕ್ಕೂ ಪೊಲೀಸ್ ತಂಡವು ಆರೋಪಿಗಳೊಂದಿಗೆ ತೆರಳಿ ಸ್ಥಳ ಮಹಜರು ನಡೆಸಿತು. ಈ ಸಂದರ್ಭದಲ್ಲಿ ಶಿರ್ವ ಠಾಣಾಧಿಕಾರಿಗಳು ಹಾಗೂ ಉಡುಪಿ ಪೊಲೀಸರ ತಂಡ ಉಪಸ್ಥಿತರಿದ್ದರು.






