ವಾಣಿಜ್ಯ ಪೈಲಟ್ ಆಗಬೇಕೆಂಬ ಬಾಲ್ಯದ ಕನಸನ್ನು ಕಠಿಣ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸತತ ಪ್ರಯತ್ನದ ಮೂಲಕ ಕನಸು ನನಸಾಗಿಸಿರುವ ಇನ್ಯಾ ತಸ್ಕೀನ್, ಉಡುಪಿ ತಾಲ್ಲೂಕಿನ ಮೊದಲ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಈ ಸಾಧನೆ ವೈಯಕ್ತಿಕ ಯಶಸ್ಸಿನ ಜೊತೆಗೆ ತಮ್ಮ ಕುಟುಂಬ, ಬೈಲೂರು ಹಾಗೂ ಉಡುಪಿ ಜಿಲ್ಲೆಯ ಜನತೆ ಹೆಮ್ಮೆಪಡುವಂತಹ ಕ್ಷಣವಾಗಿದೆ.
ಕನಸು ಕಾಣುವುದು ಸುಲಭ. ಆದರೆ ಆ ಕನಸನ್ನು ಗುರಿಯಾಗಿಸಿಕೊಂಡು, ಅದನ್ನು ನನಸಾಗಿಸುವ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸಿನ ಶಿಖರ ತಲುಪುವುದು ನಿಜವಾದ ಸಾಧನೆ. ಅಂತಹ ಸಾಧನೆಯ ಮೂಲಕ ಉಡುಪಿ ನಗರದ ಬೈಲೂರಿನ ಯುವತಿ ಇನ್ಯಾ ತಸ್ಕೀನ್ ಗಮನ ಸೆಳೆದಿದ್ದಾರೆ.
ಇನ್ಯಾ ತಸ್ಮಿನ್ ಅವರು ಉಡುಪಿ ನಗರದ ಬೈಲೂರಿನ ಇಕ್ಲಾಕ್ ಅಹ್ಮದ್ ಮತ್ತು ಸಯ್ಯದ್ ತಬಸ್ಸುಮ್ ದಂಪತಿಯ ಪುತ್ರಿ. ವಿದ್ಯಾಭ್ಯಾಸದ ಹಂತದಲ್ಲಿಯೇ ಆಕಾಶದಲ್ಲಿ ವಿಮಾನ ಹಾರಿಸುವ ಕನಸನ್ನು ಕಂಡಿದ್ದ ಅವರು, ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ತಮ್ಮ ಗುರಿಯತ್ತ ದೃಢ ಹೆಜ್ಜೆ ಇಟ್ಟರು.
ವಾಣಿಜ್ಯ ಪೈಲಟ್ ಆಗುವುದು ಸಾಮಾನ್ಯ ವೃತ್ತಿ ಆಯ್ಕೆ ಅಲ್ಲ. ಕಠಿಣ ತರಬೇತಿ, ನಿರಂತರ ಅಧ್ಯಯನ, ತಾಂತ್ರಿಕ ಜ್ಞಾನ, ದೈಹಿಕ ಮತ್ತು ಮಾನಸಿಕ ಸಿದ್ಧತೆ ಸೇರಿದಂತೆ ಹಲವು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಾಗುತ್ತದೆ. ಈ ಸವಾಲುಗಳ ಅರಿವಿದ್ದರೂ ಇನ್ಯಾ ಅವರು ತಮ್ಮ ಕನಸಿನಿಂದ ಹಿಂದೆ ಸರಿಯಲಿಲ್ಲ.
ವಾಣಿಜ್ಯ ಪೈಲಟ್ ಆಗುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಇನ್ಯಾ ಅವರು Red Bird Flight Training Academyಯಲ್ಲಿ ಕಠಿಣ ತರಬೇತಿ ಪಡೆದರು. ವಿಮಾನಯಾನ ಕ್ಷೇತ್ರದ ಸೈದ್ಧಾಂತಿಕ ಜ್ಞಾನದಿಂದ ಹಿಡಿದು ಪ್ರಾಯೋಗಿಕ ತರಬೇತಿಯವರೆಗೆ ಹಲವು ಹಂತಗಳನ್ನು ಅವರು ಸಮರ್ಪಣೆಯಿಂದ ಪೂರ್ಣಗೊಳಿಸಿದರು.
ತರಬೇತಿಯ ಅವಧಿಯಲ್ಲಿ ಎದುರಾದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ ಅವರು, ಪ್ರತಿಯೊಂದು ಹಂತದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಪರಿಶ್ರಮಕ್ಕೆ ಪರ್ಯಾಯವಿಲ್ಲ ಎಂಬುದನ್ನು ತಮ್ಮ ಸಾಧನೆಯ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ.
ಅವರ ಪರಿಶ್ರಮಕ್ಕೆ ಅಂತಿಮವಾಗಿ ಯಶಸ್ಸಿನ ಮುದ್ರೆ ಬಿದ್ದಿದ್ದು ಫೆಬ್ರುವರಿ 2026ರಲ್ಲಿ. ಅವರು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ Commercial Pilot License (CPL) ಪಡೆದುಕೊಂಡರು. ಇದರೊಂದಿಗೆ ವಾಣಿಜ್ಯ ವಿಮಾನಯಾನ ಕ್ಷೇತ್ರಕ್ಕೆ ಕಾಲಿಡುವ ತಮ್ಮ ಬಹುದಿನಗಳ ಕನಸನ್ನು ಅವರು ನನಸಾಗಿಸಿಕೊಂಡಿದ್ದಾರೆ. ಉಡುಪಿ ತಾಲ್ಲೂಕಿನಿಂದ ಈ ಹಂತ ತಲುಪಿದ ಮೊದಲ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆ ಅವರ ಸಾಧನೆಗೆ ಮತ್ತಷ್ಟು ವಿಶೇಷತೆಯನ್ನು ನೀಡಿದೆ.
ಈದಿನ.ಕಾಮ್ ಜೊತೆ ಮಾತನಾಡಿದ ಪೈಲಟ್ ಇನ್ಯಾ ತಸ್ಕೀನ್, “ಮೊದಲಿಗೆ ಪೈಲಟ್ ಆಗುವ ಬಗ್ಗೆ ನನಗೆ ಯಾವುದೇ ಆಸಕ್ತಿ ಇರಲಿಲ್ಲ. ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಸಂದರ್ಭದಲ್ಲಿ ಒಮ್ಮೆ ದೆಹಲಿಗೆ ಹೋಗಿದ್ದೆವು. ಅಲ್ಲಿನ ಏರ್‌ಪೋರ್ಟ್ ನೋಡಿದಾಗ ನನಗೂ ಪೈಲಟ್ ಆಗಬೇಕು ಎಂಬ ಆಸೆ ಮೂಡಿತು” ಎಂದು ತಮ್ಮ ಪೈಲಟ್ ಕನಸಿನ ಆರಂಭವನ್ನು ನೆನಪಿಸಿಕೊಂಡರು.

ನಂತರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ದೆಹಲಿಯಲ್ಲಿ ಏವಿಯೇಷನ್ ಕೋರ್ಸ್‌ಗೆ ಸೇರ್ಪಡೆಗೊಂಡೆ. ಥಿಯರಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ಪ್ರಾಯೋಗಿಕ ಪರೀಕ್ಷೆಗಳನ್ನು ಎದುರಿಸಿ ಪೈಲಟ್ ಆಗುವ ಅರ್ಹತೆ ಪಡೆದುಕೊಂಡೆ ಎಂದು ಅವರು ತಿಳಿಸಿದರು.
“ಮೊದಲಿಗೆ ನಾನು ಪೈಲಟ್ ಆಗುವುದು ಬೇಡ ಎಂದು ಪೋಷಕರು ಹೇಳುತ್ತಿದ್ದರು. ಆದರೆ ನನ್ನ ಅಜ್ಜ-ಅಜ್ಜಿ ನನಗೆ ತುಂಬಾ ಪ್ರೋತ್ಸಾಹ ಹಾಗೂ ಬೆಂಬಲ ನೀಡಿದರು. ಅವರ ಸಹಕಾರದಿಂದ ನನ್ನ ಕನಸನ್ನು ನನಸಾಗಿಸಲು ಸಾಧ್ಯವಾಯಿತು” ಎಂದು ಇನ್ಯಾ ತಸ್ಮಿನ್ ಹೇಳಿದರು.
ಮುಂದಿನ ದಿನಗಳಲ್ಲಿ ವಾಣಿಜ್ಯ ಪೈಲಟ್ ಆಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದ್ದು, ವಿಮಾನಯಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಕನಸು ಹೊಂದಿದ್ದೇನೆ ಎಂದು ಅವರು ತಮ್ಮ ಭವಿಷ್ಯದ ಗುರಿಯನ್ನು ಹಂಚಿಕೊಂಡರು.
ಇನ್ಯಾ ಅವರ ಈ ಸಾಧನೆಯ ಹಿಂದೆ ಕುಟುಂಬದ ಪ್ರೋತ್ಸಾಹ ಮತ್ತು ಬೆಂಬಲವೂ ಮಹತ್ವದ ಪಾತ್ರ ವಹಿಸಿದೆ. ಮಗಳ ಕನಸಿಗೆ ಬೆನ್ನೆಲುಬಾಗಿ ನಿಂತು, ಆಕೆಯ ಗುರಿಯತ್ತ ಸಾಗಲು ಪ್ರೋತ್ಸಾಹಿಸಿದ ತಂದೆ-ತಾಯಿಗೆ ಇದೀಗ ಹೆಮ್ಮೆಯ ಕ್ಷಣವಾಗಿದೆ. ತೀರ್ಥಹಳ್ಳಿಯ ನಿವೃತ್ತ ಶಿಕ್ಷಕರಾದ ಸಯ್ಯದ್ ಅಬ್ದುಲ್ ಖಾದರ್ ಮತ್ತು ಸಿರಾಜುನ್ನಿಸಾ ಅವರು ತಮ್ಮ ಮೊಮ್ಮಗಳ ಈ ಮಹತ್ವದ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಕುಟುಂಬದ ಹಿರಿಯರಿಂದ ದೊರೆತ ಪ್ರೋತ್ಸಾಹವೂ ಇನ್ಯಾ ಅವರ ಸಾಧನೆಗೆ ಮತ್ತಷ್ಟು ಬಲ ನೀಡಿದೆ.
“ಮಗಳು ಪೈಲಟ್ ಆಗುತ್ತೇನೆ ಎಂದು ಹೇಳಿದಾಗ ಆರಂಭದಲ್ಲಿ ನಾನು ಬೇಡ ಎಂದು ಹೇಳಿದ್ದೆ. ಪೈಲಟ್ ವೃತ್ತಿಯ ಬಗ್ಗೆ ನಮಗೆ ಅಷ್ಟೊಂದು ತಿಳುವಳಿಕೆ ಇರಲಿಲ್ಲ. ಬಳಿಕ ಆ ಕ್ಷೇತ್ರದ ಬಗ್ಗೆ ತಿಳಿದುಕೊಂಡಾಗ ಮಗಳ ನಿರ್ಧಾರದ ಬಗ್ಗೆ ಹೆಮ್ಮೆಯಾಯಿತು” ಎಂದು ಇನ್ಯಾ ತಸ್ಮಿನ್ ಅವರ ತಾಯಿ ಸಯ್ಯದ್ ತಬಸ್ಸುಮ್ ಭಾವುಕರಾಗಿ ಹೇಳಿದರು.
ಈದಿನ.ಕಾಮ್ ಜೊತೆ ಮಾತನಾಡಿದ ಅವರು, “ನಮ್ಮ ಕುಟುಂಬದಲ್ಲಿ ಈವರೆಗೆ ಯಾರೂ ಪೈಲಟ್ ಆಗಿಲ್ಲ. ಮಗಳು ವಾಣಿಜ್ಯ ಪೈಲಟ್ ಆಗಿರುವುದು ತುಂಬಾ ಸಂತೋಷ ಮತ್ತು ಹೆಮ್ಮೆಯ ವಿಚಾರ. ನಮಗಿಂತಲೂ ಹೆಚ್ಚು ಸಂತೋಷ ಅವಳ ಅಜ್ಜ-ಅಜ್ಜಿಗೆ. ಅವರು ಮಗಳಿಗೆ ಪ್ರತಿಯೊಂದು ಹಂತದಲ್ಲೂ ತುಂಬಾ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಾರೆ” ಎಂದರು.

“ನನ್ನ ತಂದೆಯೂ ಮಗಳಿಗೆ ತುಂಬಾ ಬೆಂಬಲ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಅವರು ನಿಧನರಾದರು. ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ, ಮೊಮ್ಮಗಳು ಪೈಲಟ್ ಆಗಿರುವುದನ್ನು ನೋಡಿ ಇನ್ನಷ್ಟು ಸಂತೋಷಪಡುತ್ತಿದ್ದರು” ಎಂದು ಸಯ್ಯದ್ ತಬಸ್ಸುಮ್ ಭಾವುಕರಾದರು.
“ಮಕ್ಕಳು ತಂದೆ-ತಾಯಿಗೆ ಒಳ್ಳೆಯ ಹೆಸರು ತಂದುಕೊಡುವುದಕ್ಕಿಂತ ಹೆಚ್ಚಿನ ಸಂತೋಷ ಮತ್ತೊಂದಿಲ್ಲ. ಇನ್ಯಾ ತನ್ನ ಪರಿಶ್ರಮದ ಮೂಲಕ ಕುಟುಂಬಕ್ಕೆ ಹೆಮ್ಮೆ ತಂದಿದ್ದಾಳೆ. ಅವಳು ಇನ್ನೂ ಎತ್ತರಕ್ಕೆ ಹಾರಲಿ, ಜೀವನದಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ ಎಂಬುದು ನಮ್ಮ ಹಾರೈಕೆ” ಎಂದು ಅವರು ಶುಭ ಹಾರೈಸಿದರು.
ಇನ್ಯಾ ತಸ್ಕೀನ್ ಅವರ ಸಾಧನೆ ಕೇವಲ ಒಂದು ವೃತ್ತಿಪರ ಅರ್ಹತೆಯನ್ನು ಪಡೆದುಕೊಂಡ ಕಥೆಯಲ್ಲ. ಅದು ಕನಸು, ಸಂಕಲ್ಪ ಮತ್ತು ಪರಿಶ್ರಮ ಒಂದಾದಾಗ ಅಸಾಧ್ಯವೆನಿಸುವ ಗುರಿಯನ್ನೂ ಸಾಧಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆ.
ವಿಶೇಷವಾಗಿ ವಿಮಾನಯಾನ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಯುವತಿಯರಿಗೆ ಇನ್ಯಾ ಅವರ ಸಾಧನೆ ಹೊಸ ಆತ್ಮವಿಶ್ವಾಸವನ್ನು ಮೂಡಿಸುವಂತಿದೆ. ಸಾಂಪ್ರದಾಯಿಕ ವೃತ್ತಿಗಳಾಚೆಗೆ ಹೊಸ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು, ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಬಹುದು ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಇನ್ನಷ್ಟು ಎತ್ತರಕ್ಕೆ ಹಾರಲಿ…
ಬೈಲೂರಿನಿಂದ ಆರಂಭವಾದ ಇನ್ಯಾ ಅವರ ಕನಸಿನ ಪಯಣ ಇದೀಗ ಆಕಾಶದತ್ತ ಸಾಗುತ್ತಿದೆ. ಉಡುಪಿ ತಾಲ್ಲೂಕಿನ ಮೊದಲ ವಾಣಿಜ್ಯ ಪೈಲಟ್ ಎಂಬ ಐತಿಹಾಸಿಕ ಸಾಧನೆಯೊಂದಿಗೆ ಅವರು ತಮ್ಮ ಕುಟುಂಬದ ಹೆಸರನ್ನು ಮಾತ್ರವಲ್ಲದೆ ಉಡುಪಿ ಜಿಲ್ಲೆಯ ಕೀರ್ತಿಯನ್ನೂ ಹೆಚ್ಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಹುದ್ದೆಗಳನ್ನು ಅಲಂಕರಿಸಿ, ತಮ್ಮ ವೃತ್ತಿಜೀವನದಲ್ಲಿ ಯಶಸ್ಸಿನ ಹೊಸ ಮೈಲಿಗಲ್ಲುಗಳನ್ನು ನಿರ್ಮಿಸಲಿ. ಅವರ ಸಾಧನೆ ಇನ್ನೂ ಅನೇಕ ಯುವಜನರಿಗೆ ಕನಸು ಕಾಣಲು, ಗುರಿ ಹೊಂದಲು ಮತ್ತು ಆ ಗುರಿಯನ್ನು ಸಾಧಿಸಲು ಪ್ರೇರಣೆಯಾಗಲಿ ಎಂಬುದು ಎಲ್ಲರ ಆಶಯ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




