ಪ್ರಧಾನಿ ನರೇಂದ್ರ ಮೋದಿ ಅವರು ಟೆಲಿಪ್ರಾಂಪ್ಟರ್ ಬಳಸದೆ ಸಂಪೂರ್ಣ ‘ವಂದೇ ಮಾತರಂ’ ಹಾಡಿದರೆ, ತಾವು ಅವರಿಗೆ ಹಾರ ಹಾಕಿ ಸನ್ಮಾನಿಸುವುದಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಸವಾಲು ಹಾಕಿದ್ದಾರೆ.
ಬಿಜೆಪಿ ದೇಶಭಕ್ತಿ ಕುರಿತು ಮಾತನಾಡುತ್ತಿರುವುದನ್ನು ಪ್ರಶ್ನಿಸಿದ ಸಂಜಯ್ ಸಿಂಗ್, ‘ವಂದೇ ಮಾತರಂ’ ಘೋಷಣೆ ಕೂಗಿದ್ದಕ್ಕಾಗಿ ಜೈಲು ಸೇರಿದ ಬಿಜೆಪಿಯ ನಾಲ್ವರು ಪೂರ್ವಜರ ಹೆಸರನ್ನು ಹೇಳುವಂತೆ ಸವಾಲು ಹಾಕಿದರು. ಬಿಜೆಪಿಗೆ ಅಂತಹ ನಾಲ್ಕು ಹೆಸರುಗಳನ್ನೂ ಹೇಳಲು ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು.
‘ಕ್ವಿಟ್ ಇಂಡಿಯಾ ಚಳವಳಿಯನ್ನು ಹತ್ತಿಕ್ಕುವಂತೆ ಶ್ಯಾಮ ಪ್ರಸಾದ್ ಮುಖರ್ಜಿ ಬ್ರಿಟಿಷ್ ಗವರ್ನರ್‌ಗೆ ಏಕೆ ಪತ್ರ ಬರೆದಿದ್ದರು? ಮುಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್‌ನೊಂದಿಗೆ ಮೂರು ರಾಜ್ಯಗಳಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಏಕೆ ಸರ್ಕಾರ ರಚಿಸಿದ್ದರು? ಎಲ್.ಕೆ. ಅಡ್ವಾಣಿ ಮತ್ತು ಜಸ್ವಂತ್ ಸಿಂಗ್ ಅವರು ಜಿನ್ನಾರನ್ನು ಏಕೆ ಹೊಗಳಿದ್ದರು?, ಆರ್‌ಎಸ್‌ಎಸ್ ತನ್ನ ಕೇಂದ್ರ ಕಚೇರಿಯಲ್ಲಿ 52 ವರ್ಷಗಳ ಕಾಲ ತ್ರಿವರ್ಣ ಧ್ವಜ ಹಾರಿಸದೇ ಇದ್ದದ್ದು ಏಕೆ?, ಆರ್‌ಎಸ್‌ಎಸ್ ಶಾಖೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸದೇ ಇರುವುದೇಕೆ?’ ಎಂದು ಸಿಂಗ್ ಪ್ರಶ್ನಿಸಿದ್ದಾರೆ.
1949ರ ಡಿಸೆಂಬರ್ 28ರಂದು ‘ಆರ್ಗನೈಸರ್’ ಪತ್ರಿಕೆಯಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಅಧಿಕಾರಿಗಳ ಪಾರ್ಟಿಗಳಲ್ಲಿ ಹಾಡುವ ‘ಮನರಂಜನೆಯ ಕಾರ್ಯಕ್ರಮ’ ಎಂದು ಬಣ್ಣಿಸಲಾಗಿತ್ತು. ಬಿಜೆಪಿ ನಾಯಕರು ಈಗ ದೇಶಭಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ತಮ್ಮದೇ ಇತಿಹಾಸವನ್ನು ಅವರು ಮರೆತಿರಬಹುದು. 1942ರಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಬ್ರಿಟಿಷ್ ಗವರ್ನರ್‌ಗೆ ಪತ್ರ ಬರೆದು ಕ್ವಿಟ್ ಇಂಡಿಯಾ ಚಳವಳಿಯನ್ನು ಹತ್ತಿಕ್ಕಬೇಕು ಎಂದು ಹೇಳಿದ್ದರು’ ಎಂದು ಆರೋಪಿಸಿದರು.
ಇದನ್ನೂ ಓದಿ: ಕೇಂದ್ರೀಯ ವಿದ್ಯಾಲಯ ಜತೆ ವಿಲೀನ ವಿರೋಧಿಸಿ ರಸ್ತೆಗಿಳಿದ ‘ಜೆನ್ ಆಲ್ಫಾ’: ಭೋಪಾಲ್‌ನಲ್ಲಿ ಶಾಲಾ ಮಕ್ಕಳ ಬೃಹತ್ ಪ್ರತಿಭಟನೆ
‘ವಂದೇ ಮಾತರಂ’ ಕುರಿತು ಮಾತನಾಡಿದ ಅವರು, 1950ರ ಜನವರಿ 24ರಂದು ಸಂವಿಧಾನ ಸಭೆ ‘ವಂದೇ ಮಾತರಂ’ ಅನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿತು. ಇದರಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಅಥವಾ ಜನಸಂಘದ ಯಾವುದೇ ಕೊಡುಗೆ ಇರಲಿಲ್ಲ. ಹಾಗಿದ್ದರೆ ಈ ವಿಚಾರದಲ್ಲಿ ಬಿಜೆಪಿ ಅಥವಾ ಅದರ ಪೂರ್ವಜರ ಕೊಡುಗೆ ಏನು?’ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಜನರಿಗೆ ಪದೇಪದೆ ನೆನಪಿಸಬೇಕು ಎಂದು ಹೇಳಿದ ಸಂಜಯ್ ಸಿಂಗ್, ಬಿಜೆಪಿ ನಾಯಕರು ತಮ್ಮ ಪೂರ್ವಜರ ಪಾತ್ರವನ್ನು ಮರೆಮಾಚಿಕೊಂಡು ದೇಶಭಕ್ತಿಯ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.




