ಕರ್ನಾಟಕದ 19 ಕಂದಾಯ ಜಿಲ್ಲೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಮಾನವಾಗಿ ವಿದ್ಯುತ್ ವಿತರಣಾ ಪರವಾನಗಿ ನೀಡುವಂತೆ ಟಾಟಾ ಪವರ್ ಕಂಪನಿ ಸಲ್ಲಿಸಿರುವ ಅರ್ಜಿಯು ರಾಜ್ಯದ ಸಾರ್ವಜನಿಕ ವಿದ್ಯುತ್ ವ್ಯವಸ್ಥೆಗೆ ಗಂಭೀರ ಅಪಾಯವನ್ನುಂಟು ಮಾಡಲಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕುಂದಾಪುರ ತಾಲೂಕು ಸಮಿತಿ ಇತ್ತೀಚೆಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಟಾಟಾ ಪವರ್ ಕಂಪನಿಯ ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸುದೀರ್ಘ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ.
ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಸಿಪಿಐಎಂ ಮುಖಂಡ ಚಂದ್ರಶೇಖರ್, “ಟಾಟಾ ಪವರ್ ಕಂಪನಿಯು ಕರ್ನಾಟಕದ ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ ಒಟ್ಟು 19 ಕಂದಾಯ ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಮಾನಾಂತರವಾಗಿ ವಿದ್ಯುತ್ ವಿತರಣೆ ನಡೆಸಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಪಕ್ಷ ತನ್ನ ವಿವರವಾದ ಆಕ್ಷೇಪಣೆಗಳನ್ನು ದಾಖಲಿಸಿದೆ” ಎಂದು ತಿಳಿಸಿದರು.
“ಈ ಅರ್ಜಿಯು ಕೇವಲ ಒಂದು ಖಾಸಗಿ ಕಂಪನಿಗೆ ಪರವಾನಗಿ ನೀಡುವ ವಿಚಾರವಲ್ಲ; ದೇಶದ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನೀತಿಯ ಮುಂದುವರಿದ ಭಾಗವಾಗಿದೆ” ಎಂದು ಸಿಪಿಐ(ಎಂ) ಆರೋಪಿಸಿದೆ.
“ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ತಿದ್ದುಪಡಿ ಮಸೂದೆಗಳನ್ನು ನಿರಂತರವಾಗಿ ಮಂಡಿಸಲಾಗುತ್ತಿದೆ. ನೀತಿ ಆಯೋಗವು ರಾಜ್ಯಗಳ ವಿದ್ಯುತ್ ವಿತರಣಾ ಕಂಪನಿಗಳನ್ನು ದುರ್ಬಲಗೊಳಿಸಿ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸುವ ಶಿಫಾರಸು ಮಾಡಿತ್ತು. ಅದರಂತೆ 2022ರ ವಿದ್ಯುತ್ ತಿದ್ದುಪಡಿ ಮಸೂದೆ ಹಾಗೂ ನಂತರದ 2025ರ ಕರಡು ತಿದ್ದುಪಡಿಗಳ ಮೂಲಕ ಸಾರ್ವಜನಿಕ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಹಂತ ಹಂತವಾಗಿ ಖಾಸಗಿಯವರಿಗೆ ಹಸ್ತಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದು ಅಸಮಧಾನ ವ್ಯಕ್ತಪಡಿಸಿದೆ.
ಈವರೆಗೂ ಒಂದು ವಿದ್ಯುತ್ ವಿತರಣಾ ಕಂಪನಿಯೇ ವಿದ್ಯುತ್ ಖರೀದಿಸುವುದು, ಸಾಗಿಸುವುದು, ವಿತರಿಸುವುದು ಹಾಗೂ ಗ್ರಾಹಕರಿಗೆ ಬಿಲ್ ಮಾಡುವ ಕೆಲಸಗಳನ್ನು ನಿರ್ವಹಿಸುತ್ತಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ವಿದ್ಯುತ್ ಸಾಗಾಣಿಕೆಗಾಗಿ ಇರುವ ತಂತಿಗಳ ಜಾಲವು ಸರ್ಕಾರಿ ಕಂಪನಿಗಳಲ್ಲೇ ಉಳಿದು, ಅದೇ ಜಾಲವನ್ನು ಬಳಸಿಕೊಂಡು ಖಾಸಗಿ ಕಂಪನಿಗಳು ವಿದ್ಯುತ್ ಮಾರಾಟ ನಡೆಸುವ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದ ಸಾರ್ವಜನಿಕ ಹಣದಿಂದ ನಿರ್ಮಿಸಲಾದ ಮೂಲಸೌಕರ್ಯವನ್ನು ಖಾಸಗಿ ಕಂಪನಿಗಳು ಯಾವುದೇ ದೊಡ್ಡ ಹೂಡಿಕೆ ಮಾಡದೇ ಬಳಸಿಕೊಂಡು ಲಾಭ ಗಳಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಟಾಟಾ ಪವರ್ ಕಂಪನಿಯ ಅರ್ಜಿಯಲ್ಲಿಯೇ ಹಲವು ಲೋಪಗಳಿವೆ ಎಂದು ಪಕ್ಷ ಆಕ್ಷೇಪ ವ್ಯಕ್ತಪಡಿಸಿದ್ದು, “ಕಂಪನಿಯು ತನ್ನದೇ ವಿದ್ಯುತ್ ವಿತರಣಾ ಜಾಲವನ್ನು ಕರ್ನಾಟಕದಲ್ಲಿ ನಿರ್ಮಿಸಿರುವುದಿಲ್ಲ. ವಿದ್ಯುಚ್ಛಕ್ತಿಯನ್ನು ಯಾವ ಮೂಲದಿಂದ ಖರೀದಿಸಲಿದೆ, ಎಷ್ಟು ಪ್ರಮಾಣದಲ್ಲಿ ಖರೀದಿಸಲಿದೆ, ತಗುಲುವ ವೆಚ್ಚ ಎಷ್ಟು, ಅಗತ್ಯವಿರುವ ವಿದ್ಯುತ್ ಉಪಕೇಂದ್ರಗಳು, ಟ್ರಾನ್ಸ್‌ಫಾರ್ಮರ್‌ಗಳು, ವೋಲ್ಟೇಜ್ ನಿಯಂತ್ರಣ ಕೇಂದ್ರಗಳು, ತಾಂತ್ರಿಕ ಸಿಬ್ಬಂದಿ, ಎಂಜಿನಿಯರ್‌ಗಳು ಹಾಗೂ ಸೇವಾ ವ್ಯವಸ್ಥೆಯನ್ನು ಹೇಗೆ ರೂಪಿಸಲಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಿರುವಾಗ, ಅರ್ಜಿಯು ಅಪೂರ್ಣವಾಗಿದ್ದು ಪರವಾನಗಿ ಪಡೆಯಲು ಬೇಕಿರುವ ಮಾನದಂಡಗಳನ್ನು ಒಳಗೊಂಡಿಲ್ಲ” ಎಂದು ಆರೋಪಿಸಿದ್ದಾರೆ.
ವಿದ್ಯುತ್ ಕಾಯ್ದೆ–2003ರ ಸೆಕ್ಷನ್ 14ರ ಪ್ರಕಾರ ಒಂದೇ ಪ್ರದೇಶದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಪಡೆಯುವ ಕಂಪನಿಯು ತನ್ನದೇ ಆದ ವಿತರಣಾ ವ್ಯವಸ್ಥೆಯನ್ನು ಹೊಂದಿರಬೇಕು ಎಂಬ ಅಂಶವನ್ನು ಪಕ್ಷ ವಿಶೇಷವಾಗಿ ಉಲ್ಲೇಖಿಸಿದೆ. ಕರ್ನಾಟಕದಲ್ಲಿ ಅಂತಹ ಯಾವುದೇ ಮೂಲಸೌಕರ್ಯವನ್ನು ಟಾಟಾ ಪವರ್ ಹೊಂದಿಲ್ಲದಿರುವುದರಿಂದ ಅದರ ಅರ್ಜಿ ಕಾನೂನುಬದ್ಧವಾಗಿಯೂ ಪ್ರಶ್ನಾರ್ಹವಾಗಿದೆ ಎಂದು ಹೇಳಲಾಗಿದೆ.
“ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳು ಈಗಾಗಲೇ ಉತ್ತಮ ಸೇವೆ ಒದಗಿಸುತ್ತಿವೆ. ರಾಜ್ಯದ ಯಾವುದೇ ಭಾಗದಲ್ಲೂ ವಿದ್ಯುತ್ ಕೊರತೆಯಿಂದಾಗಿ ಖಾಸಗಿ ಕಂಪನಿಯನ್ನು ಕರೆತರುವಂತಹ ಪರಿಸ್ಥಿತಿ ಇಲ್ಲ. ಹೊಸ ಕೈಗಾರಿಕೆಗಳು, ಹೊಸ ಬಡಾವಣೆಗಳು ಅಥವಾ ಹೆಚ್ಚುವರಿ ಬೇಡಿಕೆಯನ್ನು ನಿಭಾಯಿಸುವ ಸಾಮರ್ಥ್ಯ ಸರ್ಕಾರಿ ಕಂಪನಿಗಳಿಗೆ ಇದೆ. ಹೀಗಿರುವಾಗ ಖಾಸಗಿ ಕಂಪನಿಗೆ ಅವಕಾಶ ನೀಡುವ ಅಗತ್ಯವೇ ಇಲ್ಲ” ಎಂದು ಸಿಪಿಐ(ಎಂ) ಸ್ಪಷ್ಟಪಡಿಸಿದೆ.
“ಖಾಸಗಿ ಕಂಪನಿಗಳ ಪ್ರವೇಶದಿಂದ ಕ್ರಾಸ್ ಸಬ್ಸಿಡಿ ವ್ಯವಸ್ಥೆ ಸಂಪೂರ್ಣ ಕುಸಿಯಲಿದೆ ಎಂಬುದು ಪಕ್ಷದ ಪ್ರಮುಖ ಆತಂಕವಾಗಿದೆ. ಪ್ರಸ್ತುತ ಕೈಗಾರಿಕೆ ಹಾಗೂ ವಾಣಿಜ್ಯ ಗ್ರಾಹಕರಿಂದ ಬರುವ ಆದಾಯದ ಮೂಲಕ ರೈತರು, ಗೃಹ ಬಳಕೆದಾರರು, ಬಡವರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸಲಾಗುತ್ತಿದೆ. ಖಾಸಗಿ ಕಂಪನಿಗಳು ಹೆಚ್ಚಿನ ಲಾಭದಾಯಕ ಗ್ರಾಹಕರನ್ನು ಮಾತ್ರ ಆಯ್ಕೆ ಮಾಡಿಕೊಂಡರೆ ಸರ್ಕಾರಿ ಕಂಪನಿಗಳ ಆದಾಯ ಕ್ಷೀಣಿಸಿ, ಕೃಷಿ ಮತ್ತು ಗೃಹ ಬಳಕೆದಾರರಿಗೆ ಸಿಗುತ್ತಿರುವ ಸಬ್ಸಿಡಿಗಳು ಹಂತ ಹಂತವಾಗಿ ಕೊನೆಗೊಳ್ಳುವ ಅಪಾಯವಿದೆ” ಎಂದು ಪಕ್ಷ ಆತಂಕ ಹೊರಹಾಕಿದೆ.
ಕರ್ನಾಟಕದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್‌ಸೆಟ್‌ಗಳಿದ್ದು, ಈ 19 ಜಿಲ್ಲೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ಪಂಪ್‌ಸೆಟ್‌ಗಳಿವೆ. ಖಾಸಗೀಕರಣದ ನಂತರ ಸ್ಮಾರ್ಟ್ ಮೀಟರ್, ನೇರ ನಗದು ವರ್ಗಾವಣೆ ಹಾಗೂ ಲಾಭಾಧಾರಿತ ದರ ವ್ಯವಸ್ಥೆ ಜಾರಿಯಾದರೆ ರೈತರ ಮೇಲಿನ ಆರ್ಥಿಕ ಹೊರೆ ಹೆಚ್ಚಲಿದೆ. ಉಚಿತ ವಿದ್ಯುತ್ ಯೋಜನೆಗಳು ಮತ್ತು ಕೃಷಿ ಸಬ್ಸಿಡಿಗಳನ್ನು ಮುಂದುವರಿಸುವುದು ರಾಜ್ಯ ಸರ್ಕಾರಕ್ಕೂ ಕಷ್ಟಕರವಾಗಲಿದೆ ಎಂದು ಸಿಪಿಐ(ಎಂ) ಎಚ್ಚರಿಸಿದೆ.
ಉದ್ಯೋಗದ ವಿಚಾರದಲ್ಲಿಯೂ ಪಕ್ಷ ಗಂಭೀರ ಆತಂಕ ವ್ಯಕ್ತಪಡಿಸಿದೆ, “ಸರ್ಕಾರಿ ಕಂಪನಿಗಳಂತೆ ಖಾಸಗಿ ಕಂಪನಿಗಳು ಖಾಯಂ ಉದ್ಯೋಗಿಗಳನ್ನು ನೇಮಕ ಮಾಡದೆಯೆ, ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿಯನ್ನು ಅನುಸರಿಸುತ್ತವೆ. ಇದರಿಂದ ಉದ್ಯೋಗ ಭದ್ರತೆ ಕಡಿಮೆಯಾಗುವುದರ ಜೊತೆಗೆ ಸೇವೆಯ ಗುಣಮಟ್ಟಕ್ಕೂ ಧಕ್ಕೆಯಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದೆ.
“ಟಾಟಾ ಪವರ್ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮುಂಬೈ, ಅಜ್ಮೇರ್, ದೆಹಲಿ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ದುಬಾರಿ ವಿದ್ಯುತ್ ಬಿಲ್, ಮೀಟರ್ ದೋಷಗಳು, ಸೇವಾ ವಿಳಂಬ, ವಿದ್ಯುತ್ ವ್ಯತ್ಯಯ ಹಾಗೂ ಗ್ರಾಹಕರ ದೂರುಗಳ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿವೆ” ಎಂದು ಸಿಪಿಐ(ಎಂ) ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ವಿದ್ಯುತ್ ವಿತರಣೆಯ ಅನುಭವವೂ ಕಂಪನಿಗೆ ಇಲ್ಲ. ರಾಜ್ಯದ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳ ಆರ್ಥಿಕ ಸ್ಥಿರತೆ, ಸಾರ್ವಜನಿಕ ಮೂಲಸೌಕರ್ಯಗಳ ರಕ್ಷಣೆ, ರೈತರ ಹಿತಾಸಕ್ತಿ, ಬಡ ಗ್ರಾಹಕರ ರಕ್ಷಣೆ ಹಾಗೂ ರಾಜ್ಯ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಉಳಿಸುವ ದೃಷ್ಟಿಯಿಂದ ಟಾಟಾ ಪವರ್ ಕಂಪನಿಗೆ ಯಾವುದೇ ರೀತಿಯ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡಬಾರದು” ಎಂದು ಸಿಪಿಐ(ಎಂ) ಕುಂದಾಪುರ ತಾಲೂಕು ಸಮಿತಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವನ್ನು ಆಗ್ರಹಿಸಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.






