ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ ಫೋಟೋಗ್ರಫಿಯ ಪ್ರಾಯೋಗಿಕ ತರಬೇತಿ
ತುಮಕೂರು: ಮಾಧ್ಯಮ ಕ್ಷೇತ್ರದ ಕೇವಲ ಸಿದ್ಧಾಂತವಲ್ಲ, ಅದರ ನೈಜ ಅನುಭವವನ್ನೇ ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಿದ್ದ ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ರೇಡಿಯೋ ಕಾರ್ಯಕ್ರಮ ನಿರ್ಮಾಣದಿಂದ ಹಿಡಿದು ಫೋಟೋಗ್ರಫಿಯವರೆಗೆ ಹಲವು ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿತರು.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜು, ಆದಿಚುಂಚನಗಿರಿ ವಿಶ್ವವಿದ್ಯಾಲಯ ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದ ಎರಡನೇ ದಿನ ರೇಡಿಯೋ ಮಾಧ್ಯಮದ ವಿವಿಧ ಆಯಾಮಗಳತ್ತ ಗಮನ ಹರಿಸಲಾಯಿತು.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ ಸಿ. ಅವರು ರೇಡಿಯೋ ಸಂದರ್ಶನದ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ವಿವಿಧ ರೇಡಿಯೋ ಸಂದರ್ಶನಗಳನ್ನು ಕೇಳಿಸಿ, ಸಂದರ್ಶನ ನಡೆಸುವ ವಿಧಾನ, ಪ್ರಶ್ನೆಗಳನ್ನು ರೂಪಿಸುವಿಕೆ ಹಾಗೂ ಸಂದರ್ಶನದ ಕೌಶಲ್ಯಗಳನ್ನು ವಿವರಿಸಿದರು. ಬಳಿಕ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ, ವಿವಿಧ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಂದರ್ಶನ ನಡೆಸುವ ಪ್ರಾಯೋಗಿಕ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳು ನಡೆಸಿದ ಸಂದರ್ಶನಗಳ ಧ್ವನಿಮುದ್ರಣವನ್ನು ಕೇಳಿಸಿ, ಅವುಗಳಲ್ಲಿನ ಸರಿ-ತಪ್ಪುಗಳನ್ನು ವಿಶ್ಲೇಷಿಸಲಾಯಿತು.
ನಂತರ ಸಹಾಯಕ ಪ್ರಾಧ್ಯಾಪಕಿ ಕೋಕಿಲ ಎಂ.ಎಸ್. ಅವರು ರೇಡಿಯೋ ರೂಪಕಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ನೀಡಿದರು. ವಿವಿಧ ಬಗೆಯ ರೇಡಿಯೋ ರೂಪಕಗಳನ್ನು ಕೇಳಿಸಿ, ಅವುಗಳ ರಚನೆ ಹಾಗೂ ಬರವಣಿಗೆಯ ವಿಧಾನವನ್ನು ವಿವರಿಸಿದರು. ವಿದ್ಯಾರ್ಥಿಗಳಿಂದಲೇ ರೂಪಕಗಳ ಬರಹ ಸಿದ್ಧಪಡಿಸಿ ಪ್ರಾಯೋಗಿಕವಾಗಿ ತರಬೇತಿ ನೀಡಿದರು.
ರೇಡಿಯೋ ಕಾರ್ಯಕ್ರಮ ನಿರ್ಮಾಣ ಕುರಿತು ನಡೆದ ಗೋಷ್ಠಿಯಲ್ಲಿ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಎಂ.ಪಿ. ಅವರು ಆರ್‌ಜೆ, ಜಿಂಗಲ್ಸ್ ಹಾಗೂ ಉದ್ಘೋಷಣೆಯ ಕುರಿತು ಮಾಹಿತಿ ನೀಡಿದರು. ಆರ್‌ಜೆ ಆಗಲು ಅಗತ್ಯವಿರುವ ಅರ್ಹತೆಗಳು, ಗುಣಲಕ್ಷಣಗಳು, ಭಾಷೆಯ ಪ್ರಾಮುಖ್ಯತೆ, ಧ್ವನಿಯ ಏರಿಳಿತ ಹಾಗೂ ಹಿನ್ನೆಲೆ ಧ್ವನಿಯ ಬಳಕೆಯನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ ಪ್ರತಿ ತಂಡಕ್ಕೂ ವಿಭಿನ್ನ ರೇಡಿಯೋ ಕಾರ್ಯಕ್ರಮಗಳ ಪರಿಕಲ್ಪನೆ ನೀಡಲಾಯಿತು. ಕಾರ್ಯಕ್ರಮದ ಬರವಣಿಗೆಯಿಂದ ಹಿಡಿದು ನಿರೂಪಣೆ ಹಾಗೂ ಪ್ರಸ್ತುತಿಯವರೆಗೆ ವಿದ್ಯಾರ್ಥಿಗಳೇ ಸಿದ್ಧಪಡಿಸಿ ಪ್ರದರ್ಶಿಸಿದ್ದು ಕಾರ್ಯಾಗಾರದ ಪ್ರಮುಖ ಆಕರ್ಷಣೆಯಾಗಿತ್ತು.

ಕ್ಯಾಮೆರಾ ಕೈಗೆತ್ತಿಕೊಂಡ ವಿದ್ಯಾರ್ಥಿಗಳು
ಕಾರ್ಯಾಗಾರದ ಮೂರನೇ ದಿನ ಫೋಟೋಗ್ರಫಿ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಯಿತು. ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಉಪನ್ಯಾಸಕ, ಚಲನಚಿತ್ರ ನಟ ಹಾಗೂ ನಿರ್ಮಾಪಕ ನವೀನ್ ಎನ್.ಜಿ. ಅವರು ವಿದ್ಯಾರ್ಥಿಗಳಿಗೆ ಫೋಟೋಗ್ರಫಿಯ ವಿವಿಧ ತಂತ್ರಗಳನ್ನು ಪರಿಚಯಿಸಿದರು.

ಫೋಟೋಗ್ರಫಿಯ ಮೂಲ ಪರಿಕಲ್ಪನೆಗಳು, ಕ್ಯಾಮೆರಾ ಕೋನಗಳು, ಕ್ಯಾಮೆರಾ ಚಲನೆ, ಬೆಳಕಿನ ಬಳಕೆ, ಶಟರ್ ವೇಗ, ಲೆನ್ಸ್ ಆಯ್ಕೆ, ಫ್ರೇಮಿಂಗ್, ವಿಷಯ ಆಯ್ಕೆ ಹಾಗೂ ಪ್ರೊಫೈಲ್ ಚಿತ್ರಗಳ ಸೆರೆಹಿಡಿಯುವಿಕೆ ಸೇರಿದಂತೆ ಛಾಯಾಗ್ರಹಣದ ವಿವಿಧ ಆಯಾಮಗಳನ್ನು ಅವರು ವಿವರಿಸಿದರು.
ಕೇವಲ ಉಪನ್ಯಾಸಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳ ಕೈಗೆ ಕ್ಯಾಮೆರಾ ನೀಡಿ ಅವರಿಂದಲೇ ಛಾಯಾಚಿತ್ರಗಳನ್ನು ಸೆರೆಹಿಡಿಸುವ ಮೂಲಕ ಪ್ರಾಯೋಗಿಕ ತರಬೇತಿ ನೀಡಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿ ಸೆರೆಹಿಡಿದ ಚಿತ್ರಗಳನ್ನು ಪರಿಶೀಲಿಸಿ, ಅವುಗಳಲ್ಲಿನ ತಾಂತ್ರಿಕ ಅಂಶಗಳು ಹಾಗೂ ಸುಧಾರಿಸಬೇಕಾದ ವಿಷಯಗಳನ್ನು ನವೀನ್ ತಿಳಿಸಿಕೊಟ್ಟರು.
ಕಾರ್ಯಾಗಾರದಲ್ಲಿ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಬಿ.ಜಿ.ಎಸ್. ಕಾಲೇಜಿನ ಪದವಿ ವಿದ್ಯಾರ್ಥಿಗಳು ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತರಗತಿಯ ಸಿದ್ಧಾಂತದಿಂದ ಕ್ಯಾಮೆರಾ, ಮೈಕ್ ಮತ್ತು ರೇಡಿಯೋ ಸ್ಟುಡಿಯೋವರೆಗೆ ವಿದ್ಯಾರ್ಥಿಗಳನ್ನು ಕರೆದೊಯ್ದ ಈ ಕಾರ್ಯಾಗಾರವು ಮಾಧ್ಯಮ ಶಿಕ್ಷಣಕ್ಕೆ ಪ್ರಾಯೋಗಿಕ ಸ್ಪರ್ಶ ನೀಡುವ ಮೂಲಕ ಗಮನ ಸೆಳೆಯಿತು.




