ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತೋತ್ಸವವನ್ನು ಕರ್ನಾಟಕ ಮಾದರ ಮಹಾಸಭಾ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ವಿವಿಧ ಧರ್ಮ ಹಾಗೂ ಸಮುದಾಯಗಳ ಸಹಭಾಗಿತ್ವದೊಂದಿಗೆ ನಡೆದ ಈ ಕಾರ್ಯಕ್ರಮ ಸೌಹಾರ್ದತೆಗೆ ಸಾಕ್ಷಿಯಾಯಿತು. ಪಟ್ಟಣದ ಐಬಿ ಯಿಂದ ಆರಂಭಗೊಂಡ ಭವ್ಯ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಗಳ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಟೌನ್ ಹಾಲ್ ತಲುಪಿತು.
ಮೆರವಣಿಗೆಯುದ್ದಕ್ಕೂ ಟಿಬೆಟಿಯನ್ ಶಾಲಾ ಮಕ್ಕಳ ಆಕರ್ಷಕ ಡ್ರಿಲ್ ಪ್ರದರ್ಶನ ಹಾಗೂ ಬ್ಯಾಂಡ್ ವಾದನ ಸಾರ್ವಜನಿಕರ ಗಮನ ಸೆಳೆಯಿತು. ಸಮುದಾಯದ ಮುಖಂಡರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಯಂತೋತ್ಸವಕ್ಕೆ ಕಳೆ ನೀಡಿದರು.
ಇದೇ ವೇದಿಕೆ ಕಾರ್ಯಕ್ರಮದಲ್ಲಿ ‘ಈ ದಿನ’ ಮಾಧ್ಯಮ ಸಂಸ್ಥೆಯು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹಾಗೆ ಕರ್ನಾಟಕ ಏಕೀಕರಣದ ಬಗ್ಗೆ ಹೊರ ತಂದಿರುವ ‘ಜೈ ಹಿಂದ್ ಜೈ ಕರ್ನಾಟಕ’ ಎಂಬ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮದಲ್ಲಿ ಚಿನ್ನದ ಪದಕ ವಿಜೇತರಾದ ಶ್ರುತಿ ಹೊನ್ನಪ್ಪ ಮಾದರ ಅವರಿಗೆ ವಿಶೇಷ ಸನ್ಮಾನ ನೀಡಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಶಿರಸಿ | ಜಗಜೀವನ್ ರಾಮ್ ಜಯಂತಿ ನಿರ್ಲಕ್ಷ್ಯ: ಅಧಿಕಾರಿಗಳ ವಿರುದ್ಧ ಭೀಮಘರ್ಜನೆ ಸಂಘಟನೆ ಆಕ್ರೋಶ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ವಿ.ಎಸ್. ಪಾಟೀಲ್, “ಬಾಬು ಜಗಜೀವನ್ ರಾಮ್ ಅವರು ದೇಶದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ಹಕ್ಕುಗಳನ್ನು ನೀಡಿದರೆ, ಜಗಜೀವನ್ ರಾಮ್ ಅವರು ಆಹಾರ ಭದ್ರತೆಯ ಮೂಲಕ ದೇಶವನ್ನು ಸಶಕ್ತಗೊಳಿಸಿದರು. ಈ ಇಬ್ಬರು ಮಹಾನ್ ನಾಯಕರ ಕೊಡುಗೆಗಳನ್ನು ಯುವ ಪೀಳಿಗೆ ಸ್ಮರಿಸಬೇಕಿದೆ,” ಎಂದರು.
ಮಾಜಿ ಜಿ.ಪಂ. ಸದಸ್ಯ ಎಲ್.ಟಿ. ಪಾಟೀಲ್ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗೇಶ್ವರ ಗುಡಿಯಾಳ ಮಾತನಾಡಿ, ಶೋಷಿತ ಸಮುದಾಯಗಳ ಏಳಿಗೆಗಾಗಿ ಜಗಜೀವನ್ ರಾಮ್ ಅವರು ಪಟ್ಟ ಶ್ರಮ ಅಮೂಲ್ಯವಾದುದು ಎಂದು ಅಭಿಪ್ರಾಯಪಟ್ಟರು.
ಮುಂಡಗೋಡಿನ ಲಾಮಾ ಕ್ಯಾಂಪ್‌ನ ಗಾದೇನ ಶಾಟ್ಸ್ ಸೆ ಮೊನಾಸ್ಟರಿಯ ಮಠಾಧೀಶರಾದ ಪೂಜ್ಯ ಗೇಶೆ ಜಾಂಗಚುಪ್ ಸಾಂಗೇ ಹಾಗೂ ಗಾದೇನ ಜಂಗ್ ಸ್ಟೆ ಮೊನಾಸ್ಟರಿಯ ಮಠಾಧೀಶರಾದ ಪೂಜ್ಯ ಗೇಶೆ ಜಿಗ್ಮೆ ಲಾಮಾಸಾಂಗ್ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕ್ಕೀರಪ್ಪ, ಸೇರಿದಂತೆ ದಸಂಸ ಜಿಲ್ಲಾ ಅಧ್ಯಕ್ಷ ಗೋಪಾಲ ನಡುಕಿನಮನಿ, ಆದಿಜಾಂಬವ ಶಾಲೆಯ ಮುಖ್ಯೋಪಾಧ್ಯಾಯ ಸೋಮಣ್ಣ ಮುಡೆಣ್ಣನವರ, ಡಾ|| ಪಿ. ನಾಗೇಂದ್ರ, ಬಸವರಾಜ ಹಳ್ಳಮ್ಮನ್ನವರ, ಹುಲಿಗೆಪ್ಪ ಭೋವಿ, ಮಂಜುನಾಥ ಹರಿಜನ, ಪ್ರಮೋದ ರತ್ನಾಕರ, ಲಕ್ಷ್ಮಣ, ಸಂತೋಷ ಕಟ್ಟಿಮನಿ ಸೇರಿದಂತೆ ಅನೇಕ ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.




