ಹಾರ್ಮುಜ್ ಜಲಸಂಧಿಯನ್ನು ಕೂಡಲೇ ತೆರೆಯುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟ್ಟುನಿಟ್ಟಿನ ಗಡುವು ವಿಧಿಸಿ, ಸೇನಾ ದಾಳಿಯ ಎಚ್ಚರಿಕೆ ನೀಡಿದರೂ ಇರಾನ್ ತನ್ನ ಬಿಗಿಪಟ್ಟು ಸಡಿಲಿಸಿಲ್ಲ. “ಅಮೆರಿಕ ಮತ್ತು ಇಸ್ರೇಲ್ ಪಾಲಿಗೆ ಹಾರ್ಮುಜ್ ಜಲಸಂಧಿ ಇನ್ನುಮುಂದೆ ಎಂದಿಗೂ ತನ್ನ ಹಳೆಯ ಸ್ಥಿತಿಗೆ ಮರಳುವುದಿಲ್ಲ” ಎಂದು ತಿರುಗೇಟು ನೀಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ, ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಇದರ ಬೆನ್ನಲ್ಲೇ, ಭಾನುವಾರ ತಮ್ಮ ‘ಟ್ರೂತ್ ಸೋಷಿಯಲ್’ ಜಾಲತಾಣದಲ್ಲಿ ಇರಾನ್‌ಗೆ ನೇರ ಎಚ್ಚರಿಕೆ ರವಾನಿಸಿರುವ ಟ್ರಂಪ್, ” ಮಂಗಳವಾರ ಇರಾನ್ ಪಾಲಿಗೆ ‘ವಿದ್ಯುತ್ ಸ್ಥಾವರಗಳ ದಿನ’ ಹಾಗೂ ‘ಸೇತುವೆಗಳ ದಿನ’ ಆಗಿರಲಿದೆ. ಇದು ನೀವು ಹಿಂದೆಂದೂ ಕಂಡಿರದಂತದ್ದಾಗಿರುತ್ತದೆ. ಜಲಸಂಧಿಯನ್ನು ತೆರೆಯಿರಿ ಇಲ್ಲವೇ ಭೀಕರ ಪರಿಣಾಮಗಳನ್ನು ಎದುರಿಸಲು ಸಿದ್ದರಾಗಿ” ಎಂದು ಗುಡುಗಿದ್ದಾರೆ. ಮಧ್ಯಪ್ರಾಚ್ಯದ ಈ ಸಂಘರ್ಷದ ಕುರಿತು ಟ್ರಂಪ್ ಸೋಮವಾರ ರಾತ್ರಿ(ಏಪ್ರಿಲ್ 6) 10.30ಕ್ಕೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನು ಓದಿದ್ದೀರಾ? IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ
ಇರಾನ್‌ನ ಈ ದಿಗ್ಬಂಧನ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೀವ್ರ ತಲ್ಲಣ ಸೃಷ್ಟಿಸಿದೆ. ಹಾರ್ಮುಜ್ ಜಲಸಂಧಿಯು ಜಗತ್ತಿನ ಅತ್ಯಂತ ಪ್ರಮುಖ ವಾಣಿಜ್ಯ ಜಲಮಾರ್ಗವಾಗಿದ್ದು, ವಿಶ್ವಾದ್ಯಂತ ಸರಬರಾಜಾಗುವ ಒಟ್ಟು ಕಚ್ಚಾ ತೈಲದಲ್ಲಿ ಸುಮಾರು ಶೇಕಡಾ 20ರಷ್ಟು ತೈಲ ಇದೇ ಜಲಸಂಧಿಯ ಮೂಲಕ ಹಾದುಹೋಗಬೇಕಿದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಗೆ ಭಾರಿ ಕುತ್ತು ಬಂದೊದಗಿದೆ.
ಇಷ್ಟೆಲ್ಲಾ ಉದ್ವಿಗ್ನತೆ ಮತ್ತು ಯುದ್ಧದ ಭೀತಿಯ ನಡುವೆಯೂ ಭಾರತಕ್ಕೆ ಒಂದು ಸಮಾಧಾನಕರ ಸಂಗತಿಯೆಂದರೆ, ಭಾರತದ ಧ್ವಜವನ್ನು ಹೊಂದಿರುವ ‘ಗ್ರೀನ್ ಆಶಾ’ ಹೆಸರಿನ ವಾಣಿಜ್ಯ ಹಡಗು ಇದೀಗ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ದಾಟಿದೆ. ಫೆಬ್ರವರಿ 28ರಂದು ಯುದ್ಧ ಶುರುವಾದಾಗಿನಿಂದ ಈ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದ ಭಾರತದ 9ನೇ ಹಡಗು ಇದಾಗಿದೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ.




