ಅಪಘಾತದಲ್ಲಿ ಮೃತರಾದವರಿಗೆ ಪರಿಹಾರ ನೀಡದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯ 2 ಬಸ್‌ಗಳನ್ನು ಜಪ್ತಿ ಮಾಡಿರುವ ಘಟನೆ ಕೂಡ್ಲಿಗಿಯಲ್ಲಿ ನಡೆದಿದೆ. 2019ರಲ್ಲಿ ಸಾರಿಗೆ ಇಲಾಖೆಯ ಕೊಪ್ಪಳ ಡಿಪೋಗೆ ಸೇರಿದ ಬಸ್, ಹಾಗೂ ಆಟೋ ನಡುವೆ ಅಪಘಾತ ನಡೆದು ಆಟೋದಲ್ಲಿ ಪ್ರಯಣಿಸುತ್ತಿದ್ದ 50 ವರ್ಷದ ನಾಗಪ್ಪ ಮತ್ತು 24 ವರ್ಷದ ನಾಗಮ್ಮ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದರು.
ಮೃತರ ಕುಟುಂಬದವರು ಸೂಕ್ತ ಪರಿಹಾರಕ್ಕಾಗಿ ಕೂಡ್ಲಿಗಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಕೂಡ್ಲಿಗಿ ಹಿರಿಯ ಶ್ರೇಣಿ
ನ್ಯಾಯಾಲಯವು ಮೃತರ ಕುಟುಂಬಸ್ಥರ ಪರ ವಕೀಲರಾದ ಜಿ.ಸೀತಾರಾಮ್ ಗೌಡರವರ ಮನವಿಯನ್ನು ಪುರಸ್ಕರಿಸಿ ಒಂದು ಕುಟುಂಬಕ್ಕೆ 12ಲಕ್ಷ ರೂ, ಮತ್ತೊಂದು ಕುಟುಂಬಕ್ಕೆ 20 ಲಕ್ಷ ರೂಗಳನ್ನು ಪರಿಹಾರ ನೀಡುವಂತೆ ಸಾರಿಗೆ ಇಲಾಖೆಯ ಕೊಪ್ಪಳ ಡಿಪೋ ಘಟಕಕ್ಕೆ ಆದೇಶಿಸಿತು.
ಈವರೆಗೂ ಸಾರಿಗೆ ಇಲಾಖೆ ನೊಂದ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದು ಕಕ್ಷಿದಾರರ ಪರ ವಕೀಲರಾದ ಜಿ. ಸೀತಾರಾಮ್ ಗೌಡ ನ್ಯಾಯಾಲಯದಲ್ಲಿ ಸಾರಿಗೆ ಇಲಾಖೆಯ ಅನಗತ್ಯ ವಿಳಂಬ ನೀತಿಯನ್ನು ಖಂಡಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ತುರ್ತಾಗಿ ಪರಿಹಾರ ನೀಡುವಂತೆ ಸೂಚಿಸಲು ನ್ಯಾಯಾಲಯದಲ್ಲಿ ಕಕ್ಷಿದಾರರ ಪರ ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಧೀಶರು ಸಾರಿಗೆ ಇಲಾಖೆಯ ಕೊಪ್ಪಳ ಡಿಪೋದ 2 ಬಸ್‌ಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ> ಪಂಚಮಸಾಲಿ ಪೀಠ: ಲೆಕ್ಕಪತ್ರ ಮಂಡನೆ ಸಭೆಗೆ ಗೈರಾದರೇಕೆ ʼಲೆಕ್ಕ ಕೊಡಿ ಚಳವಳಿʼ ಬೆಂಬಲಿಗರು?
ಏಪ್ರಿಲ್ 28ರ ಬೆಳಗ್ಗೆ ಕೂಡ್ಲಿಗಿ ಬಸ್ ನಿಲ್ದಾಣದಿಂದ ಕೂಡ್ಲಿಗಿ ನ್ಯಾಯಾಲಯದ ಆವರಣಕ್ಕೆ ಬಸ್‌ಗಳನ್ನು ತಂದು ನಿಲ್ಲಿಸಲಾಗಿದ್ದು, ನ್ಯಾಯಾಲಯದ ಆದೇಶದಂತೆ ಎರಡು ಬಸ್‌ಗಳನ್ನು ನ್ಯಾಯಾಲಯದ ಅಮೀನ್ ಸಿಬ್ಬಂದಿಯ ಜಪ್ತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯಾಲಯದ ಕಕ್ಷಿದಾರರಾದ ಶಿವಪುರ ಗ್ರಾಮದ ಸತ್ಯಮ್ಮ ಹಾಗೂ ಕೊಟ್ರಮ್ಮ, ಕಕ್ಷಿದಾರರ ಪರ ವಕೀಲ ಸೀತರಾಮ್, ವಕೀಲ ಖಲಂಧರ್ ಮತ್ತು ನ್ಯಾಯಾಲಯದ ಅಮೀನ್ ಸಿಬ್ಬಂದಿಯವರಾದ ಎನ್ ವಿ ಪರಮೇಶ್ವರ ಹಾಗೂ ವಿ ಚನ್ನಪ್ಪ ಇದ್ದರು.





