ಉತ್ತರ ಕನ್ನಡ: ಪ್ರತಿಯೊಬ್ಬ ವ್ಯಕ್ತಿಯೂ ಗೌರವ ಮತ್ತು ಸಂತೋಷದಿಂದ ಬದುಕುವ ಹಕ್ಕನ್ನು ಹೊಂದಿದ್ದು, ಇದನ್ನು ರಕ್ಷಿಸುವುದು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯ ಜವಾಬ್ದಾರಿಯಾಗಿದೆ, ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಹೇಳಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ವಿಚಾರಣೆ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ. ಸರ್ಕಾರಿ ಸೇವೆಗಳನ್ನು ಒದಗಿಸುವಲ್ಲಿ ಅನಗತ್ಯ ವಿಳಂಬ ಮಾಡಬಾರದು.
ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಎಷ್ಟೇ ಒತ್ತಡವಿದ್ದರೂ ತಾಳ್ಮೆ ಮತ್ತು ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕರ್ತವ್ಯ ಲೋಪ ಎಸಗುವ ಅಥವಾ ಹಕ್ಕುಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.
ನಕಲಿ ಸಂಘ ಸಂಸ್ಥೆಗಳ ಬಗ್ಗೆ ಎಚ್ಚರಿಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿ ಬೆಂಗಳೂರಿನಲ್ಲಿ ಮಾತ್ರ ಇದೆ. ಯಾವುದೇ ಶಾಖೆಗಳಾಗಲಿ ಅಥವಾ ಆಯೋಗದಿಂದ ಮಾನ್ಯತೆ ಪಡೆದ ಸಂಘ ಸಂಸ್ಥೆಗಳಾಗಲಿ ಇಲ್ಲ. ಆಯೋಗದ ಹೆಸರು ಬಳಸಿಕೊಂಡು ಅಧಿಕಾರಿಗಳನ್ನು ಬೆದರಿಸುವ ಅಥವಾ ವಾಹನಗಳ ಮೇಲೆ ಆಯೋಗದ ಹೆಸರು ಹಾಕಿಕೊಂಡು ಓಡಾಡುವವರ ಬಗ್ಗೆ ದೂರು ನೀಡಲು ಅವರು ಸೂಚಿಸಿದರು. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿದ್ದ 30 ಪ್ರಕರಣಗಳಲ್ಲಿ 27 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ 3 ಪ್ರಕರಣಗಳು ದೂರುದಾರರ ಅಭಿಪ್ರಾಯಕ್ಕಾಗಿ ಬಾಕಿ ಇವೆ. ಹೊಸದಾಗಿ ಸಲ್ಲಿಕೆಯಾದ 5 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಶೀಘ್ರ ವರದಿ ಪಡೆದು ಇತ್ಯರ್ಥಪಡಿಸಲಾಗುವುದು. ಜಿಲ್ಲೆಯಲ್ಲಿ ಇತರ ಜಿಲ್ಲೆಗಳಿಗಿಂತ ಕಡಿಮೆ ಪ್ರಕರಣಗಳಿದ್ದು, ಸಹಕರಿಸಿದ ಜಿಲ್ಲಾಡಳಿತಕ್ಕೆ ಅವರು ಅಭಿನಂದನೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ
ಆಯೋಗದಲ್ಲಿ ದಾಖಲಾಗುವ ದೂರುಗಳಲ್ಲಿ ಶೇ. 60 ರಷ್ಟು ದೂರುಗಳನ್ನು ಮಾಧ್ಯಮ ವರದಿಗಳ ಆಧಾರದ ಮೇಲೆ ‘ಸ್ವಯಂ ಪ್ರೇರಿತ’ವಾಗಿ (Suo Moto) ದಾಖಲಿಸಿಕೊಳ್ಳಲಾಗುತ್ತದೆ. ಸಾರ್ವಜನಿಕರು ನೇರವಾಗಿ ಪೋಸ್ಟ್ ಅಥವಾ ಆನ್‌ಲೈನ್ ಮೂಲಕ ದೂರು ನೀಡಬಹುದು.
ಹಕ್ಕುಗಳ ಉಲ್ಲಂಘನೆ ಬಗ್ಗೆ ಮಾಹಿತಿಯಿದ್ದರೆ ಮಾಧ್ಯಮದವರು ನೇರವಾಗಿ ಆಯೋಗಕ್ಕೆ ಕಳುಹಿಸಬಹುದು ಎಂದು ಮನವಿ ಮಾಡಿದರು. ತಮ್ಮ ಭೇಟಿಯ ವೇಳೆ ಜಿಲ್ಲೆಯಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ಗಮನಹರಿಸಿದ ಅಧ್ಯಕ್ಷರು ಈ ಕೆಳಗಿನ ಸೂಚನೆಗಳನ್ನು ನೀಡಿದ್ದಾರೆ
ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿರುವ ಸ್ಥಳಾವಕಾಶದ ಕೊರತೆ ನೀಗಿಸಲು ಹೊಸ ಕಟ್ಟಡಕ್ಕೆ ವಿದ್ಯಾರ್ಥಿಗಳ ಸ್ಥಳಾಂತರ, ಕಿಮ್ಸ್ (KRIMS) ನಲ್ಲಿ ರೇಡಿಯಾಲಜಿಸ್ಟ್ ಹುದ್ದೆ ಭರ್ತಿಗೆ ಸೂಚನೆ, ಜಿಲ್ಲಾ ಕಾರಾಗೃಹದ ಶೀಘ್ರ ನವೀಕರಣ ಕಾಮಗಾರಿ ಆರಂಭಿಸಲು ಸೂಚಿಸಿದ್ದಾರೆ.
ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ. ವಂಟಿಗೋಡಿ ಮಾತನಾಡಿ, ಆಯೋಗಕ್ಕೆ ಸಲ್ಲಿಕೆಯಾಗುವ ದೂರುಗಳಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಹೆಚ್ಚಿನ ದೂರುಗಳಿದ್ದು, ನಂತರದ ಸ್ಥಾನದಲ್ಲಿ ಕಾರಾಗೃಹ, ಕಂದಾಯ ಮತ್ತು ಅರಣ್ಯ ಇಲಾಖೆಗಳಿವೆ ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಜಿ.ಪಂ. ಸಿಇಒ ಡಾ. ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





