ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಸಾಲವಾಡ ಗ್ರಾಮ ಪಂಚಾಯಿತಿಗೆ ಸೇರಿದ ಕಗ್ಗಲಕಟ್ಟಿ ತಾಂಡದ ಕೆರೆಗೆ ನೀರು ತುಂಬಿಸಿ, ಕಾಲುವೆಗಳಿಗೆ ನೀರು ಹರಿಸುವ ಮೂಲಕ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ರೈತ ಸಂಘಟನೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಅಧಿಕಾರಗಳಿಗೆ ಮನವಿ ಸಲ್ಲಿಸಿದೆ.
ರೈತರ ಮನವಿ ಪತ್ರ ಸ್ವೀಕರಿಸಿದ ಸಿಬ್ಬಂದಿ ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿದ್ದಾರೆ.
“ಈ ವರ್ಷದ ಮುಂಗಾರು ಮಳೆ ಬಾರದ ಕಾರಣ ಕೆರೆ, ಕಟ್ಟೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ದನ, ಕುರಿ, ಪಕ್ಷಿಗಳು ನೀರು ಕುಡಿಯುವುದಕ್ಕೂ ಕೆರೆಯಲ್ಲಿ ನೀರಿಲ್ಲ. ದನ ಕರುಗಳಿಗೆ ನೀರು ಬೇಕಾಗಿರುವುದರಿಂದ ಕೆರೆಗಳಿಗೆ ನೀರು ಹರಿಸಿ ಕೆರೆಯನ್ನು ತೊಂಬಿಸಬೇಕೆಂದು ಸರ್ಕಾರ ಆದೇಶ ಮಾಡಿದರೆ. ಆದರೂ ಅಧಿಕಾರಿಗಳು ನೀರು ಹರಿಸುತ್ತಿಲ್ಲ. ತಾಲೂಕಿನ ಇತರೆ ಕೆರೆಗಳಿಗೂ ನೀರು ಹರಿಸಲಾಗುತ್ತಿಲ್ಲ” ಎಂದು ಆರೋಪಿಸಿದರು.
“ತಾಲೂಕಿನ ಎಲ್ಲ ಕೆರೆಗಳಿಗೆ ಸಕಾಲದಲ್ಲಿ ನೀರು ತುಂಬಿಸುವ ಕಾರ್ಯ ತುರ್ತಾಗಿ ನಡೆಯಬೇಕಿದೆ. ಕೆ ಕೆ ತಾಂಡದ ರೈತರು ಹಲವು ಬಾರಿ ಮನವಿ ಮಾಡಿರೂ ಕೂಡ ತಾಂಡದ ಕೆರೆಗೆ ನೀರು ಹರಿಸುತಿಲ್ಲ. ಈಗಾಗಲೇ ನೀರಿನ ಕೊರತೆಯಿಂದ ದನ, ಕರುಗಳು ಪ್ರಾಣ ಬಿಟ್ಟಿವೆ. ಕೆರೆಯಲ್ಲಿ ನೀರು ಇಲ್ಲದೇ ಇರುವುದರಿಂದ ರೈತರಿಗೂ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ಇನ್ನು ಎರಡ್ಮೂರು ದಿನದಲ್ಲಿ ಕೆರೆಗಳಿಗೆ ನೀರು ಹರಿಸದೇ ಇದ್ದರೆ ಸಿಂಗಟಾಲೂರು ಏತ ನೀರಾವರಿ ಯೋಜನೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು” ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.
ಇದನ್ನೂ ಓದಿದ್ದೀರಾ? ಆಂಧ್ರ ಪ್ರದೇಶದಲ್ಲಿ ಮಳೆ ಕೊರತೆ, ತೀವ್ರ ಒಣಹವೆ: ಮುಗಿಲಿನತ್ತ ದಿಟ್ಟಿಸಿರುವ ರೈತರು
ಈ ವೇಳೆ, ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಜಿಲ್ಲಾ ಉಪಾಧ್ಯಕ್ಷ ಕೆ ಮಂಜುನಾಥ್ ಪುರ, ತಾಲೂಕು ಉಪಾಧ್ಯಕ್ಷ ವಿಠ್ಠಲ ನಾಯಕ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವರಾಜ ಹೊಳಗುಂದಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಸೇರಿದಂತೆ ಇತರರು ಇದ್ದರು.




