ಆನ್‌ಲೈನ್ ಮೂಲಕ ಡಿಪ್ಲೊಮಾ ಸಿಇಟಿ ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆದೇಶ ಎಐಡಿಎಸ್‌ಒ ವಿಜಯಪುರ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಎಂಜಿನಿಯರಿಂಗ್ ಪ್ರವೇಶ ಪಡೆಯಲು ಡಿಪ್ಲೊಮಾ ವಿದ್ಯಾರ್ಥಿಗಳು ಬರೆಯಬೇಕಿರುವ ಡಿಪ್ಲೊಮಾ ಸಿಇಟಿ(DCET) ಪರೀಕ್ಷೆಗಳನ್ನು ಈ ಬಾರಿಯಿಂದ ಆನ್‌ಲೈನ್ ಮೂಲಕ ನಡೆಸಲು ನಿರ್ಧರಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ನಿಲುವು ಅತ್ಯಂತ ಖಂಡನಾರ್ಹ. ಬಹುಪಾಲು, ಬಡ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳು ಡಿಪ್ಲೊಮಾ ಕೋರ್ಸ್ ಸೇರುತ್ತಾರೆ. ಈ ಬಡ ವಿದ್ಯಾರ್ಥಿಗಳೂ ಕೂಡಾ ಡಿಪ್ಲೊಮಾ ಮೂಲಕ ಎಂಜಿನಿಯರಿಂಗ್ ಪಡೆಯುವುದು ಸುಲಭವೆಂಬ ಕಾರಣಕ್ಕೆ ಪ್ರವೇಶ ಪಡೆದಿರುತ್ತಾರೆ. ಈ ಪ್ರವೇಶ ಪರೀಕ್ಷೆಯನ್ನು ಆನ್‌ಲೈನ್ ಮೂಲಕ ಮಾತ್ರ ನಡೆಸಿದರೆ ಈ ಮಕ್ಕಳಿಗೆ, ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯುಂಟಾಗುತ್ತದೆ” ಎಂದರು.
“ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರು, ಕೇವಲ 18,000 ಮಂದಿ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯುವುದರಿಂದ ಆನ್‌ಲೈನ್ ಡಿಸಿಇಟಿ ನಡೆಸುವುದಾಗಿ ಹೇಳಿದ್ದಾರೆ. 18,000 ಕಡಿಮೆ ಸಂಖ್ಯೆಯಲ್ಲ. ಇದು ಈ ವಿದ್ಯಾರ್ಥಿಗಳ ಕುರಿತು ಸರ್ಕಾರದ ನಿಲುವನ್ನು ತೋರಿಸುತ್ತದೆ. ಅದರಲ್ಲೂ, ಪರೀಕ್ಷೆಗೆ ಒಂದು ತಿಂಗಳು ಬಾಕಿ ಇರುವಾಗ, ಯಾವುದೇ ಪ್ರಜಾತಾಂತ್ರಿಕ ಪ್ರಕ್ರಿಯೆಯನ್ನು ಪಾಲಿಸದೇ ಹಠಾತ್ತನೆ ಇಂತಹ ಮೂಲಭೂತ ಬದಲಾವಣೆಗೆ ಕೈಹಾಕಿರುವುದು ವಿದ್ಯಾರ್ಥಿ ವಿರೋಧಿ ನಡೆಯಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ನೆಮ್ಮದಿಯ ಬದುಕು ಬೇಕೋ ಬಿಜೆಪಿಯ ಸುಳ್ಳು ಬೇಕೊ ನೀವೇ ನಿರ್ಧರಿಸಿ: ಅಪ್ಪಾಜಿ ನಾಡಗೌಡ
“ಎಂಜಿನಿಯರಿಂಗ್ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸುವ ಆದೇಶವನ್ನು ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರ ಕೂಡಲೇ ಹಿಂಪಡೆಯಬೇಕು. ಹಿಂದಿನ ರೀತಿಯಲ್ಲಿಯೇ ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕು” ಎಂದು ಕಾವೇರಿ ರಜಪೂತ ಆಗ್ರಹಿಸಿದರು.