ವಿಜಯಪುರ ನಗರದ ವಿವಿಧ ಪ್ರದೇಶಗಳಲ್ಲಿ ಪೌರಕಾರ್ಮಿಕರು ಸುರಕ್ಷತಾ ಪರಿಕರಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದ್ದು, ಈ ಕುರಿತು ಸಂಬಂಧಿತ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಫಾಯಿ ಕರ್ಮಚಾರಿ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಚನ್ನು ಕಟ್ಟಿಮನಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು, “ಭಾನುವಾರ ಬೆಳಿಗ್ಗೆ ಸುಮಾರು 6.30ರ ವೇಳೆಗೆ ವಿಜಯಪುರ ನಗರದ ವಾರ್ಡ್ ನಂ. 21ರ ವ್ಯಾಪ್ತಿಯಲ್ಲಿ ಸಂಚರಿಸುವಾಗ ಗಣೇಶನಗರ ಬಸ್ ನಿಲ್ದಾಣದ ಸಮೀಪ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಪೌರಕಾರ್ಮಿಕರು ಕೈಗವಸು (ಗ್ಲೌಸ್) ಮತ್ತು ಮುಖಗವಸು (ಮಾಸ್ಕ್) ಇಲ್ಲದೆ ಕಸ ಸಂಗ್ರಹಿಸುವ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು ಗಮನಕ್ಕೆ ಬಂದಿದೆ” ಎಂದು ತಿಳಿಸಿದ್ದಾರೆ.
“ಈ ವಿಷಯವನ್ನು ಜೂನ್ 18ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಫಾಯಿ ಕರ್ಮಚಾರಿ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಚರ್ಚಿಸಿ, ಪೌರ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದಾಗ್ಯೂ, ಸಭೆಯ ನಂತರವೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂಬುದು ವಿಷಾದನೀಯ ಸಂಗತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ವಿಜಯಪುರ ಜಿಲ್ಲೆಯ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ವಚ್ಛತಾ ಕಾರ್ಯದ ವೇಳೆ ಆರೋಗ್ಯದ ಅಪಾಯಗಳನ್ನು ತಪ್ಪಿಸಲು ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಧನಗಳನ್ನು ಕಡ್ಡಾಯವಾಗಿ ಒದಗಿಸಬೇಕು” ಎಂದು ಆಗ್ರಹಿಸಿದರು.
“ಕೆಲ ಗುತ್ತಿಗೆದಾರರು ಪೌರಕಾರ್ಮಿಕರ ಭವಿಷ್ಯ ನಿಧಿ(ಪಿಎಫ್) ಹಣದಲ್ಲಿ ಅಕ್ರಮ ಎಸಗುತ್ತಿರುವ ಕುರಿತು ಸಭೆಯಲ್ಲಿ ಚರ್ಚೆಯಾಗಿದ್ದು, ಕಾರ್ಮಿಕರ ಪಾಲಿನ ಹಣವನ್ನು ಮಾತ್ರ ಪಿಎಫ್‌ಗೆ ಜಮೆ ಮಾಡಿ, ಗುತ್ತಿಗೆದಾರರ ಪಾಲಿನ ಮೊತ್ತವನ್ನು ಪಾವತಿಸದೆ ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪಗಳು ಕೇಳಿಬಂದಿವೆ. ಇಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಿರ್ದೇಶನಗಳನ್ನು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಲಾಗುತ್ತದೆ ಎಂಬುದನ್ನು ನೋಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಮೂಲಸೌಕರ್ಯ ಕೊರತೆ: ಯುವ ಶಕ್ತಿಗೆ ಬಿಹಾರ ಸರ್ಕಾರದ ಅನ್ಯಾಯ…
“ಪೌರ ಕಾರ್ಮಿಕರನ್ನು ಕೇವಲ ಕಾರ್ಮಿಕರಂತೆ ಅಲ್ಲ, ಮನುಷ್ಯರಂತೆ ಗೌರವದಿಂದ ಕಾಣಬೇಕು. ಅವರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವುದು ಆಡಳಿತ ಮತ್ತು ಗುತ್ತಿಗೆದಾರರ ಜವಾಬ್ದಾರಿಯಾಗಿದೆ” ಎಂದು ಚನ್ನು ಕಟ್ಟಮನಿ ಹೇಳಿದರು.




