ಸರ್ಕಾರದಿಂದ ಅನುಷ್ಠಾನಗೊಳ್ಳುವ ಯೋಜನೆಗೆ ಸಂಬಂಧಿಸಿದೆ ಫಲಾನುಭವಿಗಳ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದೆ ನಿಗದಿತ ಅವಧಿಯಲ್ಲಿ ಇತ್ಯರ್ಥ ಪಡಿಸಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ ಹೇಳಿದರು.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ದೌರ್ಜನ್ಯ ನಿಯಂತ್ರಣ 1989ರ ಪ್ರತಿಬಂಧ ಕಾಯ್ದೆಯಡಿ ರಚಿತವಾದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಪ್ರತಿ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಈ ಬಗ್ಗೆ ನಿರಂತರ ಪ್ರಗತಿ ವರದಿ ಅವಲೋಕಿಸಲಾಗುತ್ತಿದೆ. ಜಿಲ್ಲೆಯ ನಾನಾ ಬ್ಯಾಂಕ್‌ಗಳ ಶಾಖ ವ್ಯವಸ್ಥಾಪಕರೊಂದಿಗೆ ಸರ್ಕಾರದ ನಾನಾ ಯೋಜನೆಯ ಫಲಾನುಭವಿಗಳ ಬಾಕಿ ಅರ್ಜಿ ಸ್ಥಿತಿಗತಿ ಕುರಿತು ಅಗ್ರಣಿಯ ಬ್ಯಾಂಕ್ ಅಧಿಕಾರಿಗಳು ಕಾಲ ಕಾಲಕ್ಕೆ ನಡೆಸಬೇಕು. ಫಲಾನುಭವಿಗಳಿಗೆ ಬ್ಯಾಂಕ್ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು” ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
“ಸಭೆಯಲ್ಲಿ ಚರ್ಚೆಯಾದ ವಿಷಯದ ಸಮಸ್ಯೆಗಳನ್ನು ತಕ್ಷಣ ಇತ್ಯರ್ಥಪಡಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ವಿಳಂಬ ಮಾಡದೆ ಪರಿಹಾರ ಒದಗಿಸಬೇಕು. ನೀರಾವರಿ ಪಂಪ್‌ಸೆಟ್ ಅರ್ಜಿ ಪರಿಶೀಲಿಸಿ ವಿದ್ಯುತ್ ಪರಿವರ್ತಕ ಅಳವಡಿಸಲು ಕ್ರಮ ವಹಿಸಬೇಕು. ಪರಿಶಿಷ್ಟ ಜಾತಿ ಸಮುದಾಯದವರು ವಾಸಿಸುವ ಕಾಲೋನಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು.
“ಸಮಾಜದ ಮುಖಂಡರೊಂದಿಗೆ ಸಮಿತಿ ಸವಿಯನ್ನು ಕಾಲಕಾಲಕ್ಕೆ ನಡೆಸಬೇಕು. ಅರ್ಹರಿಗೆ ಸೂರು ಒದಗಿಸಲು ಗ್ರಾಮಸಭೆ ನಡೆಸಿ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ನಾನಾ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಅರ್ಹ ವ್ಯಕ್ತಿಗಳು ಅರ್ಜಿ ಪರಿಶೀಲನೆ ನಡೆಸಿ ವಿಳಂಬ ಮಾಡದೆ ತಕ್ಷಣ ವಿಲೇವಾರಿ ಮಾಡಬೇಕು. ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಪರಿಹಾರ ಒದಗಿಸಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕರ್ತವ್ಯ ಲೋಪ ಆರೋಪ: ರಟಕಲ್ ಪಿಡಿಒ ಜ್ಞಾನದೇವ ಅಮಾನತು
ಸಭೆಯಲ್ಲಿ ಜಿಪಂ ಸಿಇಒ ರಿಷಿ ಆನಂದ್, ಎಎಸ್‌ಪಿ ರಾಮನಗೌಡ ಹಟ್ಟಿ, ವಿಜಯಪುರ ಉಪ ವಿಭಾಗ ಅಧಿಕಾರಿ ಗುರುನಾಥ ದಡ್ಡೇ, ಇಂಡಿ ಉಪವಿಭಾಗಾಧಿಕಾರಿ ಗುರುಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ, ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಅಭಿಷೇಕ ಚಕ್ರವರ್ತಿ, ರವಿಕಾಂತ ಬಿರಾದಾರ, ಸಿದ್ದು ರಾಯಣ್ಣವರ, ಸಿದ್ದಪ್ಪ ಗಸ್ತಿ, ಯಮನಪ್ಪ ಸಿದರೆಡ್ಡಿ, ಮಲ್ಲು ತಳವಾರ, ರಾಜಶೇಖರ ಕೂಚಬಾಳ ಹಾಗೂ ಮಲ್ಲಪ್ಪ ಹಾದಿಮನಿ ಸೇರಿದಂತೆ ಇತರರು ಇದ್ದರು.




