ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ರೈತರ ಸಮಸ್ಯೆಗಳತ್ತ ಗಮನಹರಿಸದೆ ಕೇವಲ ತಮ್ಮ ಮತಕ್ಷೇತ್ರಕ್ಕೆ ಸೀಮಿತರಾದರೆ, ಅದು ಜಿಲ್ಲೆಯ ರೈತರಿಗೆ ಮಾಡುವ ಅನ್ಯಾಯ ಎಂದು ಮುಖಂಡ ಲಾಯಪ್ಪ ಇಂಗಳೇ ಆರೋಪಿಸಿದರು.
ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಳೆದ 11 ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೆಲ ರಾಜಕಾರಣಿಗಳು ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆದರೆ, ಇನ್ನೂ ಕೆಲವರು ರೈತರ ಹಿತಕ್ಕಿಂತ ತಮ್ಮ ಸ್ವಾರ್ಥ ಮತ್ತು ಹಣ ಮಾಡುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರೈತರ ಹೋರಾಟವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಕೂಡಲೇ ಗಂಭೀರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ ವಿಜಯಪುರ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ 4–5 ದಿನಗಳಲ್ಲಿ 20ರಿಂದ 25 ಸಾವಿರ ರೈತರನ್ನು ಸಂಘಟಿಸಿ ಸೋಲಾಪುರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹೆದ್ದಾರಿ ಬಂದ್‌ನಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಅದಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೊಣೆಗಾರರಾಗಬೇಕಾಗುತ್ತದೆ. ಈ ಪರಿಸ್ಥಿತಿಗೆ ಜಿಲ್ಲಾ ಉಸ್ತುವಾರಿ ಸಚಿವರೂ ಉತ್ತರ ನೀಡಬೇಕಾಗುತ್ತದೆ ಎಂದು ಸಂಗಮೇಶ ಸಗರ ಹೇಳಿದರು.
ಹೋರಾಟದಲ್ಲಿ ಬಬಲೇಶ್ವರ ತಾಲೂಕು ಅಧ್ಯಕ್ಷ ಸುರೇಶ್ ಕಿರಸುರ್, ದೇವರಹಿಪ್ಪರಗಿ ತಾಲೂಕು ಅಧ್ಯಕ್ಷ ಈರಪ್ಪ ಕುಳೆಕುಮಟಗಿ, ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಜಿಲ್ಲಾ ಉಪಾಧ್ಯಕ್ಷರಾದ ಮಹಾದೇವ ಬನಸೊಡೆ, ವಸಂತ ಭೈರಮಾಡಿ, ಅಂಬರೀಷ್ ಭೈರಗೊಂಡ, ಬಬಲೇಶ್ವರ ತಾಲೂಕು ಯುವ ಘಟಕ ಅಧ್ಯಕ್ಷ ಶಿವಾನಂದ ಮೆಂಡೆಗಾರ, ಮುಖಂಡರಾದ ಸಂತೋಷ್, ಬಿರಾದಾರ ಮುತ್ತು ಹಿರೇಗೋಳ, ರಾವತ ಹಳ್ಳಿ, ಹೊಳಬಸು ತೇಲಿ, ಸಂಗಮೇಶ್ ಕಂಬಾರ್, ರಂಗಪ್ಪ ಪೂಜಾರಿ, ನಾಗರಾಜ ತೇಲಿ, ಮಹಾದೇವ ಕದಂ, ಜಗದೇವ ಸೂರ್ಯವಂಶಿ, ಅನಿಲ ಇಕಡೆ, ರಾಮನಗೌಡ ಪಾಟೀಲ, ಅಭಿ ಛಲವಾದಿ, ಸೋಮಶೇಖರ ಹಿರೇಮಠ, ನಿಂಗನಗೌಡ ಪೊಲೀಸ್ ಪಾಟೀಲ, ಶರಣಪ್ಪ ತಾಳಿಕೋಟಿ, ನಾನಾಗೌಡ ಬೋರಾವತ್, ಶಾಂತಗೌಡ ಬೋರಾವತ್, ವಿಜಯ ಚವ್ಹಾಣ, ಇಸ್ಲಾಯಿಲ್ ವಡಗೇರಿ, ಶರಣಗೌಡ ಸುಂಬಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





