ದೇಶದ ಸರ್ಕಾರಿ ಶಾಲೆಗಳ ದುಃಸ್ಥಿತಿಯನ್ನು ಸಾರ್ವಜನಿಕರ ಹಾಗೂ ಸರ್ಕಾರದ ಗಮನಕ್ಕೆ ತರುವ ಸದುದ್ದೇಶದಿಂದ ‘ಕಾಕ್ರೋಚ್ ಜನತಾ ಪಾರ್ಟಿ’ (CJP)ಯು ‘ಸ್ಕೂಲ್ ಠೀಕ್ ಕರೋ’ ಅಭಿಯಾನವನ್ನು ಮುನ್ನಡೆಸುತ್ತಿದೆ. ಇಂತಹ ಪ್ರಗತಿಪರ ಪ್ರಯತ್ನಕ್ಕೂ ಕಲ್ಲು ಹಾಕುವ ಕುತಂತ್ರಗಳು ನಡೆಯುತ್ತಿವೆ. ಶಾಲೆಗಳಿಗೆ ಪ್ರವೇಶ ನಿರ್ಬಂಧ, ಸುಳ್ಳು ಪ್ರಕರಣಗಳ ಮುಖಾಂತರ ದಮನಕಾರಿ ಕ್ರಮ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ವಿರೋಧದ ನಡುವೆಯೂ ಸಿಜೆಪಿ ತನ್ನ ಹೋರಾಟವನ್ನು ಯಶಸ್ವಿಯಾಗಿ ಮುಂದುವರೆಸಿರುವುದು ನಿಜಕ್ಕೂ ಶ್ಲಾಘನೀಯ.
ಸಿಜೆಪಿ ಆರಂಭಿಸಿರುವ ‘ಸ್ಕೂಲ್ ಠೀಕ್ ಕರೋ’ ಅಭಿಯಾನದ ಉದ್ದೇಶ ಸರ್ಕಾರಿ ಶಾಲೆಗಳ ದೋಷಗಳನ್ನು ಎತ್ತಿಹಿಡಿಯುವುದರ ಜೊತೆಗೆ ಶಾಲೆಗಳಲ್ಲಿ ಮಕ್ಕಳಿಗೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳು, ಶಿಕ್ಷಕರ ಲಭ್ಯತೆ, ತರಗತಿ ಕೊಠಡಿಗಳ ಸುರಕ್ಷತೆ, ಶೌಚಾಲಯ, ಕುಡಿಯುವ ನೀರು ಹಾಗೂ ಕಲಿಕಾ ವಾತಾವರಣದ ವಾಸ್ತವ ಸ್ಥಿತಿಯನ್ನು ದಾಖಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು. ಈ ಅಭಿಯಾನದಡಿ ವಿವಿಧ ರಾಜ್ಯಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುತ್ತಿರುವ ಸಿಜೆಪಿ ಕಾರ್ಯಕರ್ತರು, ಅಲ್ಲಿನ ಸಮಸ್ಯೆಗಳನ್ನು ಚಿತ್ರಗಳು, ವಿಡಿಯೊಗಳು ಮತ್ತು ಸ್ಥಳೀಯರ ಹೇಳಿಕೆಗಳ ಮೂಲಕ ಸಾರ್ವಜನಿಕ ವಲಯಕ್ಕೆ ತರುತ್ತಿದ್ದಾರೆ.
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಳಿಕ ಹಿಂಗೋಲಿ ಮತ್ತು ಲಾತೂರ್ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಸಮಸ್ಯೆಗಳನ್ನು ದಾಖಲಿಸಲಾಗಿದೆ. ರಾಜಸ್ಥಾನ – ಜೈಪುರದ ರಾಂಪುರ ಕನ್ವರ್ಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯ ದುಸ್ಥಿತಿ ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಸಿಜೆಪಿ ತಂಡ ದಾಖಲಿಸಿತು. ಪಶ್ಚಿಮ ಬಂಗಾಳ – ಬಂಕುರಾ ಜಿಲ್ಲೆಯ ಸರ್ಕಾರಿ ಶಾಲೆಯ ಸ್ಥಿತಿಯನ್ನು ದಾಖಲಿಸಲು ಸಿಜೆಪಿ ಸ್ವಯಂಸೇವಕರು ಭೇಟಿ ನೀಡಿದ್ದರು. ಈ ಭೇಟಿಯ ಬಳಿಕ ಸ್ವಯಂಸೇವಕರ ಕುಟುಂಬದ ಮೇಲೆ ದಾಳಿ ನಡೆದ ಆರೋಪವೂ ಕೇಳಿಬಂದಿತ್ತು. ಸಿಜೆಪಿಯ ಶಾಲಾ ಅಭಿಯಾನವು ದೆಹಲಿಯ ಸರ್ಕಾರಿ ಶಾಲೆಗಳನ್ನೂ ಒಳಗೊಂಡಿದೆ ಎಂದು ವರದಿಯಾಗಿದೆ. ಅಭಿಯಾನದಡಿ ತೆಲಂಗಾಣದಲ್ಲಿಯೂ ಸರ್ಕಾರಿ ಶಾಲೆಗಳ ಸಮಸ್ಯೆಗಳನ್ನು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 2026ರ ಸೆಪ್ಟೆಂಬರ್ನಲ್ಲೇ ಸಿಜೆಪಿ ಸಹಸಂಚಾಲಕ ಸೌರವ್ ದಾಸ್ ಪಂಜಾಬ್ನ ಲುಧಿಯಾನಾದ ಮೂರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿರುವುದಾಗಿ ವರದಿಯಾಗಿದೆ.

ಕರ್ನಾಟಕದಲ್ಲಿಯೂ ಸಿಜೆಪಿ ತಂಡದ ಶಾಲಾ ಭೇಟಿಗಳು ಹಲವು ಸಮಸ್ಯೆಗಳನ್ನು ಬೆಳಕಿಗೆ ತಂದಿವೆ. ಬೆಂಗಳೂರಿನ ಯಶವಂತಪುರ ಮತ್ತು ಜೆ.ಪಿ.ನಗರ ಸೇರಿದಂತೆ ವಿವಿಧ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಸಿಜೆಪಿ ಸಹಸಂಚಾಲಕ ಆಶುತೋಷ್ ರಂಕಾ, ಕೆಲವು ಶಾಲೆಗಳಲ್ಲಿ ತರಗತಿ ಕೊಠಡಿಗಳ ಮೂಲಸೌಕರ್ಯ ಸಮರ್ಪಕವಾಗಿದ್ದರೂ, ಶಿಕ್ಷಕರ ಕೊರತೆ ಗಂಭೀರವಾಗಿರುವುದನ್ನು ಪ್ರಸ್ತಾಪಿಸಿದ್ದಾರೆ. ವಿಶೇಷವಾಗಿ, ಶಿಕ್ಷಕರನ್ನು ಹಲವು ತಿಂಗಳುಗಳ ಕಾಲ ಎಸ್ಐಆರ್ ಕೆಲಸಕ್ಕೆ ನಿಯೋಜಿಸಿರುವುದರಿಂದ ಬೋಧನಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ. ಕೆಲವು ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳೇ ಕಿರಿಯರಿಗೆ ಪಾಠ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನೂ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.
ಇದು ಕೇವಲ ಒಂದು ಶಾಲೆ ಅಥವಾ ಒಂದು ರಾಜ್ಯಕ್ಕೆ ಸೀಮಿತವಾದ ಸಮಸ್ಯೆಯಲ್ಲ. ದೇಶದ ಅನೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವುದು, ಲಭ್ಯವಿರುವ ಶಿಕ್ಷಕರನ್ನು ಬೋಧನೇತರ ಕೆಲಸಗಳಿಗೆ ನಿಯೋಜಿಸುವುದು, ಹಳೆಯ ಕಟ್ಟಡಗಳು, ಹಾಳಾದ ಶೌಚಾಲಯಗಳು, ಕುಡಿಯುವ ನೀರಿನ ಕೊರತೆ ಮತ್ತು ಸುರಕ್ಷಿತ ಕಲಿಕಾ ವಾತಾವರಣದ ಅಭಾವದಂತಹ ಸಮಸ್ಯೆಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿವೆ.
ಆದರೆ, ಸಿಜೆಪಿಯ ಈ ಕ್ರಾಂತಿಕಾರಿ ಅಭಿಯಾನಕ್ಕೆ ಬಹುತೇಕ ಕಡೆ ಅದ್ದೂರಿ ಸ್ವಾಗತವೇನೂ ದೊರೆತಿಲ್ಲ. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹೊರಗಿನವರು, ಯೂಟ್ಯೂಬರ್ಗಳು ಮತ್ತು ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಅನುಮತಿಯಿಲ್ಲದೆ ಪ್ರವೇಶಿಸುವುದು, ಚಿತ್ರೀಕರಣ ಮಾಡುವುದು ಅಥವಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂದರ್ಶನ ನಡೆಸುವುದನ್ನು ನಿರ್ಬಂಧಿಸುವ ಆದೇಶಗಳನ್ನು ಶಿಕ್ಷಣ ಇಲಾಖೆಗಳು ಹೊರಡಿಸಿವೆ. ಬೋಧನಾ ಕಾರ್ಯಕ್ಕೆ ಅಡ್ಡಿಯಾಗಬಾರದು ಮತ್ತು ವಿದ್ಯಾರ್ಥಿಗಳ ಗೌಪ್ಯತೆ ಕಾಪಾಡಬೇಕು ಎಂಬುದು ಅಧಿಕಾರಿಗಳ ವಾದ. ಇಂತಹ ನಿರ್ಬಂಧಗಳು ಶಾಲೆಗಳ ನೈಜ ಸ್ಥಿತಿಯನ್ನು ಸಾರ್ವಜನಿಕರಿಂದ ದೂರವಿಡುವ ಕ್ರಮವಾಗಬಾರದು ಎಂಬುದು ಸಿಜೆಪಿ ವಾದ.
ರಾಜಸ್ಥಾನದಲ್ಲಿಯೂ ಶಾಲಾ ಭೇಟಿಯ ವೇಳೆ ಸಿಜೆಪಿ ತಂಡದ ಮೇಲೆ ಸ್ಥಳೀಯರ ಗುಂಪೊಂದು ದಾಳಿ ನಡೆಸಿದ ಆರೋಪ ಕೇಳಿಬಂದಿತ್ತು. ಕಾರಿನ ಗಾಜು ಒಡೆದು, ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಿಜೆಪಿ ಆರೋಪಿಸಿತ್ತು. ಈ ಘಟನೆಯ ಕುರಿತು ಪ್ರಕರಣಗಳು ದಾಖಲಾಗಿದ್ದರೂ, ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸುವ ತಂಡದ ಸುರಕ್ಷತೆ ಮತ್ತು ಸಾರ್ವಜನಿಕ ಸಂಸ್ಥೆಗಳ ಕುರಿತು ಪ್ರಶ್ನೆ ಕೇಳುವ ಹಕ್ಕಿನ ಬಗ್ಗೆ ಚರ್ಚೆ ತೀವ್ರಗೊಂಡಿತು. ಮಹಾರಾಷ್ಟ್ರದ ಲಾತೂರ್ನಲ್ಲಿಯೂ ಸಿಜೆಪಿ ಕಾರ್ಯಕರ್ತರ ವಿರುದ್ಧ ಅನುಮತಿಯಿಲ್ಲದೆ ಶಾಲೆಗೆ ಪ್ರವೇಶಿಸಿ, ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.
ಈ ನಡುವೆ, ಶಾಲೆಗಳಿಗೆ ಪ್ರವೇಶ ಮತ್ತು ಚಿತ್ರೀಕರಣದ ಮೇಲಿನ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿರಲಿಲ್ಲ. ಈ ಬೆಳವಣಿಗೆಯನ್ನು ಸರ್ಕಾರದ ನಿರ್ಬಂಧಗಳಿಗೆ ನ್ಯಾಯಾಲಯವೇ ಸಂಪೂರ್ಣ ಅನುಮೋದನೆ ನೀಡುತ್ತಿದೆಯೇ ಎಂಬ ಟೀಕೆಗಳು ಕೇಳಿಬಂದವು. ಬಳಿಕ ನ್ಯಾಯಾಲಯದ ನಿಲುವು ನಿರ್ದಿಷ್ಟ ಅರ್ಜಿಯ ವಿಚಾರಣಾ ವ್ಯಾಪ್ತಿ ಮತ್ತು ಸಂವಿಧಾನದ 32ನೇ ವಿಧಿಯಡಿ ಪರಿಹಾರ ಕೋರುವ ವಿಚಾರಕ್ಕೆ ಸಂಬಂಧಿಸಿತ್ತು ಎಂದು ಸಮರ್ಥಿಸಿಕೊಳ್ಳಲಾಯಿತು.

ಈ ಕಾನೂನು ಹೋರಾಟಗಳು ಮತ್ತು ವ್ಯವಸ್ಥೆಯ ತಡೆಗೋಡೆಗಳು ಸಿಜೆಪಿಯ ಉತ್ಸಾಹವನ್ನು ಕುಂದಿಸಿಲ್ಲ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬೇರೂರಿರುವ ದೋಷಗಳನ್ನು ಸರಿಪಡಿಸಲು ಹಾಗೂ ಸಾರ್ವಜನಿಕ ಹಣದಿಂದ ನಡೆಯುವ ಶಾಲೆಗಳಲ್ಲಿ ಪಾರದರ್ಶಕತೆ ತರುವ ಪ್ರಯತ್ನಕ್ಕೆ ಈ ಅಭಿಯಾನವು ಬಲ ತುಂಬಿದೆ. ಕೇವಲ ತರಗತಿ ಕೊಠಡಿಗಳ ಗೋಡೆಗಳ ಬಣ್ಣ ಅಥವಾ ಮೇಲ್ಛಾವಣಿಯ ದುರಸ್ತಿ ಮಾತ್ರವಲ್ಲದೆ, ಬೋಧನಾ ಗುಣಮಟ್ಟವನ್ನು ಸುಧಾರಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಶಾಲೆಗಳಿಗೆ ಬೀಗ ಜಡಿಯುವ ಅಥವಾ ಸತ್ಯವನ್ನು ಮುಚ್ಚಿಡುವ ಬದಲು, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಈ ಅಭಿಯಾನವು ಒಂದು ದಿಕ್ಸೂಚಿಯಂತೆ ಕಾಣುತ್ತಿರುವುದು ಸುಳ್ಳಲ್ಲ.
ಇದನ್ನೂ ಓದಿ: ‘ಶಾಲೆ ಸರಿ ಮಾಡಿ’ ಅಭಿಯಾನದ ವೇಳೆ ಗೊಂದಲ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್ಐಆರ್
CJP ಸಾಂಪ್ರದಾಯಿಕ ರಾಜಕೀಯ ಪಕ್ಷವಲ್ಲ. ದೇಶದ ಯುವ ಸಮುದಾಯದಿಂದ ರೂಪುಗೊಂಡಿರುವ ಒಂದು ವಿಭಿನ್ನ ಹಾಗೂ ಜಾಗೃತಿ ಪರವಾದ ವೇದಿಕೆ. ನೇರವಾಗಿ ಶಿಕ್ಷಣ ಸಂಸ್ಥೆಗಳ ಅಂಗಳಕ್ಕಿಳಿದು ‘ಸಾಮಾಜಿಕ ಆಡಿಟ್’ (Social Audit) ಮಾದರಿಯಲ್ಲಿ ಈ ಅಭಿಯಾನವನ್ನು ನಡೆಸುತ್ತಿರುವುದು ಇದರ ಪ್ರಮುಖ ಹೆಗ್ಗಳಿಕೆ. ಶಾಲೆಗಳ ದುಸ್ಥಿತಿಯನ್ನು ಪ್ರಶ್ನಿಸುವ ನಾಗರಿಕರು ಮತ್ತು ಯುವಕರನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆಯು ಹೇರುತ್ತಿರುವ ನಿರ್ಬಂಧಗಳ ವಿರುದ್ಧ, ಸಾರ್ವಜನಿಕ ಹಿತಾಸಕ್ತಿಯೇ ಅಂತಿಮ ಎಂಬ ಸಂದೇಶವನ್ನು ಈ ಅಭಿಯಾನ ಸಾರುತ್ತಿದೆ. ವ್ಯವಸ್ಥೆಯ ಕಣ್ತೆರೆಸುವ ಈ ಹೋರಾಟವು ಭವಿಷ್ಯದ ಪ್ರಜೆಗಳಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳಿಗಾಗಿ ಧ್ವನಿಯೆತ್ತುವ ಮೂಲಕ ದೇಶದ ಯುವಜನತೆಯಲ್ಲಿ ಹೊಸ ಸಾಮಾಜಿಕ ಎಚ್ಚರಿಕೆಯನ್ನು ಮೂಡಿಸುತ್ತಿದೆ.
ಮುಂದಿನ ದಿನಗಳಲ್ಲಿ ಸಿಜೆಪಿಯ ಈ ‘ಸ್ಕೂಲ್ ಠೀಕ್ ಕರೋ’ ಅಭಿಯಾನವು ದೇಶದ ಮೂಲೆಮೂಲೆಗೆ ವ್ಯಾಪಿಸಿ, ಪ್ರತಿಯೊಂದು ಮಗುವಿಗೂ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬುದರಲ್ಲಿ ಸಂದೇಹವಿಲ್ಲ. ವ್ಯವಸ್ಥೆಯ ಲೋಪಗಳನ್ನು ಮುಚ್ಚಿಕೊಳ್ಳಲು ಯತ್ನಿಸುವ ಪಟ್ಟಭದ್ರ ಹಿತಾಸಕ್ತಿಗಳ ನಡುವೆಯೂ, ಸಿಜೆಪಿ ತಂಡ ಯುವಜನತೆಯಲ್ಲಿ ಹೊಸ ಜಾಗೃತಿ ಮೂಡಿಸುತ್ತಿದೆ. ಅಕ್ಷರ ದೇಗುಲಗಳನ್ನು ಉಳಿಸುವ ಈ ಮಹತ್ಕಾರ್ಯಕ್ಕೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಬೆನ್ನೆಲುಬಾಗಿ ನಿಲ್ಲಬೇಕಿದೆ. ಆಗ ಮಾತ್ರ ನಾಡಿನ ಭವಿಷ್ಯದ ಬುನಾದಿಯನ್ನು ಗಟ್ಟಿಗೊಳಿಸಲು ಮತ್ತು ದೇಶದ ಪ್ರತಿಯೊಂದು ಮಗುವಿನ ಉಜ್ವಲ ಭವಿಷ್ಯಕ್ಕೆ ನಿಜವಾದ ಅರ್ಥ ಕಲ್ಪಿಸಲು ಸಾಧ್ಯವಾಗುತ್ತದೆ.





