ದೇಶದ ಎಲ್ಲ ಧರ್ಮಗಳಿಗೆ ರಕ್ಷಾ ಕವಚವಾಗಿರುವ ಸಂವಿಧಾನದ ಕತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಎಲ್ಲ ಮಠ, ಮಸೀದಿ, ಚರ್ಚ್, ವಿಹಾರಗಳಲ್ಲಿ ಆಚರಿಸಬೇಕು. ಆಗ ಮಾತ್ರ ನಿಜವಾದ ಭಾರತೀಯರ ಭಾವೈಕ್ಯ ತೋರಿಸಿದಂತಾಗುತ್ತದೆ ಎಂದು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದ ಪ್ರೊ. ಅಪ್ಪಗೆರೆ ಸೋಮಶೇಖರ್ ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನೋತ್ಸವ ಸಮಿತಿಯಿಂದ ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಬಾಬಾ ಸಾಹೇಬರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿ, “ಬಡವರಿರುವ ಶ್ರೀಮಂತ ಭಾರತ ನಮಗೆ ಬೇಕಾಗಿಲ್ಲ. ಸಮಾನತೆ, ಸಮೃದ್ಧ ಭಾರತ ನಮಗೆ ಬೇಕಾಗಿದೆ. ದೇಶದ ಭೂಮಿಯನ್ನು ರಾಷ್ಟ್ರೀಕರಣಗೊಳಿಸಿ ಸಹಕಾರ ಬೇಸಾಯಿ ಪದ್ಧತಿ ಮೂಲಕ ಕೃಷಿ ಅಭಿವೃದ್ಧಿಪಡಿಸಬೇಕು” ಎಂದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸಂವಿಧಾನದ ಪ್ರಕಾರ ಆಡಳಿತ ನಡೆಸುವ ಹೆಸರಲ್ಲಿ ದೇಶದ ವಿವಿಧ ವಲಯಗಳಲ್ಲಿ ಖಾಸಗೀಕರಣ ಮಾಡುತ್ತಿದ್ದಾರೆ. ಇದರಿಂದ ಸಂವಿಧಾನದ ಆಶಯಕ್ಕೆ ದಕ್ಕೆ ಬಂದಿದೆ. ದೇಶದ ಸಂಪತ್ತು ಬಂಡವಾಳಶಾಹಿಗಳ ಹಿಡಿತಕ್ಕೆ ಒಳಗಾಗುತ್ತಿರುವುದನ್ನು ದೇಶದ ಪ್ರಜೆಗಳು ತಡೆಯಬೇಕು” ಎಂದು ಹೇಳಿದರು.
ಚಿಂತಕ ಡಾ.ವಿಠ್ಠಲ್ ವಗ್ಗನ್ ಮಾತನಾಡಿ, “ಜಾತಿವ್ಯವಸ್ಥೆ ಬೇರುಬಿಟ್ಟಿರುವ, ಬಿಡುತ್ತಿರುವ ಸಾಹಿತ್ಯ ಕೃತಿಗಳು ಕೈಬಿಡಬೇಕು. ಜಾತಿವ್ಯವಸ್ಥೆ ರೂಪಿಸುವ ಕೃತಿಗಳನ್ನು ಸಾಹಿತಿಗಳು ಬರೆಯಬಾರದು” ಎಂದು ಕರೆ ನೀಡಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, “ಸಾಮಾಜಿಕ ಸಮಾನತೆಗಾಗಿ 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರುವುದು, ಮಹಿಳಾ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಿಸಲು ಅಂಬೇಡ್ಕರರು ಮಂತ್ರಿ ಸ್ಥಾನ ತ್ಯಜಿಸಿದ್ದು ಈ ಸಮಾಜ ಮರೆಯಬಾರದು” ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, “ಬುದ್ದ, ಬಸವ, ಅಂಬೇಡ್ಕರ ಅವರನ್ನು ಅರ್ಥೈಸಿಕೊಂಡು ಮುನ್ನಡೆದರೆ ಸಮ-ಸಮಾಜ ನಿರ್ಮಿಸಲು ಸಾಧ್ಯ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವೇಗೌಡರ ದೈತ್ಯಶಕ್ತಿ, ಮೋದಿಯ ಮೋಡಿ ಮತ್ತು ದಂಗಾದ ಜನ
ಸಮಾರಂಭದಲ್ಲಿ ದಸಂಸ ಮುಖಂಡ ಮಾರುತಿ ಬೌದ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಸಂಘರಕ್ಷಿತ ದಿವ್ಯ ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಮುಖಂಡ ರಮೇಶ ಡಾಕುಳಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಗಂದಗೆ, ಪ್ರಕಾಶ ಮಾಳಗೆ, ವಿಷ್ಣುವರ್ಧನ ವಾಲದೊಡ್ಡಿ,ಅವಿನಾಶ ದೀನೆ, ಪವನ ಮೀಠಾರೆ, ವಿನೋದ ಬಂದಗೆ, ಅನೀಲಕುಮಾರ ಬೆಲ್ದಾರ್, ಬಾಬುರಾವ ಪಾಸ್ವಾನ್, ರಾಜಕುಮಾರ ಬನ್ನೇರ್, ಕಲ್ಯಾಣರಾವ ಭೋಸ್ಲೆ, ಶಿವಕುಮಾರ ನೀಲಿಕಟ್ಟಿ, ಶ್ರೀಪತರಾವ ದೀನೆ, ಅಂಬಾದಾಸ ಗಾಯಕವಾಡ, ಸುಬ್ಬಣ್ಣ ಕರಕನಳ್ಳಿ, ವಿಜಯಕುಮಾರ ಸೋನಾರೆ, ಶಾಲಿವಾನ ಬಡಿಗೇರ್, ಬಾಬುರಾವ ಮೀಠಾರೆ, ರಾಹುಲ ಡಾಂಗೆ, ರವಿ ಭೂಸಂಡೆ ರಾಜಕುಮಾರ ಡೊಂಗರೆ, ವಿನಯ ಮಾಳಗೆ, ರಂಜೀತ ಜೈನೂರು, ಸುಧಾರಾಣಿ ಗುಪ್ತ, ರಾಜಕುಮಾರ ವಾಘಮಾರೆ, ಬುದ್ಧ ಪ್ರಕಾಶ ಭಾವಿಕಟ್ಟಿ, ರಾಹುಲ ಹಾಲಹಿಪ್ಪರಗೆ, ರಾಜಕುಮಾರ ಗುನ್ನಳ್ಳಿ , ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ ಗೋರನಾಳಕರ್, ವಂದನೆ ಅರುಣ ಪಟೇಲ್ ಸೇರಿದಂತೆ ಅನೇಕರಿದ್ದರು.