ಮೈಸೂರು ಜಿಲ್ಲೆ ಕೃಷ್ಣರಾಜನಗರ ತಾಲ್ಲೂಕಿನ ಡೋರ್ನಹಳ್ಳಿಯ ವಿಶ್ವವಿಖ್ಯಾತ ಸಂತ ಅಂತೋಣಿ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವವು ಜೂನ್ 13ರಂದು ನಡೆಯಲಿದೆ.
ಡೋರ್ನಹಳ್ಳಿ ಚರ್ಚ್‌ನ ಧರ್ಮಗುರು ಡೇವಿಡ್ ಸಗಾಯರಾಜ್ ಹಾಗೂ ಆಡಳಿತಾಧಿಕಾರಿ ಪ್ರವೀಣ್ ಪೇದ್ರು ಅವರ ನೇತೃತ್ವದಲ್ಲಿ ಜೂನ್ 5ರಿಂದ ಆರಂಭಗೊಂಡಿರುವ ಮಹೋತ್ಸವದ ಅಂಗವಾಗಿ ಪ್ರತಿದಿನ ವಿಶೇಷ ಧಾರ್ಮಿಕ ವಿಧಿವಿಧಾನಗಳು ಹಾಗೂ ಗಾಯನ ಬಲಿಪೂಜೆಗಳು ನಡೆಯುತ್ತಿವೆ. ಜೂನ್ 12ರವರೆಗೆ ನವದಿನಗಳ ವಿಶೇಷ ಪ್ರಾರ್ಥನೆ ಮತ್ತು ಬಲಿಪೂಜೆಗಳು ನೆರವೇರಲಿವೆ.
ಮಹೋತ್ಸವದ ಪ್ರಮುಖ ಕಾರ್ಯಕ್ರಮ ಜೂನ್ 13ರಂದು ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಎಸ್.ಜೆ. ಅವರ ನೇತೃತ್ವದಲ್ಲಿ ಕನ್ನಡದಲ್ಲಿ ಆಡಂಬರ ಗಾಯನ ಬಲಿಪೂಜೆ ನೆರವೇರಲಿದೆ.
ಅದೇ ದಿನ ಬೆಳಿಗ್ಗೆ 5ರಿಂದ ಸಂಜೆ 5.30ರವರೆಗೆ ವಿವಿಧ ಧರ್ಮಗುರುಗಳ ನೇತೃತ್ವದಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಗಳಲ್ಲಿ ವಿಶೇಷ ಗಾಯನ ಬಲಿಪೂಜೆಗಳು ನಡೆಯಲಿವೆ. ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಚರ್ಚ್‌ಗಳ ಧರ್ಮಗುರುಗಳು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಸುಮಾರು 250 ವರ್ಷಗಳ ಇತಿಹಾಸ ಹೊಂದಿರುವ ಡೋರ್ನಹಳ್ಳಿ ಸಂತ ಅಂತೋಣಿ ಕ್ಷೇತ್ರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಹರಕೆ ಹೊತ್ತು ಬರುವ ಭಕ್ತರು, ಹರಕೆ ತೀರಿದ ಬಳಿಕ ಮುಡಿಕೊಟ್ಟು ಸ್ನಾನ ಮಾಡುವುದು, ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಡೋರ್ನಹಳ್ಳಿ ಸಂತ ಅಂತೋಣಿ ಕ್ಷೇತ್ರವು ಇಂದು ವಿಶ್ವವಿಖ್ಯಾತ ಪುಣ್ಯಕ್ಷೇತ್ರವಾಗಿ ಗುರುತಿಸಿಕೊಂಡಿದೆ.
ಈ ಸುದ್ದಿ ಓದಿದ್ದೀರಾ?ಕೊಡಗು | ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ರೂವಾರಿಗಳು: ಕುಲಪತಿ ಅಶೋಕ ಸಂಗಪ್ಪ ಆಲೂರು
ಮಹೋತ್ಸವದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ಬ್ರೀಫಿಂಗ್ ನಡೆಸಲಾಗಿದೆ. ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.





