ಮೈಸೂರಿನ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಎಂಎ ಮಾಡಿ, ರೈತ ನಾಯಕ ಎಂಡಿಎನ್ ಹಿಂಬಾಲಕರಾಗಿ, ಗ್ರಾಮ ಪಂಚಾಯ್ತಿ ಸದಸ್ಯರಾಗಿ, ಅಲೆಮಾರಿಯಾಗಿ ಅಲೆದ ಜೀವ ಸತೀಶ್ ಮಾಳಿಕೊಪ್ಪ ಮರಳಿ ಬಂದದ್ದು ಮಲೆನಾಡಿನ ಮಣ್ಣಿಗೆ... ಸ್ನೇಹಿತನ ಪ್ರಖರ ವೈಚಾರಿಕತೆ ಮತ್ತು ಸರಳತೆ ಕುರಿತು ನೆಂಪೆ ದೇವರಾಜ್ ನೆನಪು...
ನಾನಾಗ ಮಾನಸಗಂಗೋತ್ರಿಯಲ್ಲಿದ್ದೆ. ಸತೀಶ್ ಮಹಾರಾಜ ಕಾಲೇಜಿನಿಂದ ಮಾನಸ ಗಂಗೋತ್ರಿಗೆ ಬಂದರೆಂದರೆ ಅದೇನೋ ಒಂಥರ ಸಂಚಲನ. ಬರುವಾಗ ಅದೆಷ್ಟೋ ವಿಚಾರಗಳನ್ನು ಹೊತ್ತು ತರುತ್ತಿದ್ದರು. ಈ ಮನುಷ್ಯ ದೊಡ್ಡ ದೊಡ್ಡ ಸಭೆಗಳಲ್ಲಿ ಭಾಷಣ ಮಾಡುತ್ತಿರಲಿಲ್ಲ. ಪತ್ರಿಕೆಗಳಿಗೆ ಬರೆಯುತ್ತಿರಲಿಲ್ಲ. ಸೆಮಿನಾರುಗಳ ಪ್ರೇಕ್ಷಕರಾಗಿರುತ್ತಿದ್ದರೇ ವಿನಃ ಪೇಪರ್ ಮಂಡಿಸುವ ಬಗ್ಗೆ ಆಸಕ್ತಿ ಇರಲಿಲ್ಲ. ದೊಡ್ಡ ಹುದ್ದೆಯನ್ನೂ ಹೊಂದಿರಲಿಲ್ಲ. ಒಂದು ವೇಳೆ ಇವರೊಳಗೆ ಸಹಜವಾಗಿ ಉತ್ಪತ್ತಿಯಾಗುತ್ತಿದ್ದ ಭಾರತೀಯ ಸಮಾಜದ ಬಗೆಗಿನ ಹೊಳಹುಗಳು ಮೂರ್ತರೂಪಕ್ಕೆ ಬಂದಿದ್ದರೆ, ಈ ನಾಡು ಕಂಡ ಬಹುದೊಡ್ಡ ಚಿಂತಕ ಮತ್ತು ಹೋರಾಟಗಾರನಾಗಿ ಖಂಡಿತ ಗುರುತಿಸಲ್ಪಡುತ್ತಿದ್ದರು.
ಬುದ್ದಿಜೀವಿಗಳನೇಕರ ಟೊಳ್ಳುತನಗಳನ್ನು ಲೇವಡಿಗೊಳಪಡಿಸುತ್ತಲೇ ಪ್ರೊಫೆಸರ್ ಎಂ.ಡಿ ನಂಜುಂಡಸ್ವಾಮಿಯವರ ಪ್ರಖರ ಹಿಂಬಾಲಕರಾಗಿ ಹೋಗಿದ್ದರು. ಹಾಗೆ ಹೇಳಲು ಹೋಗುವುದಾದರೆ ಪ್ರೊಫೆಸರ್ ಜೊತೆಗೆ ನಮ್ಮಿಬ್ಬರ ಸಂಬಂಧ ವೈಯಕ್ತಿಕವಾದುದಲ್ಲ. ನಮಗೆ ಅದರ ಅಗತ್ಯವೂ ಕಾಣಲಿಲ್ಲ. ತದ ನಂತರದ ದಿನಗಳಲ್ಲಿ ಪ್ರೊಫೆಸರ್ಗೆ ನಮ್ಮ ಪರಿಚಯ ಮರೆತು ಹೋಗಿತ್ತೋ ಏನೋ? ಆದರೆ ಪ್ರೊಫೆಸರ್ ವಿಚಾರಧಾರೆ, ಹೋರಾಟದ ಸ್ಪಷ್ಟತೆ, ಸಮ ಸಮಾಜ ನಿರ್ಮಾಣದ ಬಗೆಗೆ ಉಟೋಪಿಯನ್ ಅಲ್ಲದ ದೂರದೃಷ್ಟಿ- ಇದೆಲ್ಲ ನಮ್ಮಿಬ್ಬರಿಗೆ ಇಷ್ಟವಾಗುವ ವಿಚಾರಗಳಾಗಿದ್ದವು.
ಸತೀಶ್ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯ ತೆಗೆದುಕೊಂಡರೂ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈ ವಿಷಯದಲ್ಲಿ ನನಗೂ ಸತೀಶ್ಗೂ ಬಹಳಷ್ಟು ಸಲ ವಾದ ವಿವಾದಗಳಾಗಿವೆ. ಈ ವಾದ ವಿವಾದ ಮೊನ್ನೆ ಮೊನ್ನೆಯವರೆಗೂ ನಡೆಯುತ್ತಲೇ ಇತ್ತು. ವೈಯಕ್ತಿಕ ಬದುಕನ್ನು ಲಘುವಾಗಿ ತೆಗೆದುಕೊಂಡದ್ದರ ಬಗ್ಗೆ ನಾನು, ಇದೀಗ ಹೊಸನಗರ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿರುವ ಉಮೇಶ್, ಲಕ್ಕವಳ್ಳಿಯ ಭಾಸ್ಕರ್, ಮೈಸೂರಿನ ವಕೀಲ ಕೆಂಪೇಗೌಡ, ಉಪನ್ಯಾಸಕ ರಾಮಣ್ಣ ಮುಂತಾದವರು ತಕರಾರು ಎತ್ತುತ್ತಲೇ ಅವರನ್ನು ಅಗಾಧವಾಗಿ ಪ್ರೀತಿಸುತ್ತಿದ್ದೆವು. ಯಾವುದೇ ದುರಭ್ಯಾಸಗಳ ದಾಸರಾಗದೆ ಇವರಷ್ಟು ಸರಳವಾಗಿ ಬದುಕುವ ಕಲೆ ಸಿದ್ದಿಸದೆ ಹೋದದ್ದರ ಬಗ್ಗೆಯೂ ಯೋಚಿಸುತ್ತಿದ್ದೆವು.
ಸತೀಶ್ ರೈತ ಚಳವಳಿಯನ್ನು ಅತಿ ಎನ್ನಿಸುವಷ್ಟರಮಟ್ಟಿಗೆ ಮೈಮೇಲೆ ಎಳೆದುಕೊಂಡಿದ್ದರು. ಚಳವಳಿ ದಿಕ್ಕು ತಪ್ಪಿದಾಗ ಕ್ಷೋಭೆಗೊಳಗಾಗಿದ್ದರು. ನಾವೆಲ್ಲ ನೌಕರಿಗಾಗಿ ಅಲೆಯುತ್ತಿದ್ದಾಗ ಈ ಮನುಷ್ಯ ಲಕ್ಕವಳ್ಳಿ ಸಮೀಪದ ತನ್ನೂರು ಮಾಳಿಕೊಪ್ಪಕ್ಕೆ ಬಂದು ಗ್ರಾ.ಪಂ. ಚುನಾವಣೆಗೆ ನಿಂತರು. ಒಂದೇ ಒಂದು ರೂಪಾಯಿಯನ್ನೂ ಖರ್ಚು ಮಾಡದೆ ಗೆದ್ದರು. ಇವರ ಆರೋಗ್ಯಕರ ಕನಸುಗಳಿಗೆ ಪಕ್ಷ ರಾಜಕಾರಣದ ಆಚೆ ಯೋಚಿಸುವ ಮತದಾರರನ್ನು ಸತೀಶ್ ತಯಾರು ಮಾಡಿದ ರೀತಿ ಬೆರಗು ಹುಟ್ಟಿಸುವಂಥದ್ದು. ಬೆರಳೆಣಿಕೆಯಷ್ಟಿದ್ದ ತನ್ನ ಜಾತಿಯ ಬಗ್ಗೆ ಚುನಾವಣೆಯಲ್ಲಿ ತಲೆ ಕೆಡಿಸಿಕೊಳ್ಳದೆ ಎಲ್ಲರಿಗೆ ಪ್ರೀತಿ ಧಾರೆ ಎರೆಯುತ್ತಲೇ ಹೋಗುತ್ತಿದ್ದ ಇವರ ಗುಣ ಅಪೂರ್ವವಾದುದು. ಆದರೆ ಗ್ರಾ.ಪಂ.ಯ ಅಧ್ಯಕ್ಷರಾಗುವ ಸಂದರ್ಭದಲ್ಲಿ ಎದುರಾದ ಒಳಸುಳಿಗಳಿಂದ ಅಗಾಧವಾಗಿ ನಿರಾಶರಾದರು.
ಇದನ್ನು ಓದಿದ್ದೀರಾ?: ಯೂರಿಯಾಗಿದ್ದ ಚೀನಾ ನಿರ್ಬಂಧ ತೆರವು: ಭಾರತದ ರೈತರಿಗೆ ರಿಲೀಫ್
ದಿವಂಗತ ಎನ್.ಡಿ. ಸುಂದರೇಶ್ ಬಿ.ಆರ್. ಪ್ರಾಜೆಕ್ಟಿನಲ್ಲಿ ಬೀಳಗಿ ಎಂಬ ಭ್ರಷ್ಟ ಇಂಜಿನಿಯರ್ ವಿರುದ್ದ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾಗ ಅವರೊಂದಿಗೆ ಪ್ರತಿದಿನ ಧರಣಿಗೆ ಕೂರುತ್ತಿದ್ದ ಸತೀಶ್ ಮಾಳಿಕೊಪ್ಪರಿಗೆ ಆಗ ಸುಂದರೇಶ್ರ ಒಳತೋಟಿಗಳ ಪೂರ್ಣ ಪರಿಚಯವಾಗತೊಡಗಿತಂತೆ. ಚಳವಳಿ ದಿಕ್ಕು ತಪ್ಪುತ್ತಿರುವ ಬಗ್ಗೆ ಅತ್ಯಂತ ಮುಕ್ತವಾಗಿ ನೋವಿನಿಂದ ಸುಂದರೇಶ್ ಹಂಚಿಕೊಂಡಿದ್ದನ್ನು ನನ್ನೊಂದಿಗೆ ಹೇಳಿದ್ದರು ಕೂಡ.
ಇದಾಗಿ ಸ್ವಲ್ಪ ಸಮಯದಲ್ಲೆ ಬರಸಿಡಿಲಿನಂತೆ ಸುಂದರೇಶ್ ಸಾವಿನ ಸುದ್ದಿ ಕೇಳಲ್ಪಟ್ಟಾಗ ನಾನು ಮತ್ತು ಸತೀಶ್ ಅನಾಥರಾದಂತೆ ವರ್ತಿಸತೊಡಗಿದೆವು. ಸುಂದರೇಶ್ ಸಾವಿನ ನಂತರ ಸತೀಶ್ ಮನಸ್ಥಿತಿಯಲ್ಲಿ ಏರುಪೇರುಗಳುಂಟಾದವು. ಒಂದು ರೀತಿಯ ನಿರ್ಲಿಪ್ತತೆ. ಇವರು ಈ ಒಂದು ವಿಚಾರವನ್ನಿಟ್ಟುಕೊಂಡು ದಿನಗಟ್ಟಲೆ ಯೋಚಿಸುತ್ತ ಮೌನವಾಗಿ ತನ್ನ ಮನೆಯ ಪಕ್ಕದಲ್ಲೇ ಹರಿವ ಭದ್ರೆಯ ದಡದಲ್ಲಿ ಕುಳಿತದ್ದೂ ಇದೆ.
ಇಂತಹ ಸತೀಶ್ ಈ ಶತಮಾನದ ಆರಂಭದಲ್ಲಿ ಮನೆ ಬಿಟ್ಟವರು, ಎಲ್ಲರ ಕಣ್ಣಿನಿಂದ ಮರೆಯಾದರು. ಹತ್ತಾರು ವರುಷಗಳ ಕಾಲ ಇವರ ಇರುವಿಕೆಯ ಸಣ್ಣ ಕುರುಹು ಕೂಡ ಕಾಣಲಿಲ್ಲ. ಎಲ್ಲಿದ್ದಾರೆ ಎಂಬುದರ ಅರಿವು ಯಾರಿಗೂ ಬರಲಿಲ್ಲ. ಎಲ್ಲರೂ ಇವರನ್ನು ಮರೆತಿದ್ದೆವು. ಅಷ್ಟರಮಟ್ಟಿಗೆ ಅದೃಶ್ಯರಾಗಿದ್ದರು.
ಈ ಮಧ್ಯೆ ಒಂದು ದಿನ ಇವರ ತಾಯಿ ಮರಣ ಹೊಂದಿದರು. “ದೂರದಿಂದಲೇ ಆಕೆಯ ಶವ ಸಂಸ್ಕಾರವನ್ನು ವೀಕ್ಷಿಸಿ ಕೇರಳದ ಕಡೆ ಪ್ರಯಾಣ ಬೆಳೆಸಿದ್ದೆ. ಆ ಸಂಜೆ ಸ್ಮಶಾನದಲ್ಲಿದ್ದ ನನ್ನನ್ನು ಯಾರೂ ಗುರುತಿಸಲಿಲ್ಲ. ಅಂತಹದೊಂದು ಸ್ಥಿತಿಗೆ ನನ್ನ ದೇಹ ಹೋಗಿತ್ತು” ಎಂಬುದನ್ನು ನನ್ನೊಂದಿಗೆ ಹಂಚಿಕೊಂಡರು.
ಕೇರಳದ ಜನಜೀವನ, ಅಲ್ಲಿಯ ವಾತಾವರಣ, ಜಾತಿ ವ್ಯವಸ್ಥೆ ಈ ಬಗ್ಗೆ ಇವರಿಗಿದ್ದ ಆಳವಾದ ಜ್ಞಾನ ಇನ್ಯಾರಲ್ಲೂ ಕಾಣಲು ಅಸಾದ್ಯ. ಅಂತೆಯೇ ದಕ್ಷಿಣ ಕನ್ನಡ ಕೋಮುಜ್ವಾಲೆಗೆ ಸತತವಾಗಿ ಗುರಿಯಾಗುತ್ತಿದ್ದ ಹಿಂದಿನ ಕಾರಣಗಳನ್ನು ಇವರು ಗ್ರಹಿಸಿದ ರೀತಿಗೆ ದಂಗು ಬಡಿದಿದ್ದೆ. ಕೋಮು ಸಂಘರ್ಷದ ಬಗ್ಗೆ ನಮ್ಮ ಪ್ರಗತಿಪರರು ಬಹಳಷ್ಟು ಬರೆದಿದ್ದಾರೆ. ಕಾರಣಗಳನ್ನು ನೀಡಿದ್ದಾರೆ. ಕ್ಷೇತ್ರ ಕಾರ್ಯಗಳನ್ನು ನಡೆಸಿದ್ದಾರೆ. ಆದರೆ ನನಗೆ ತಿಳಿದಮಟ್ಟಿಗೆ ಇವರಿಗಿದ್ದ ಸ್ಪಷ್ಟತೆ ಇನ್ನಾರಿಗೂ ಇರಲಿಕ್ಕಿಲ್ಲ. ಕೇರಳ ಮತ್ತು ದಕ್ಷಿಣ ಕನ್ನಡದಲ್ಲಿ ಇವರು ಇದ್ದಷ್ಟು ದಿನವೂ ಎಸಿ ರೂಮಿನಲ್ಲಿ ಮಲಗಲಿಲ್ಲ. ಸೆಮಿನಾರುಗಳಲ್ಲಿ ಭಾಗವಹಿಸಿದರೂ ಮೂಲೆಯಲ್ಲಿ ಎಲ್ಲೋ ಕೂತು ವೇದಿಕೆಯಲ್ಲಿದ್ದವರ ಮಾತುಗಳನ್ನು ಆಲಿಸಿಕೊಂಡು ಬಂದಿದ್ದಾರೆ. ಎಸಿ ರೂಮಿನ ಕತೆ ಒಂದಟ್ಟಿಗೆ ಇರಲಿ, ಕನಿಷ್ಠ ಅಗತ್ಯಗಳಿರುವ ಕೊಠಡಿಯಲ್ಲೂ ಇವರು ಕಾಲ ಕಳೆದಿರಲಿಲ್ಲ. ಬಸ್ಸ್ಟಾಂಡು, ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ಸಮುದಾಯ ಭವನಗಳೇ ಇವರ ತಂಗುದಾಣಗಳಾಗಿದ್ದವು. ರಸ್ತೆಗಳಿಗೆ ಟಾರು ಹಾಕುವುದರಿಂದ ಹಿಡಿದು ಗಾರೆ ಕೆಲಸ, ಹೋಟೆಲುಗಳಲ್ಲಿ ಕ್ಲೀನರ್-ಸಪ್ಲೈಯರ್ವರೆಗಿನ ಕೆಲಸಗಳನ್ನು ಮಾಡುತ್ತಲೇ ಸಮಾಜವನ್ನು ರಾಮ ಮನೋಹರ ಲೋಹಿಯಾ ರೀತಿ ಗ್ರಹಿಸಿದ್ದರು. ಇವರು ಎಲ್ಲೋ ನಕ್ಸಲೀಯ ಚಳವಳಿಯೊಳಗೆ ಧುಮುಕಿ ತಲೆ ಮರೆಸಿಕೊಂಡಿರಬಹುದೆಂದು ಹಲವರು ಊಹಿಸಿದ್ದರು. ಆದರೆ ಇವರೊಳಗೆ ಮಹಾತ್ಮಾಗಾಂಧಿ ಪ್ರಖರವಾಗಿ ಹೊಕ್ಕಿದ್ದರು. ಗಾಂಧಿಯ ಪ್ರಸ್ತುತತೆಯನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಇತರರೊಂದಿಗೆ ಗಾಂಧಿಯನ್ನು ಹಂಚಿಕೊಳ್ಳುವಾಗ ಬೇರೆಯದೇ ರೀತಿಯ ವ್ಯಾಖ್ಯಾನವನ್ನು ಕೊಡಬಲ್ಲವರಾಗಿದ್ದರು.
ಇದನ್ನು ಓದಿದ್ದೀರಾ?: ಎನ್.ಎಸ್. ಶಂಕರ್ ಬರೆದ ‘ರಾಮಾ’ಯಣ!
ಹನ್ನೆರಡು ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಡಾ. ಹಿ.ಶಿ. ರಾಮಚಂದ್ರಗೌಡರ ಸಂಪಾದಕತ್ವದಲ್ಲಿ ರೈತ ನಾಯಕ ಎನ್.ಡಿ. ಸುಂದರೇಶ್ ಕುರಿತ ಗೌರವ ಗ್ರಂಥ ಬಿಡುಗಡೆಯಾಯಿತು. ಈ ಹೊತ್ತಿಗೆಯಲ್ಲಿ ನನ್ನದೊಂದು ಲೇಖನವೂ ಇತ್ತು. ಈ ಲೇಖನದಲ್ಲಿ ಸತೀಶ್ ಮಾಳಿಕೊಪ್ಪರವರ ಹೆಸರನ್ನು ಪ್ರಸ್ತಾಪಿಸಿದ್ದೆ. ಕಾಕತಾಳಿಯವೋ ಎಂಬಂತೆ ಅದೇ ದಿನ ಶಿವಮೊಗ್ಗದಿಂದ ವಾಪಸು ಬರುತ್ತಿದ್ದಾಗ ನನ್ನ ಫೋನು ಸದ್ದು ಮಾಡಿತು. “ಯಾರು ಎಂಬುದನ್ನು ಊಹಿಸಿ” ಎಂಬ ಧ್ವನಿಯನ್ನು ಗುರುತಿಸದಾದೆ. “ನಾನು ಮಾಳಿಕೊಪ್ಪ” ಎಂದಾಗ ಎಲ್ಲಿಲ್ಲದ ಸಂತೋಷವಾಯಿತು. ಕುಣಿದು ಕುಪ್ಪಳಿಸುವಂತಾಯಿತು. ಕೊಪ್ಪ ಪಟ್ಟಣದಿಂದ ಫೋನ್ ಮಾಡಿದ್ದ ಅವರನ್ನು ಮನೆಗೆ ಬರ ಹೇಳಿದೆ. ಸರಿ ಸುಮಾರು ಹದಿನೈದು ದಿನಗಳ ಕಾಲ ನನ್ನ ಮತ್ತು ಅವರ ನಡುವೆ ಚರ್ಚೆ, ಸಂವಾದ, ವಾದ ವಿವಾದ, ವಿಚಾರ ವಿನಿಮಯಗಳು ರಾತ್ರಿ ಹಗಲೆನ್ನದೆ ಮುಂದುವರೆದವು. ನಂತರ ಸಿಗುವುದು ಸಾಮಾನ್ಯವಾಯಿತು.

ಕೆಲವು ತಿಂಗಳ ಹಿಂದೆ ಇವರು ಅಪಘಾತಕ್ಕೆ ಗುರಿಯಾದರು. ಹಿಂದಿನಿಂದ ಬಂದ ವಾಹನ ಇವರಿಗೆ ತಾಗಿಸಿ ಮುಂದೆ ಹೋಯಿತು. ಇವರನ್ನು ಗುರುತಿಸಿದವರು ಆಸ್ಪತ್ರೆಗೆ ಸೇರಿಸಿದರು. ತಲೆಗೆ ಬಿದ್ದ ಪೆಟ್ಟಿನಿಂದ ಚೇತರಿಸಿಕೊಂಡ ಮೇಲೂ ನನಗೆ ಅನೇಕ ಬಾರಿ ದೂರವಾಣಿ ಮೂಲಕ ಮಾತಿಗೆ ಸಿಕ್ಕಿದ್ದರು. “ನಾವು ರೈತ ಸಂಘ ಮತ್ತು ಪ್ರೊಫೆಸರ್ ಅವರನ್ನು ಬಹಳವಾಗಿ ಹಚ್ಚಿಕೊಂಡೆವು. ಇದು ಅಗತ್ಯವೂ ಇತ್ತು. ಆದರೆ ಬದಲಾದ ಈ ಸನ್ನಿವೇಶದಲ್ಲಿ ಕೋಮುವಾದಕ್ಕೆ ಸಂಬಂಧಿಸಿದಂತೆ ರೈತ ಸಂಘದ ನಿಲುವು ಪ್ರಖರವಾಗಿರಲಿಲ್ಲ. ಕೋಮುವಾದ ಮತ್ತು ಧರ್ಮಾಂಧತೆಗೆ ಸಂಬಂಧಿಸಿದಂತೆ ಲಂಕೇಶ್ಗಿದ್ದ ಸ್ಪಷ್ಟತೆ ಪ್ರೊಫೆಸರ್ಗೆ ಇರಲಿಲ್ಲವೇನೋ ಎನಿಸುತ್ತೆ. ಆರ್ಥಿಕ ವಿಚಾರಗಳು ಮತ್ತು ಭಾರತೀಯ ಸಾಮಾಜಿಕ ಸಂರಚನೆಯ ಬಗ್ಗೆ ಪ್ರೊಫೆಸರ್ಗಿದ್ದ ಸ್ಪಷ್ಟತೆಯನ್ನು ಮುನ್ನೆಲೆಗೆ ತರದೆ ನಿರ್ಲಕ್ಷಿಸಿದರು ಎನಿಸುತ್ತದೆ. ಅಂದು ರೈತ ಸಂಘ ಅಥವಾ ದಿವಂಗತ ನಂಜುಂಡಸ್ವಾಮಿಯವರು ಕೋಮು ಧ್ರುವೀಕರಣದ ಅಪಾಯವನ್ನು ಗ್ರಹಿಸಿ ತೀಕ್ಷ್ಣವಾಗಿ ರೈತರಿಗೆ ತಿಳಿಸುವ ಕಾರ್ಯ ಮಾಡಿದ್ದಿದ್ದರೆ, ಇಂದಿನ ರಾಜಕೀಯದ ಸ್ಥಿತಿಯೇ ಬದಲಾಗುತ್ತಿತ್ತು. ಧರ್ಮಾದಾರಿತ ರಾಜಕಾರಣ ಮೇಲುಗೈ ಸಾಧಿಸುತ್ತಿರಲಿಲ್ಲ” ಎಂಬ ಇವರ ಕೊನೆಯ ಮಾತು ಮತ್ತೆ ಮತ್ತೆ ಗುನುಗುವಂತೆ ಮಾಡುತ್ತಿದೆ.
ಮತ್ತೊಮ್ಮೆ ಅಂದರೆ ಕಳೆದ ಒಂದು ತಿಂಗಳ ಹಿಂದೆ ತಮ್ಮ ಮನೆಯಲ್ಲಿ ಬಿದ್ದವರು ಮೇಲೇಳಲೇ ಇಲ್ಲ. ಪ್ರಜ್ಞಾಹೀನ ಸ್ಥಿತಿಗೆ ಹೋದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಿಸಲಿಲ್ಲ. ಅದೇ ಸ್ಥಿತಿಯಲ್ಲಿ ಮಾಳಿಕೊಪ್ಪಕ್ಕೆ ಕರೆದುಕೊಂಡು ಹೋಗಲಾಯಿತು. ಅಂತಿಮವಾಗಿ ಅಂದರೆ ದಿನಾಂಕ 10-6-2026ರ ಸಂಜೆ ಕೊನೆಯುಸಿರು ಎಳೆದರು. ಸತೀಶ್ ಎಂಬುವರು ಯಾರೂ ಅರಿಯದ ವೀರನಂತೆ ಇಹಲೋಕ ತ್ಯಜಿಸಿದ ರೀತಿ ಕರಳು ಹಿಂಡುವಂಥದ್ದು. ಪದೆ ಪದೇ ನೆನಪಾಗುತ್ತಾರೆ. ಇವರಿಂದ ಕಲಿತ ಎಷ್ಟೋ ವಿಚಾರಗಳು, ಇವರೊಂದಿಗೆ ಹಂಚಿಕೊಂಡ ಘಟನೆಗಳು, ಭಾಗವಹಿಸಿದ ರೈತ ಚಳವಳಿಯ ಕಾರ್ಯಕ್ರಮಗಳು, ನಮ್ಮ ಮನೆಯಲ್ಲಿ ಕಳೆದ ದಿನಗಳು ಸದಾ ನೆನಪಿನಲ್ಲಿ ಉಳಿಯುವಂತವುಗಳು. ಸಂತಾಪಗಳು ಸತೀಶ್… ಹೋಗಿಬನ್ನಿ.

ನೆಂಪೆ ದೇವರಾಜ್
ಪತ್ರಕರ್ತ, ಲೇಖಕ, ಸಂಘಟಕ, ಹೋರಾಟಗಾರ ಮತ್ತು ಕೃಷಿಕ





