ಗುರಮಿಠಕಲ್ ತಾಲೂಕಿನ ಕಡೆಚೂರು, ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ರಾಸಾಯನಿಕ ಕಂಪನಿಯಲ್ಲಿ ಕೆಮಿಕಲ್ ಸೋರಿಕೆಯಿಂದ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ದುರಂತದಲ್ಲಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಅಸ್ವಸ್ಥಗೊಂಡ ಇನ್ನಿಬ್ಬರನ್ನು ಕಲಬುರಗಿಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳ ಪರಿಶೀಲನೆ ವೇಳೆ ಕಂಪನಿಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸದಿರುವುದು ಕಂಡುಬಂದಿದ್ದು, ತಪ್ಪಿತಸ್ಥ ಕಂಪನಿಯ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸಚಿವರು ಸೂಚನೆ’ ನೀಡಿದರು.
‘ಮೃತ ಕಾರ್ಮಿಕರ ಕುಟುಂಬಗಳ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಅವರಿಗೆ ಸೂಕ್ತ ಪರಿಹಾರ ದೊರಕುವಂತೆ ಜಿಲ್ಲಾಡಳಿತ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಈ ಘಟನೆ ಕುರಿತು ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆಸಿ, ಕೈಗಾರಿಕಾ ಪ್ರದೇಶಗಳಲ್ಲಿ ಮಾಲಿನ್ಯ ನಿಯಂತ್ರಣ ಹಾಗೂ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಬರದಿಂದ ಕಂಗೆಟ್ಟ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ: ಹಸಿರು ಸೇನೆ ಆಗ್ರಹ
ಪರಿಶೀಲನೆ ವೇಳೆ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಯಾದಗಿರಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




