ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಜಲ್ ಜೀವನ್ ಮಿಷನ್ ಯೋಜನೆ ಹಾಗೂ ಬರ ಪರಿಸ್ಥಿತಿಯ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಯ ಸ್ಥಿತಿಗತಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಸಮಸ್ಯಾತ್ಮಕ ಗ್ರಾಮಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಸ್ಥಳೀಯ ಪರಿಸ್ಥಿತಿ ಪರಿಶೀಲಿಸಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ನಿರ್ದೇಶಿಸಿದರು.
“ಅಧಿಕಾರಿಗಳು ಕಚೇರಿ ಕೋಣೆಯಲ್ಲೇ ಆಡಳಿತ ನಡೆಸದೆ ಗ್ರಾಮಗಳಿಗೆ ತೆರಳಿ ಜನರೊಂದಿಗೆ ನೇರ ಸಂಪರ್ಕ ಬೆಳೆಸಬೇಕು. ಗ್ರಾಮಗಳ ನೈಜ ಪರಿಸ್ಥಿತಿಯನ್ನು ಅರಿತು ಕಾರ್ಯನಿರ್ವಹಿಸಿದಾಗ ಮಾತ್ರ ಪರಿಣಾಮಕಾರಿ ಆಡಳಿತ ಸಾಧ್ಯ,” ಎಂದು ಅವರು ಹೇಳಿದರು.

ಜಲ್ ಜೀವನ್ ಮಿಷನ್ ಯೋಜನೆಯಡಿ ಬಾಕಿ ಉಳಿದಿರುವ ಅನುದಾನದ ಕುರಿತು ಮಾಹಿತಿ ಪಡೆದು, ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ತಳಮಟ್ಟದ ಅಧಿಕಾರಿಗಳು ಕ್ಷೇತ್ರಮಟ್ಟದಲ್ಲಿ ಕಾರ್ಯನಿರ್ವಹಿಸಿ ಪ್ರತಿಯೊಂದು ಗ್ರಾಮದ ಬೆಳೆ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರ ಸಂಕಷ್ಟಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸಚಿವರು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕಲಬುರಗಿ | ಜಮೀನು ವಿವಾದ : ದಲಿತ ರೈತನಿಗೆ ಜಾತಿ ನಿಂದನೆ ಆರೋಪ, 12 ಮಂದಿಗೆ ವಿರುದ್ಧ ಪ್ರಕರಣ ದಾಖಲು
ಸಭೆಯಲ್ಲಿ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ್, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರು, ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




