ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಸ್ತುತ ಯಾವುದೇ ಚುನಾವಣಾ ರಾಜಕೀಯಕ್ಕೆ ಧುಮುಕುವುದಿಲ್ಲ ಹಾಗೂ ದೇಶದಲ್ಲಿ ಪ್ರಜಾಸತ್ತಾತ್ಮಕ ‘ಒತ್ತಡ ಗುಂಪು’ (Pressure Group) ಆಗಿ ಕಾರ್ಯನಿರ್ವಹಿಸಲಿದೆ ಎಂದು ಅದರ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ, ದೇಶದ ಸಾರ್ವಜನಿಕರು ಮತ್ತು ಯುವಜನರ ಸಮಸ್ಯೆಗಳನ್ನು ಆಲಿಸಲು ಸೆಪ್ಟೆಂಬರ್‌ನಿಂದ ‘ಕ್ಯಾ ಬೋಲ್ತಿ ಪಬ್ಲಿಕ್’ (Kya Bolti Public- ಜನರು ಏನು ಹೇಳುತ್ತಾರೆ?) ಎಂಬ ರಾಷ್ಟ್ರವ್ಯಾಪಿ ಆಂದೋಲನವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ಪರಿಣಾಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಈ ಯಶಸ್ಸಿನ ಉತ್ಸಾಹದಲ್ಲಿರುವ ಸಿಜೆಪಿ, ತನ್ನ ತಳಮಟ್ಟದ ಜಾಲವನ್ನು ಬಲಪಡಿಸಲು ಮುಂದಾಗಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಸಿಜೆಪಿ ಕೋರ್ ಕಮಿಟಿಯ ಎರಡು ದಿನಗಳ ಸುದೀರ್ಘ ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ದೀಪ್ಕೆ ಈ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಇಂಕ್ ದಾಳಿ; ಮಹಿಳೆ ವಶಕ್ಕೆ
ಸೆಪ್ಟೆಂಬರ್‌ನಿಂದ ಆರಂಭವಾಗಲಿರುವ ‘ಕ್ಯಾ ಬೋಲ್ತಿ ಪಬ್ಲಿಕ್’ ಅಭಿಯಾನದಡಿ ಸಿಜೆಪಿ ಪ್ರತಿನಿಧಿಗಳು ದೇಶಾದ್ಯಂತ ಸಂಚರಿಸಿ ಯುವಜನರು ಹಾಗೂ ಸಾಮಾನ್ಯ ಜನರ ಕುಂದುಕೊರತೆಗಳು, ಆಕಾಂಕ್ಷೆಗಳು ಮತ್ತು ಪ್ರಚಲಿತ ಸಾಮಾಜಿಕ-ರಾಜಕೀಯ ಸ್ಥಿತಿಗತಿಗಳ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ದೇಶದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ವಾಣಿಜ್ಯೀಕರಣ ಹೆಚ್ಚಾಗಿದ್ದು, ಸಾಮಾನ್ಯ ಕುಟುಂಬಗಳಿಗೆ ಶಿಕ್ಷಣ ದುಬಾರಿಯಾಗಿದೆ. ಜತೆಗೆ, ದೇಶದ ಶೇ. 80ರಷ್ಟು ಪದವೀಧರರು ನಿರುದ್ಯೋಗ ಎದುರಿಸುತ್ತಿದ್ದಾರೆ. ಈ ವಿಷಯಗಳನ್ನು ರಾಷ್ಟ್ರೀಯ ಮಟ್ಟದ ಪ್ರಮುಖ ಚರ್ಚಾವಿಷಯವನ್ನಾಗಿ ಮಾಡುವುದಾಗಿ ದೀಪ್ಕೆ ಮಾಹಿತಿ ನೀಡಿದ್ದಾರೆ.
ಹಾಗೆಯೇ ಸದ್ಯ ರಾಜಕೀಯ ವ್ಯವಸ್ಥೆ, ನ್ಯಾಯಾಂಗ, ಮಾಧ್ಯಮ ಹಾಗೂ ಚುನಾವಣೆ ಆಯೋಗದಂತಹ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಸಾರ್ವಜನಿಕರ ನಂಬಿಕೆ ಕ್ಷೀಣಿಸಿದೆ. ಈ ಸಂಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ತಟಸ್ಥತೆಯನ್ನು ಮರುಸ್ಥಾಪಿಸಲು ಜನಾಂದೋಲನದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಸಿಜೆಪಿಯ ಸಿದ್ಧಾಂತವು ಭಾರತೀಯ ಸಂವಿಧಾನಕ್ಕೆ ಬದ್ಧವಾಗಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ಮಹಾತ್ಮಾ ಗಾಂಧೀಜಿಯವರ ಅಹಿಂಸೆ ಮತ್ತು ಜವಾಹರಲಾಲ್ ನೆಹರೂ ಅವರ ನವ ಭಾರತದ ಕನಸಿನ ಸಾಕಾರಕ್ಕೆ ಶ್ರಮಿಸಲಿದೆ ಎಂದಿದ್ದಾರೆ.




