ಕೇಂದ್ರ ಸರ್ಕಾರವು ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಹಾಗೂ ದೂರದರ್ಶನದ ಕಾರ್ಯಾಚರಣೆ ನೋಡಿಕೊಳ್ಳುವ ಪ್ರಸಾರ್ ಭಾರತಿ ಮಂಡಳಿಗೆ ಸುಪ್ರಸಿದ್ಧ ಗೀತರಚನೆಕಾರ, ಬರಹಗಾರ ಹಾಗೂ ಸಂವಹನ ತಜ್ಞ ಪ್ರಸೂನ್ ಜೋಶಿ ಅವರನ್ನು ಹೊಸ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ನವನೀತ್ ಕುಮಾರ್ ಸೆಹಗಲ್ ಅವರ ಹಠಾತ್ ರಾಜೀನಾಮೆಯಿಂದ ಖಾಲಿ ಇದ್ದ ಈ ಮಹತ್ವದ ಸ್ಥಾನಕ್ಕೆ ಜೋಶಿ ಅವರನ್ನು ನೇಮಿಸಲಾಗಿದೆ. ಸಂಸ್ಥೆಯಲ್ಲಿ ತಂತ್ರಜ್ಞಾನದ ಬದಲಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಇದು ಪ್ರಮುಖ ಬೆಳವಣಿಗೆಯಾಗಿದೆ.
ವನೀತ್ ಕುಮಾರ್ ಸೆಹಗಲ್ ಅವರು ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಬಳಿಕ ಮಾರ್ಚ್ 16, 2024 ರಂದು ಅಧಿಕಾರವನ್ನು ಸ್ವೀಕರಿಸಿದ್ದ ನವನೀತ್ ಕುಮಾರ್ ಸೆಹಗಲ್ ಅವರು, ಎರಡು ವರ್ಷ ಪೂರೈಸುವ ಮುನ್ನವೇ, ಅಂದರೆ ಡಿಸೆಂಬರ್ 2025 ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅವರ ರಾಜೀನಾಮೆಯನ್ನು ಅಂಗೀಕರಿಸಿದರೂ, ಅವರು ಇಷ್ಟು ಬೇಗ ನಿರ್ಗಮಿಸಲು ನಿಖರವಾದ ಕಾರಣಗಳು ಇನ್ನೂ ಬಹಿರಂಗವಾಗಿಲ್ಲ.
ಈ ಹೊಸ ನೇಮಕದ ಬಗ್ಗೆ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಸೂನ್ ಜೋಶಿ ಅವರಿಗೆ ಶುಭ ಹಾರೈಸಿದ್ದಾರೆ. “ಜೋಶಿ ಅವರು ಜಾಹೀರಾತು, ಸಾಹಿತ್ಯ, ಕಲೆ ಹಾಗೂ ಸಿನಿಮಾ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಹೆಸರು ಮಾಡಿದ ವಿಶಿಷ್ಟ ಸೃಜನಶೀಲ ವ್ಯಕ್ತಿ, ಆದರೂ ಅವರ ಹೃದಯ ಭಾರತಕ್ಕಾಗಿ ಮಿಡಿಯುತ್ತದೆ. ಅವರ ಮಾರ್ಗದರ್ಶನದಲ್ಲಿ ಪ್ರಸಾರ್ ಭಾರತಿ ಹೊಸ ಚೈತನ್ಯ, ಆಳವಾದ ಉದ್ದೇಶ ಹಾಗೂ ಹೊಸ ಸೃಜನಶೀಲ ಧ್ವನಿಯನ್ನು ಪಡೆಯಲಿದೆ,” ಎಂದು ಸಚಿವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಅಭಿನಂದನೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಐಪಿಎಲ್‌ನಲ್ಲೂ ಕಲಾತ್ಮಕ ಶೈಲಿ: ಅಪರೂಪದ ಆಟಗಾರ ಕೆ.ಎಲ್. ರಾಹುಲ್
ಪ್ರಸೂನ್ ಜೋಶಿ ಅವರು ಸಾಹಿತ್ಯ ಹಾಗೂ ಸಂವಹನ ಕ್ಷೇತ್ರದಲ್ಲಿ ವಿಪುಲ ಅನುಭವ ಹೊಂದಿದ್ದಾರೆ. 2017 ರಿಂದ ಅವರು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಚಿತ್ರ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಮುಖ್ಯವಾದ ಪಾತ್ರ ವಹಿಸಿದ್ದಾರೆ. ಇದಕ್ಕೂ ಮುನ್ನ, ಅವರು ಮೆಕ್ ಕ್ಯಾನ್ ವರ್ಲ್ಡ್ ಗ್ರೂಪ್ (McCann World Group) ಇಂಡಿಯಾದ ಸಿಇಒ ಹಾಗೂ ಏಷ್ಯಾ ಪೆಸಿಫಿಕ್ ಅಧ್ಯಕ್ಷರಾಗಿ ಜಾಹೀರಾತು ಕ್ಷೇತ್ರದಲ್ಲೂ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ, ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ (IGNCA) ಟ್ರಸ್ಟಿಯೂ ಸಹ ಆಗಿದ್ದಾರೆ.
ಇದೆಲ್ಲ ಒಂದೆಡೆಯಾದರೆ, ಜೋಶಿ ಅವರ ಈ ಹೊಸ ನೇಮಕವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಿಂದೊಮ್ಮೆ ಪ್ರಧಾನಿ ಮೋದಿಯವರನ್ನು ಸಂದರ್ಶನ ಮಾಡುವಾಗ ಪ್ರಸೂನ್ ಜೋಶಿ ಅವರು, ‘ನೀವು ಓರ್ವ ಸಂತನಂತೆ (ಫಕೀರನಂತೆ) ಸರಳ ಜೀವನ ನಡೆಸುತ್ತೀರಂತೆ, ಹೌದಾ?’ ಎಂದು ಪ್ರಶ್ನೆ ಕೇಳಿದ್ದರು. ಈ ಹಳೆಯ ವಿಡಿಯೋವನ್ನು ಈಗ ಮತ್ತೆ ಹಂಚಿಕೊಂಡು ಚರ್ಚಿಸುತ್ತಿರುವ ನೆಟ್ಟಿಗರು, “ಪ್ರಧಾನಿಯವರನ್ನು ಹೊಗಳಿ ಸಂದರ್ಶನ ಮಾಡಿದ ಈ ಕಾರಣಕ್ಕಾಗಿಯೇ ಜೋಶಿ ಅವರಿಗೆ ಈಗಿನ ಈ ಪ್ರಸಾರ್ ಭಾರತಿಯ ಉನ್ನತ ಹುದ್ದೆಯಲ್ಲದೆ, ಕೇಂದ್ರದ ಇತರ ಹುದ್ದೆಗಳು, ಪ್ರಶಸ್ತಿ ಹಾಗೂ ಬಿರುದುಗಳು ಬಕ್ಷೀಸಾಗಿ ಒಲಿದು ಬರುತ್ತಿವೆಯೇ?” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಟುವಾಗಿ ಪ್ರಶ್ನಿಸುತ್ತಿದ್ದಾರೆ.
2018ರಲ್ಲಿ ಲಂಡನ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ‘Bharat Ki Baat, Sabke Saath’ ಕಾರ್ಯಕ್ರಮದಲ್ಲಿ ಪ್ರಸೂನ್ ಜೋಶಿ ಸಂದರ್ಶನ ಮಾಡಿದ್ದರು. ಅಲ್ಲಿ ಅವರು ಮೋದಿ ಅವರನ್ನು “ಫಕೀರಿ” (fakiri – ಸಂತ/ಫಕೀರ್ ಗುಣ, ಸರಳತೆ, ವೈಯಕ್ತಿಕ ಆಸಕ್ತಿ ರಹಿತ) ಎಂದು ವರ್ಣಿಸಿದ್ದರು.




