ಒಳಮೀಸಲಾತಿ ವಿಷಯದಲ್ಲಿ ಕೆಲ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅವರಿಗೆ ತವರು ಮನೆ, ಗಂಡನ ಮನೆ ಯಾವುದು ಎನ್ನುವುದು ಗೊತ್ತಿಲ್ಲ. ಕೆಲವು ಕೋಳಿಗಳಿಗೆ ಕಾಳು ಹಾಕುತ್ತಾರೆ. ಕಾಳು ತಿನ್ನಲು ಹೀಗೆಲ್ಲ ಮಾಡುತ್ತವೆ. ಒಳಮೀಸಲು ಹೆಸರಿನಲ್ಲಿ .25 ಮೀಸಲು ಘೋಷಿಸಲಾಗಿದೆ. 5.25 ಮೀಸಲು ಎಂದರೆ .25 ಮೀಸಲನ್ನು ಹೇಗೆ ಸರಿದೂಗಿಸುತ್ತಾರೆ ಎಂಬುದು ಅಸ್ಪಷ್ಟವಾಗಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.
ಬಾಗಲಕೋಟೆ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರತಿ ಇಲಾಖೆಗಳಲ್ಲೂ ಏಕಕಾಲಕ್ಕೆ 15 ಹುದ್ದೆಗಳಿಗೆ ನೇಮಕಾತಿ ಕರೆಯುವುದಿಲ್ಲ. ವಿಶ್ವ ವಿದ್ಯಾಲಯಗಳಲ್ಲಿ 1 ಅಥವಾ 2 ಹುದ್ದೆಗಳ ನೇಮಕಾತಿಯಾಗುತ್ತದೆ. ಹೀಗಾದರೆ ಮೀಸಲಾತಿ ಹೇಗೆ ಸರಿದೂಗಿಸುತ್ತಾರೆ” ಎಂದು ಸಂಸದ ಗೋವಿಂದ ಕಾರಜೋಳ ಸರ್ಕಾರವನ್ನು ಪ್ರಶ್ನಿಸಿದರು.
ರಾಜ್ಯ ಸರ್ಕಾರದಲ್ಲಿ ಕುರ್ಚಿ ಕಿತ್ತಾಟ ನಡೆದಿದೆ, ವಿಧಾನಸೌಧದಲ್ಲಿ ಆಡಳಿತ ನಿಂತ ನೀರಾಗಿದೆ. ಮೇ 4 ರಂದು ಐದು ರಾಜ್ಯಗಳು ಹಾಗೂ ರಾಜ್ಯದ ಎರಡು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ. ಅಂದು ಸಿದ್ದರಾಮಯ್ಯನವರ ಕುರ್ಚಿ ಫಲಿತಾಂಶವೂ ಪ್ರಕಟವಾಗುತ್ತದೆ. ಸಿಎಂ ಆಗಲು ಡಿಸಿಎಂ ಶಿವಕುಮಾರ್ ಶಾಲು ಹಾಕಿಕೊಂಡು ಕುಳಿತಿದ್ದಾರೆ. ಸಿದ್ದರಾಮಯ್ಯನವರ 40 ಹಿಂಬಾಲಕರು ಹೈಕಮಾಂಡ್‌ಗೆ ಹೋಗಿ ಲಾಬಿ ನಡೆಸಿದ್ದಾರೆ. ಶಿವಕುಮಾರ್ ಪರವಾಗಿ 50 ಮಂದಿ ಲಾಬಿ ಮಾಡುತ್ತಿದ್ದಾರೆ. ಆಡಳಿತ ಸಂಪೂರ್ಣ ಕುಸಿದುಹೋಗಿದೆ. ಮೇ 4ರ ನಂತರ ರಾಜ್ಯದಲ್ಲಿ ಬದಲಾವಣೆಯಾಗಲಿದೆ. ಸಿದ್ದರಾಮಯ್ಯ ಇನ್ನು 15 ದಿನದ ಸುಲ್ತಾನ್” ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ>ಬಾಗಲಕೋಟೆ | ಖುರ್ಚಿ ಜಪ ಬಿಟ್ಟು ಬೀದಿಗಿಳಿದರೆ ಅಭಿವೃದ್ಧಿ ಕಾಣುತ್ತದೆ: ಸಿಎಂಗೆ ಚರಂತಿಮಠ ಟಾಂಗ್
“ಕಸ ಗುಡಿಸುವವರು, ಪೊಲೀಸ್ ಪೇದೆಗಳು ಸೇರಿದಂತೆ ಕೆಲ ಹುದ್ದೆಗಳಿಗೆ ಮಾತ್ರ ಮೀಸಲು ಅನ್ವಯವಾಗಲಿದೆ. ಇಂತಹ ಸಂದರ್ಭದಲ್ಲಿ ನ್ಯಾಯ ದೊರೆಯುವುದಿಲ್ಲ. ನ್ಯಾ. ನಾಗಮೋಹನ ದಾಸ್, ನ್ಯಾ. ಸದಾಶಿವ ಆಯೋಗಗಳ ವರದಿ, ಮಾಧುಸ್ವಾಮಿ ವರದಿಗಳನ್ನು ಸರಕಾರ ತಿರಸ್ಕರಿಸಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಒಳಮೀಸಲು ಸಮಿತಿ ರಚಿಸಿ ಮೀಸಲಾತಿ ನಿಗದಿಪಡಿಸಲಾಗಿದೆ. ಹಾಗಿದ್ದರೆ ಈ ಮೊದಲಿನ ವರದಿಗಳೆಲ್ಲ ಅವೈಜ್ಞಾನಿಕವೇ? ಎಂಬ ಪ್ರಶ್ನೆಗೆ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು.
“ರಾಜ್ಯದ ಉದ್ದಗಲಕ್ಕೂ ಬರಗಾಲ ಆವರಿಸಿದೆ. ಕುಡಿವ ನೀರಿನ ಹಾಹಾಕಾರವಿದೆ. ಸಿಎಂ ವಿಧಾನಸೌಧದಲ್ಲಿ ಕುಳಿತು ಆಡಳಿತ ನಡೆಸಿ ಮಾಹಿತಿ ಪಡೆಯಲಿ. ತೀವ್ರ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಿಗೆ ತಲಾ 50 ಕೋಟಿ ರೂ. ಬಿಡುಗಡೆ ಮಾಡಲಿ” ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಗಲಕೋಟೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಇದ್ದರು.




