ರಾಜ್ಯದಲ್ಲಿ ತಂಬಾಕು ಬೆಳೆಗಾರರಿಗೆ ಮಹತ್ವದ ಬದಲಾವಣೆಯನ್ನು ತಂದಿರುವ 2026-27ನೇ ಸಾಲಿನ ನಿಯಮಗಳು ರೈತರಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿವೆ. ಸಮರ್ಪಕ ಬೆಲೆ, ಖರೀದಿ ಭರವಸೆ, ಸಾಲ ಸೌಲಭ್ಯ ಹಾಗೂ ಪರ್ಯಾಯ ಬೆಳೆಗಳಿಗೆ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ.
ಮೈಸೂರು ಜಿಲ್ಲೆಯ ವಾಣಿಜ್ಯ ಬೆಳೆಗಳಲ್ಲಿ ತಂಬಾಕು ಮತ್ತು ಶುಂಠಿ ಪ್ರಮುಖ ಸ್ಥಾನವನ್ನು ಪಡೆದಿವೆ. ವಿಶೇಷವಾಗಿ ವರ್ಜೀನಿಯಾ ತಂಬಾಕು ಬೆಳೆ ಜಿಲ್ಲೆಯ ಕೃಷಿ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ಹುಣಸೂರು, ಪಿರಿಯಾಪಟ್ಟಣ, ಹೆಗ್ಗಡದೇವನಕೋಟೆ ಹಾಗೂ ಕೃಷ್ಣರಾಜನಗರ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ತಾಲೂಕುಗಳ ಸುತ್ತಮುತ್ತ 53 ಸಾವಿರಕ್ಕೂ ಹೆಚ್ಚು ಪರವಾನಿಗೆ ಹೊಂದಿರುವ ರೈತರು ಈ ಬೆಳೆಯನ್ನು ಅವಲಂಬಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ತಂಬಾಕು ಬೆಲೆಯಲ್ಲಿ ಉಂಟಾದ ಕುಸಿತ ಹಾಗೂ ಬೆಳೆಗೆ ವಿಧಿಸಿರುವ ಮಿತಿಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ.
ಈ ಪ್ರದೇಶಗಳು ಮುಖ್ಯವಾಗಿ ಮಳೆ ಆಶ್ರಿತವಾಗಿದ್ದು, ರೈತರು ಬಹುತೇಕವಾಗಿ ಮಳೆಯನ್ನೇ ಅವಲಂಬಿಸಿದ್ದಾರೆ. ತಂಬಾಕು ಬೆಳೆಯು ವರ್ಷಪೂರ್ತಿ ಶ್ರಮ ಹಾಗೂ ಹೆಚ್ಚಿನ ಹೂಡಿಕೆಯನ್ನು ಬೇಡುವ ಬೆಳೆಯಾಗಿದ್ದು, ಅದಕ್ಕೆ ಅನುಗುಣವಾಗಿ ಆದಾಯದ ನಿರೀಕ್ಷೆಯೂ ಹೆಚ್ಚು ಇರುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ತಂಬಾಕು ಬೆಳೆಗೆ ಖರ್ಚಾದ ಮೊತ್ತವನ್ನು ಕೂಡ ವಾಪಸು ಪಡೆಯಲು ರೈತರಿಗೆ ಕಷ್ಟವಾಗುತ್ತಿದೆ.
ತಂಬಾಕು ವ್ಯಾಪಾರವು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ತಂಬಾಕು ಮಂಡಳಿ ಮೂಲಕ ನಡೆಯುತ್ತದೆ. ಈ ಮಂಡಳಿಯಡಿ ಕಾರ್ಯನಿರ್ವಹಿಸುವ ಕಂಪನಿಗಳು ರೈತರಿಗೆ ಬೆಳೆ ಬೆಳೆಯಲು ಉತ್ತೇಜನ ನೀಡುತ್ತಿದ್ದರೂ, ಬೆಳೆದ ಉತ್ಪನ್ನಕ್ಕೆ ಸಮರ್ಪಕ ಬೆಲೆ ನೀಡುತ್ತಿಲ್ಲ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಕದ ಆಂಧ್ರಪ್ರದೇಶದಲ್ಲಿ ತಂಬಾಕಿಗೆ ಲಭ್ಯವಾಗುತ್ತಿರುವ ಬೆಲೆಗೂ, ಕರ್ನಾಟಕದಲ್ಲಿ ದೊರೆಯುತ್ತಿರುವ ಬೆಲೆಗೂ ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬರುತ್ತಿದೆ.

ತಂಬಾಕಿನ ಒಂದು ಕೆಜಿ ಬೆಲೆ ₹370 ಇರಬೇಕೆಂದು ರೈತರ ನಿರೀಕ್ಷೆಯಾಗಿದ್ದರೂ, ಪ್ರಸ್ತುತ ಉತ್ತಮ ದರ್ಜೆಯ ತಂಬಾಕು ಕೂಡ ₹260ರಿಂದ ₹270ರೊಳಗೆ ಮಾತ್ರ ಖರೀದಿಯಾಗುತ್ತಿದೆ. ಕಳೆದ ವರ್ಷ ಸರಾಸರಿ ₹285ರಿಂದ ₹290ರ ನಡುವೆ ಇದ್ದ ಬೆಲೆ, ಈ ವರ್ಷ ₹190ರಿಂದ ₹230ರ ಮಟ್ಟಕ್ಕೆ ಕುಸಿತ ಕಂಡಿದೆ. ಈ ಬೆಲೆ ಕುಸಿತವು ರೈತರ ಆದಾಯಕ್ಕೆ ಭಾರೀ ಹೊಡೆತ ನೀಡಿದ್ದು, ಅವರನ್ನು ನೇರವಾಗಿ ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ಒಟ್ಟಿನಲ್ಲಿ, ತಂಬಾಕು ಬೆಳೆಯ ಮೇಲಿನ ಅವಲಂಬನೆ ಹೆಚ್ಚಿರುವ ಮೈಸೂರು ಜಿಲ್ಲೆಯ ರೈತರು ಬೆಲೆ ಕುಸಿತ, ಉತ್ಪಾದನಾ ಮಿತಿ ಹಾಗೂ ಮಳೆ ಅವಲಂಬನೆ ಎಂಬ ಮೂರು ಮುಖದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ನ್ಯಾಯಸಮ್ಮತ ಬೆಲೆ ಹಾಗೂ ಸೂಕ್ತ ನೀತಿಗಳನ್ನು ಜಾರಿಗೆ ತರುವ ಅಗತ್ಯವಿದೆ. ಇಲ್ಲದಿದ್ದರೆ, ಈ ಬೆಳೆಯ ಮೇಲೆ ಅವಲಂಬಿಸಿರುವ ಸಾವಿರಾರು ರೈತರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ತಂಬಾಕು, ಸಾವಿರಾರು ರೈತರ ಜೀವನಾಧಾರವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತಂಬಾಕು ಬೆಲೆ ಕುಸಿತ, ಬೆಳೆ ಪ್ರಮಾಣ ನಿಯಂತ್ರಣ ಮತ್ತು ಮಾರುಕಟ್ಟೆ ಅನಿಶ್ಚಿತತೆಗಳು ರೈತರನ್ನು ಗೊಂದಲಕ್ಕೆ ತಳ್ಳುತ್ತಿವೆ. 2026-27ನೇ ಸಾಲಿಗೆ ರಾಜ್ಯದ ತಂಬಾಕು ಉತ್ಪಾದನಾ ಮಿತಿಯನ್ನು 9.9 ಕೋಟಿ ಕೆಜಿಯಿಂದ 5.6 ಕೋಟಿ ಕೆಜಿಗೆ ಇಳಿಸಿರುವುದು ಈ ಆತಂಕವನ್ನು ಮತ್ತಷ್ಟು ಗಂಭೀರಗೊಳಿಸಿದೆ.

ತಂಬಾಕು ಬೆಲೆ ಕುಸಿತಕ್ಕೆ ಜಾಗತಿಕ ಕಾರಣಗಳನ್ನು ಉಲ್ಲೇಖಿಸಲಾಗುತ್ತದೆ. ಬ್ರೆಜಿಲ್, ನೈಜೀರಿಯಾ, ಜಿಂಬಾಬ್ವೆ ಮೊದಲಾದ ದೇಶಗಳಲ್ಲಿ ತಂಬಾಕು ಉತ್ಪಾದನೆ ಹೆಚ್ಚಾಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾಗಿ, ದರ ಕುಸಿದಿದೆ ಎಂಬ ವಿವರಣೆ ನೀಡಲಾಗುತ್ತಿದೆ. ಇದು ಒಂದು ಮಟ್ಟಿಗೆ ಸತ್ಯವಾಗಿರಬಹುದು. ಸಂಪೂರ್ಣ ಸತ್ಯವಲ್ಲ.
ವಾಸ್ತವದಲ್ಲಿ, ಕೇಂದ್ರ ಸರ್ಕಾರದ ತೆರಿಗೆ ನೀತಿಗಳು ತಂಬಾಕು ಕ್ಷೇತ್ರದ ಮೇಲೆ ಮಹತ್ತರ ಪರಿಣಾಮ ಬೀರಿವೆ. ತಂಬಾಕು ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ.40ಕ್ಕೆ ಏರಿಸಿರುವುದು ಬಳಕೆ ಕಡಿಮೆಯಾಗಲು ಕಾರಣವಾಗಿದ್ದು, ಅದರ ನೇರ ಪರಿಣಾಮವಾಗಿ ಬೇಡಿಕೆ ಕುಸಿದು ಬೆಲೆ ಇಳಿಕೆಯಾಗುತ್ತಿದೆ. ಮಾರುಕಟ್ಟೆಯ ಬೇಡಿಕೆ-ಪೂರೈಕೆ ಸಮತೋಲನಕ್ಕೆ ಇದು ದೊಡ್ಡ ಹೊಡೆತವಾಗಿದೆ.
ಇದೇ ವೇಳೆ, ಆರೋಗ್ಯದ ದೃಷ್ಟಿಯಿಂದ ತಂಬಾಕು ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹಂತ ಹಂತವಾಗಿ ನಿಷೇಧದತ್ತ ಹೆಜ್ಜೆ ಇಡುತ್ತಿದೆ. ಆದರೆ, ಈ ಕ್ರಮಗಳು ತಂಬಾಕು ಬೆಳೆಗಾರರ ಬದುಕಿನ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಯೋಚಿಸುತ್ತಿಲ್ಲ. ತಕ್ಷಣವೇ ನಿಷೇಧ ಜಾರಿಗೊಳಿಸಿದರೆ ರೈತರಿಗೆ ಪರಿಹಾರ ನೀಡಬೇಕಾಗುತ್ತದೆ. ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು, ನೀತಿಗಳ ಮೂಲಕವೇ ತಂಬಾಕು ಬೆಳೆಯನ್ನು ಅಪ್ರತ್ಯಕ್ಷವಾಗಿ ಹತೋಟಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಈ ಹಿನ್ನೆಲೆಯಲ್ಲಿ ರೈತರು ಎರಡು ರೀತಿಯ ಒತ್ತಡಕ್ಕೆ ಸಿಲುಕಿದ್ದಾರೆ. ಒಂದೆಡೆ ಮಾರುಕಟ್ಟೆ ಬೆಲೆ ಕುಸಿತ, ಮತ್ತೊಂದೆಡೆ ಸರ್ಕಾರದ ನಿಯಂತ್ರಣ. ಪರಿಣಾಮವಾಗಿ, ತಂಬಾಕು ಬೆಳೆಗಾರರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಪರ್ಯಾಯ ಬೆಳೆಗಳಿಗೆ ತಿರುಗಬೇಕೇ ಅಥವಾ ಈ ಬೆಳೆಯನ್ನೇ ಮುಂದುವರಿಸಬೇಕೇ ಎಂಬ ಗೊಂದಲ ಹೆಚ್ಚಾಗಿದೆ.
ಸರ್ಕಾರವು ಆರೋಗ್ಯ ನೀತಿಗಳನ್ನು ಜಾರಿಗೊಳಿಸುವಾಗ, ತಂಬಾಕು ಬೆಳೆಗಾರರ ಜೀವನೋಪಾಯವನ್ನು ಮರೆಯಬಾರದು. ಪರ್ಯಾಯ ಬೆಳೆಗಳಿಗೆ ಸೂಕ್ತ ಮಾರ್ಗದರ್ಶನ, ಆರ್ಥಿಕ ನೆರವು, ಮಾರುಕಟ್ಟೆ ಭದ್ರತೆ ಒದಗಿಸುವುದು ಅತ್ಯವಶ್ಯಕ.
ರಾಜ್ಯದಲ್ಲಿ ತಂಬಾಕು ಬೆಳೆಗಾರರಿಗೆ ಮಹತ್ವದ ಬದಲಾವಣೆಯನ್ನು ತಂದಿರುವ 2026-27ನೇ ಸಾಲಿನ ನಿಯಮಗಳು ರೈತರಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿವೆ. ಇದುವರೆಗೆ ಸಿಂಗಲ್ ಬ್ಯಾರನ್‌ಗೆ 2.5 ಹೆಕ್ಟೇರ್ ಪ್ರದೇಶದಲ್ಲಿ ಗರಿಷ್ಠ 1,780 ಕೆಜಿ ತಂಬಾಕು ಬೆಳೆಯಲು ಅವಕಾಶವಿದ್ದರೆ, ಇದೀಗ ಅದನ್ನು 1,017 ಕೆಜಿಗೆ ಇಳಿಕೆ ಮಾಡಲಾಗಿದೆ. ಈ ಅಚ್ಚರಿಯ ನಿರ್ಧಾರವು ತಂಬಾಕು ಬೆಳೆಗಾರರ ಆದಾಯಕ್ಕೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ.
ಹಿಂದಿನ ವರ್ಷಗಳಲ್ಲಿ ಅನಧಿಕೃತವಾಗಿ (ಕಾರ್ಡ್ ದಾರರ ಮೂಲಕ) ಬೆಳೆದ ತಂಬಾಕನ್ನೂ ಕೆಲವು ಮಟ್ಟಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ ತಂಬಾಕು ಮಂಡಳಿ ಯಾವುದೇ ಕಾರಣಕ್ಕೂ ಅನಧಿಕೃತ ತಂಬಾಕು ಬೆಳೆ ಬೆಳೆಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗುಂಟೂರಿನಲ್ಲಿ ನಡೆದ ಖರೀದಿ ಕಂಪನಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ನಿರ್ಧಾರವನ್ನು ರೈತರು ಅವೈಜ್ಞಾನಿಕ ಎಂದು ಕರೆದಿದ್ದಾರೆ. ತಂಬಾಕು ಬೆಳೆ ಕಡಿಮೆ ಮಾಡಿದರೆ ಉತ್ಪಾದನೆಯೂ ಕಡಿಮೆಯಾಗುತ್ತದೆ. ಇದರಿಂದ ರೈತರ ಆದಾಯದಲ್ಲಿ ಭಾರೀ ಕುಸಿತವಾಗುವ ಆತಂಕ ಇದೆ. ಇಲ್ಲಿಯವರೆಗೆ ಕಡಿಮೆ ಬೆಳೆದರೆ ದಂಡ ವಿಧಿಸುತ್ತಿದ್ದ ಮಂಡಳಿ, ಈಗ ಹೆಚ್ಚಿಗೆ ಬೆಳೆಯದಂತೆ ಸೂಚಿಸುತ್ತಿರುವುದು ಏಕೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.
ತಂಬಾಕು ಬೆಳೆಗಾರರ ಪ್ರಮುಖ ಪ್ರಶ್ನೆ– ‘ನಾವು ಕಡಿಮೆ ಬೆಳೆಯುವುದರಿಂದ ಆದಾಯವನ್ನು ಹೇಗೆ ಉಳಿಸಿಕೊಳ್ಳುವುದು’ ಎಂಬುದಾಗಿದೆ. ಈಗಾಗಲೇ ಉತ್ಪಾದನಾ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆ, ಉತ್ಪಾದನೆಗೆ ಮಿತಿ ವಿಧಿಸುವುದು ರೈತರ ಮೇಲೆ ಹೆಚ್ಚುವರಿ ಒತ್ತಡ ತಂದಿದೆ. ಈ ಗೊಂದಲಕಾರಿ ಪರಿಸ್ಥಿತಿಯಲ್ಲಿ ರೈತರು ತಂಬಾಕು ಮಂಡಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವೆಡೆ ಪ್ರತಿಭಟನೆಗಳೂ ಕಾಣಿಸಿಕೊಳ್ಳುತ್ತಿವೆ. ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ರೈತರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, “ತಂಬಾಕು ಬೆಳೆಗಾರರನ್ನು ಕಂಪನಿಗಳು ಪ್ರಾರಂಭದಲ್ಲಿ ಉತ್ತೇಜಿಸಿದವು. ಆದರೆ, ಬೆಳೆ ಬಂದ ಬಳಿಕ ಲಾಭದ ನ್ಯಾಯಯುತ ಹಂಚಿಕೆ ಮಾಡುವಲ್ಲಿ ವಿಫಲವಾಗುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದಲೂ ಯಾವುದೇ ಸಮರ್ಪಕ ನೆರವು ದೊರೆಯುತ್ತಿಲ್ಲ. ರೈತರ ಕಷ್ಟ ಅರಿಯುವವರು ಯಾರು?” ಎಂದು ಪ್ರಶ್ನಿಸಿದರು.
“ಜನರ ಆರೋಗ್ಯದ ದೃಷ್ಟಿಯಿಂದ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿ, ಈ ಬೆಳೆಯನ್ನು ನಂಬಿಕೊಂಡಿರುವ ರೈತರ ಭವಿಷ್ಯದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಮತ್ತಷ್ಟು ಆತಂಕ ತಂದಿದೆ. ಈ ಹಿನ್ನೆಲೆಯಲ್ಲಿ ತಂಬಾಕು ರೈತರಿಗೆ ‘ಒನ್ ಟೈಮ್ ಸೆಟ್ಲುಮೆಂಟ್’ ರೂಪದಲ್ಲಿ ₹25 ಲಕ್ಷ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
“ಇನ್ನೊಂದೆಡೆ, ರೈತರ ಸಂಕಷ್ಟವನ್ನು ದುರುಪಯೋಗಪಡಿಸಿಕೊಂಡು ಕೆಲ ಕಾರ್ಪೊರೇಟ್ ಕುಳಗಳು ಬೇನಾಮಿ ಹಣದ ಮೂಲಕ ಕೃಷಿಭೂಮಿಯನ್ನು ಖರೀದಿಸುತ್ತಿರುವ ಆರೋಪವೂ ಕೇಳಿಬಂದಿದೆ. ಭೂ ಸುಧಾರಣೆ ಕಾಯ್ದೆಯ ಸಡಿಲತೆಯನ್ನು ಬಳಸಿಕೊಂಡು ಇಂತಹ ವ್ಯವಹಾರಗಳು ಹೆಚ್ಚುತ್ತಿವೆ. ರೈತರು ಹಣದ ಆಮಿಷಕ್ಕೆ ಒಳಗಾಗಿ ಭೂಮಿ ಕಳೆದುಕೊಳ್ಳದೆ, ಪರ್ಯಾಯ ಬೆಳೆಗಳತ್ತ ಮುಖ ಮಾಡಬೇಕು” ಎಂದು ಮನವಿ ಮಾಡಿದರು.

ದಸಂಸ ಮುಖಂಡ ಹಾಗೂ ತಂಬಾಕು ಬೆಳೆಗಾರ ಅತ್ತಿಕುಪ್ಪೆ ರಾಮಕೃಷ್ಣ ಮಾತನಾಡಿ, “ಇನ್ನೂ ಮಾರಾಟವಾಗದೆ ಉಳಿದಿರುವ ತಂಬಾಕನ್ನು ಕಂಪನಿಗಳು ತಕ್ಷಣ ಖರೀದಿ ಮಾಡಬೇಕು. ಇಲ್ಲವಾದಲ್ಲಿ ರೈತರಿಗೆ ಭಾರೀ ನಷ್ಟವಾಗಲಿದೆ. ಈ ವರ್ಷ ನನ್ನಲ್ಲಿ ಸುಮಾರು 500 ಕೆಜಿ ತಂಬಾಕು ಮಾರಾಟವಾಗದೆ ಉಳಿದಿದೆ. ಇದರಿಂದ ಸುಮಾರು ₹1 ಲಕ್ಷ ನಷ್ಟವಾಗಿದೆ. ಇದೇ ಸ್ಥಿತಿ ಜಿಲ್ಲೆಯ ಸಾವಿರಾರು ರೈತರದ್ದು. ಒಟ್ಟಾರೆ ನಷ್ಟ ಸಾವಿರಾರು ಕೋಟಿಗೆ ಏರಬಹುದು” ಎಂದು ಆತಂಕ ವ್ಯಕ್ತಪಡಿಸಿದರು.
“ಬ್ಯಾಂಕ್‌ಗಳಿಂದ ಸಾಲ ಕೂಡ ಸಿಗುತ್ತಿಲ್ಲ. ಹಿಂದೆ ಸುಲಭವಾಗಿ ಸಾಲ ನೀಡುತ್ತಿದ್ದ ಬ್ಯಾಂಕ್‌ಗಳು ಈಗ ಮಿತಿಯನ್ನು ಹೇರಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚಿನ ವರ್ಷದಲ್ಲಿ ಕಂಪನಿಗಳು ಎರಡು ಬಾರಿ ತಂಬಾಕು ಬೆಳೆಯಲು ಪ್ರೇರೇಪಿಸಿ, ಬಳಿಕ ಖರೀದಿ ವಿಳಂಬ ಮಾಡುವ ಮೂಲಕ ರೈತರನ್ನು ಸಾಲದ ಸುಳಿಗೆ ತಳ್ಳಿವೆ” ಎಂದು ಐಟಿಸಿ ಕಂಪನಿಯ ವಿರುದ್ಧ ಕಿಡಿಕಾರಿದರು.

ರೈತ ಮುಖಂಡ ಅಗ್ರಹಾರ ರಾಮೇಗೌಡ ಮಾತನಾಡಿ, “ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆದಾಯದಲ್ಲಿ ಭಾರೀ ಕುಸಿತವಾಗಿದೆ. ಆಂಧ್ರ ಪ್ರದೇಶದಲ್ಲಿ ಕೆಜಿಗೆ ₹470 ದರ ಸಿಕ್ಕಿದ್ದರೆ, ಕರ್ನಾಟಕದಲ್ಲಿ ₹370 ನಿಗದಿ ಮಾಡಿದ್ದರೂ ವಾಸ್ತವದಲ್ಲಿ ₹260-270ರ ನಡುವೆ ಮಾತ್ರ ಖರೀದಿ ನಡೆದಿದೆ. ಕಳೆದ ಕೆಲವು ತಿಂಗಳು ಖರೀದಿ ಸಂಪೂರ್ಣ ಸ್ಥಗಿತವಾಗಿತ್ತು. ಪ್ರತಿಭಟನೆಗಳ ನಂತರ ಪುನರಾರಂಭವಾಗಿದೆ” ಎಂದು ತಿಳಿಸಿದರು.
ಇನ್ನು ಒಂದು ತಿಂಗಳೊಳಗೆ ತಂಬಾಕು ಮಂಡಳಿ ಖರೀದಿ ನಿಲ್ಲಿಸುವ ಸಾಧ್ಯತೆ ಇರುವುದರಿಂದ, ರೈತರ ಬಳಿ ಉಳಿದಿರುವ ಉತ್ಪನ್ನದ ಬಗ್ಗೆ ಅನಿಶ್ಚಿತತೆ ಹೆಚ್ಚಾಗಿದೆ. ಮಾರಾಟವಾಗದ ತಂಬಾಕು ಏನು ಮಾಡಬೇಕು ಎಂಬ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಲವತ್ತುಕೊಂಡರು.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ, ಮಧ್ಯಪ್ರದೇಶ ಮಾದರಿ ‘ಕುದುರೆ ವ್ಯಾಪಾರ’ ತಡೆಗೆ ಟಿಎಂಸಿಗೆ ಮೂರನೇ ಎರಡರಷ್ಟು ಬಹುಮತ ನೀಡಿ: ಮಮತಾ ಮನವಿ
ಒಟ್ಟಿನಲ್ಲಿ, ತಂಬಾಕು ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಸರ್ಕಾರಗಳು ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಜೋರಾಗುತ್ತಿದೆ. ಸಮರ್ಪಕ ಬೆಲೆ, ಖರೀದಿ ಭರವಸೆ, ಸಾಲ ಸೌಲಭ್ಯ ಹಾಗೂ ಪರ್ಯಾಯ ಬೆಳೆಗಳಿಗೆ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ ಎಂಬುದು ರೈತರ ಒಕ್ಕೂಟದ ಅಭಿಪ್ರಾಯವಾಗಿದೆ.





