ಪ್ರತಿ ವರ್ಷ ನಡೆಯುವ ಕಾವಡ್ ಯಾತ್ರೆ ಮುಕ್ತಾಯಗೊಂಡ ಬೆನ್ನಲ್ಲೇ, ಹರಿದ್ವಾರದಲ್ಲಿ ತ್ಯಾಜ್ಯದ ಸವಾಲು ಎದುರಾಗುತ್ತಿದೆ. ಹರಿದ್ವಾರ ತೀವ್ರ ಸ್ವರೂಪದ ನೈರ್ಮಲ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸುಮಾರು 4.5 ಕೋಟಿಗೂ ಹೆಚ್ಚು ಭಕ್ತರು ಅಂದರೆ ಕಾವಡ್ ಯಾತ್ರಿಕರು ಗಂಗಾಜಲ ಸಂಗ್ರಹಿಸಿ ತಮ್ಮ ಗಮ್ಯಸ್ಥಾನಕ್ಕೇನೋ ಮರಳುತ್ತಾರೆ. ಆದರೆ ಹರಿದ್ವಾರದಲ್ಲಿ ಕಸದ ರಾಶಿ ಹಾಕಿ ಹೋಗುತ್ತಾರೆ. ಈ ಬಾರಿ ಇಡೀ ನಗರದಲ್ಲಿ ಮೂತ್ರದ ಬಾಟಲಿಗಳು ಸೇರಿದಂತೆ ಸುಮಾರು 7,000 ಮೆಟ್ರಿಕ್ ಟನ್‌ಗೂ ಅಧಿಕ ಕಸ ಶೇಖರಣೆಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದರಲ್ಲೂ ಮುಖ್ಯವಾಗಿ ಕಾವಡ್ ಯಾತ್ರಿಕರು ಹೆಚ್ಚಾಗಿ ಭೇಟಿ ನೀಡಿರುವ ಹರ್ ಕಿ ಪೌರಿ, ಪ್ರಮುಖ ಗಂಗಾ ಘಾಟ್‌ಗಳು, ವಾಹನ ಪಾರ್ಕಿಂಗ್ ತಾಣಗಳು, ನಗರದ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೃಹತ್ ಪ್ರಮಾಣದ ಕಸದ ರಾಶಿಗಳು ಕಂಡುಬರುತ್ತಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕಾವಡ್ ಯಾತ್ರಿಕರ ಹಿಂಸಾಚಾರ ಖಂಡಿಸಿ ಹೇಳಿಕೆ: ಮುಸ್ಲಿಂ ಧರ್ಮಗುರು ವಿರುದ್ಧ ಎಫ್‌ಐಆರ್; ನೆಟ್ಟಿಗರು ಆಕ್ರೋಶ
ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಮೂತ್ರ ತುಂಬಿದ ಪ್ಲಾಸ್ಟಿಕ್ ಬಾಟಲಿಗಳು/ ಪ್ಲಾಸ್ಟಿಕ್ ಕವರ್‌ಗಳು, ಎಸೆದುಹೋದ ಬಟ್ಟೆಗಳು, ಚಪ್ಪಲಿಗಳು, ಒಮ್ಮೆ ಬಳಸುವ ಪ್ಲಾಸ್ಟಿಕ್ ತಟ್ಟೆಗಳು ಮತ್ತು ಧಾರ್ಮಿಕ ಪರಿಕರಗಳು ನಗರದಾದ್ಯಂತ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಇನ್ನು ತಾತ್ಕಾಲಿಕ ಶೌಚಾಲಯಗಳ ಸುತ್ತಮುತ್ತ ನೈರ್ಮಲ್ಯ ಸಂಪೂರ್ಣ ಹದಗೆಟ್ಟಿದ್ದು, ದುರ್ನಾತದಿಂದಾಗಿ ಸ್ಥಳೀಯರು ಮತ್ತು ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ನೆಟ್ಟಿಗರೂ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಸದ್ಯ ಕಾವಡ್ ಯಾತ್ರೆ ಮುಗಿಯುತ್ತಿದ್ದಂತೆ ಹರಿದ್ವಾರ ಮಹಾನಗರ ಪಾಲಿಕೆಯು ನೈರ್ಮಲ್ಯ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇದಕ್ಕಾಗಿಯೇ 1,000ಕ್ಕೂ ಹೆಚ್ಚು ಹೆಚ್ಚುವರಿ ನೈರ್ಮಲ್ಯ ಕಾರ್ಮಿಕರನ್ನು ಹಗಲು-ರಾತ್ರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಲಾಗಿದೆ.
ಪ್ರತಿ ವರ್ಷ ಕನ್ವರ್ ಯಾತ್ರೆಯ ನಂತರ ಗಂಗಾ ನದಿಯ ನೈರ್ಮಲ್ಯ ಹಾಗೂ ಪರಿಸರ ವ್ಯವಸ್ಥೆಗೆ ಭಾರಿ ಹಾನಿಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಮತ್ತು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.




