ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ 18ನೇ ಬ್ರಿಕ್ಸ್ ಶೃಂಗಸಭೆಯ ಆತಿಥ್ಯದ ಭಾಗವಾಗಿ ವಿದೇಶಿ ನಾಯಕರು ಹಾಗೂ ಗಣ್ಯರಿಗೆ ನೀಡಲಾದ ಭೋಜನ ಕೂಟದ ‘ಸಸ್ಯಾಹಾರಿ ಮೆನು’ ಇದೀಗ ರಾಜಕೀಯ ವಾಗ್ದಾಳಿಗೆ ಕಾರಣವಾಗಿದೆ. “ಭಾರತದ ಶೇ. 80ರಷ್ಟು ಜನರು ಮಾಂಸಾಹಾರಿಗಳು” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ವಾಸ್ತವಕ್ಕೆ ಕನ್ನಡಿ ಹಿಡಿದಿದ್ದಾರೆ.
ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬ್ರಿಕ್ಸ್ ರಾಷ್ಟ್ರಗಳ ನಾಯಕರಿಗೆ ಶುದ್ಧ ಸಸ್ಯಾಹಾರಿ ರಾತ್ರಿ ಭೋಜನವನ್ನು ಏರ್ಪಡಿಸಿದ್ದರು. ಈ ಭೋಜನದ ಮೆನುವಿನಲ್ಲಿ ಖಾಂಡ್ವಿ, ಅಣಬೆ ಗಲೌಟಿ ಕೆಬಾಬ್, ಪನೀರ್ ಲಬಾಬ್ದಾರ್, ರಾಗಿ (ಸಿರಿಧಾನ್ಯ) ಪುಲಾವ್ ಹಾಗೂ ಜಿಲೇಬಿ ಸೇರಿದಂತೆ ದೇಶದ ವಿವಿಧ ಪ್ರಾಂತ್ಯಗಳ ವೈವಿಧ್ಯಮಯ ಸಸ್ಯಾಹಾರಿ ಖಾದ್ಯಗಳನ್ನು ಬಡಿಸಲಾಗಿತ್ತು.
ಇದನ್ನೂ ಓದಿ: ಬ್ರಿಕ್ಸ್ ಅಂಗಳದಲ್ಲಿ ಭಾರತದ ಪಾತ್ರ: ಸುಮ್ಮನೆ ನೋಡುವುದೋ ಅಥವಾ ಸೂತ್ರಧಾರಿಯೋ?
ಈ ಕುರಿತು ಭಾನುವಾರ ಸಾಮಾಜಿಕ ಜಾಲತಾಣ ‘X’ನಲ್ಲಿ ಪ್ರತಿಕ್ರಿಯಿಸಿದ ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ, “ದಾಖಲೆಗಾಗಿ ಹೇಳುತ್ತಿದ್ದೇನೆ: ಭಾರತದ ಶೇ. 80ರಷ್ಟು ಜನರು ಮಾಂಸಾಹಾರಿಗಳು. ಭಾರತೀಯ ಮಾಂಸಾಹಾರಿ ಆಹಾರಗಳು ಅತ್ಯಂತ ರುಚಿಕರವಾದವು. ಹಾಗೆಯೇ ನನ್ನ ತಂಗಿ (ಪ್ರಿಯಾಂಕಾ ಗಾಂಧಿ) ಮಾಡುವ ಛೋಲೆ ಭಟೂರೆ ಕೂಡ ರುಚಿಯಾಗಿದೆ” ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಛೋಲೆ ಭಟೂರೆ ಖಾದ್ಯದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಶೃಂಗಸಭೆಯಲ್ಲಿ ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಪ್ರತಿನಿಧಿಸುವಾಗ ಮಾಂಸಾಹಾರಿ ಖಾದ್ಯಗಳನ್ನು ಸಂಪೂರ್ಣವಾಗಿ ಹೊರಗಿಟ್ಟಿರುವುದನ್ನು ಪ್ರಶ್ನಿಸಲು ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಆದಾಗ್ಯೂ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS-5) ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಸುಮಾರು ಶೇ. 70ರಿಂದ 80ರಷ್ಟು ಜನರು ಮಾಂಸಾಹಾರ ಸೇವಿಸುತ್ತಾರೆ ಎಂಬ ವರದಿಗಳಿವೆ.





