- ಒಡಿಶಾ ರೈಲು ದುರಂತ ಬಳಿಕ ಸರಕು ಸಾಗಣೆ ರೈಲು ರೂರ್ಕೆಲಾ ಸ್ಟೀಲ್ ಪ್ಲಾಟ್‌ನತ್ತ ಸಂಚಾರ
- ಸೋಮವಾರ ಮತ್ತೆ ಏಳು ರೈಲು ಸಂಚಾರ ಆರಂಭ ಎಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಒಡಿಶಾ ರೈಲು ದುರಂತ ಹಿನ್ನೆಲೆ ಹಾನಿಗೀಡಾಗಿದ್ದ ರೈಲು ಹಳಿಗಳು ದುರಸ್ತಿಗೊಂಡಿವೆ. ಈ ಹಿನ್ನೆಲೆ ಸೋಮವಾರ (ಜೂನ್ 5) ಬೆಳಗ್ಗೆ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಈ ಕುರಿತು ಸುದ್ದಿಸಂಸ್ಥೆಯೊಂದು ವಿಡಿಯೋ ಸಹಿತ ಟ್ವೀಟ್ ಮಾಡಿದೆ.
ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರಂತರ ಶ್ರಮದಿಂದ ಹಾನಿಗೊಳಗಾಗಿದ್ದ ಮಾರ್ಗವನ್ನು ಬೇಗ ದುರಸ್ತಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಟ್ವಿಟ್ ಮೂಲಕ ತಿಳಿಸಿದ್ದಾರೆ.
“ಇಂದು ರಾತ್ರಿಯ ವೇಳೆಗೆ ಇನ್ನು ಏಳು ರೈಲುಗಳು ಸಂಚಾರ ಆರಂಭಿಸಲಿವೆ. ರೈಲುಗಳ ಸಂಚಾರವನ್ನು ಸಾಮಾನ್ಯ ಸ್ಥಿತಿಗೆ ತರಲಾಗುವುದು” ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಅಲ್ಲದೆ ಭಾನುವಾರ (ಜೂನ್ 4) ರಾತ್ರಿ ಮೊದಲ ಸರಕು ಸಾಗಣೆ ರೈಲು ಒಡಿಶಾ ರೈಲು ದುರಂತ ಮಾರ್ಗದಲ್ಲಿ ಸಂಚಾರ ಆರಂಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬೆಂಗಳೂರು -ಹೌರಾ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾದ ಮಾರ್ಗದಲ್ಲಿಯೇ ಭಾನುವಾರ ರಾತ್ರಿ 10.40ಗಂಟೆಗೆ ವಿಶಾಖಪಟ್ಟಣದ ಬಂದರಿನಿಂದ ಕಲ್ಲಿದ್ದಲು ತುಂಬಿದ್ದ ಸರಕು ಸಾಗಣೆ ರೈಲು ರೂರ್ಕೆಲಾ ಸ್ಟೀಲ್ ಪ್ಲಾಟ್‌ನತ್ತ ಸಂಚರಿಸಿತು.
ಒಡಿಶಾದಲ್ಲಿ ತ್ರಿವಳಿ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ಬಳಿಕ ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ರೈಲು ಇದಾಗಿತ್ತು. ನಿಧಾನವಾಗಿ ಸಂಚರಿಸಿದ ರೈಲನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಪತ್ರಕರ್ತರು ಹಾಗೂ ರೈಲ್ವೆ ಅಧಿಕಾರಿಗಳು ವೀಕ್ಷಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯ ದ್ವೇಷ ತುಂಬಿದ ಸಿದ್ಧಾಂತವನ್ನು ಭಾರತೀಯರು ಸೋಲಿಸುತ್ತಾರೆ: ರಾಹುಲ್ ಗಾಂಧಿ
“ಒಡಿಶಾದ ರೈಲು ದುರಂತ ಬಳಿಕ ರೈಲ್ವೆ ಮಾರ್ಗದ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಈಗ ಮೊದಲ ಸಂಚಾರ ಆರಂಭಗೊಂಡಿದೆ” ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.
ತ್ರಿವಳಿ ರೈಲು ಅಪಘಾತದಲ್ಲಿ ಒಟ್ಟು 275 ಮಂದಿ ಮೃತಪಟ್ಟಿದ್ದು 200 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಅಧಿಕಾರಿಗಳು ಡಿಎನ್ಎ ಪರೀಕ್ಷೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.