ಕೇಂದ್ರ ಸಚಿವರು ಹಾಗೂ ಹಿರಿಯ ಅಧಿಕಾರಿಯೊಬ್ಬರ ಕುಟುಂಬಸ್ಥರು ಕೃಷಿ ಸಬ್ಸಿಡಿ ಪಡೆದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ (NHB) ವಾಣಿಜ್ಯ ತೋಟಗಾರಿಕೆ ಯೋಜನೆಗಳ ಮಾರ್ಗಸೂಚಿಗಳಿಗೆ ಮಹತ್ವದ ತಿದ್ದುಪಡಿ ತಂದಿದೆ.
ಹೊಸ ನಿಯಮಗಳ ಪ್ರಕಾರ, ಹಾಲಿ ಸಚಿವರು, ಸಂಸದರು, ಶಾಸಕರು ಹಾಗೂ ಸರ್ಕಾರಿ ಅಧಿಕಾರಿಗಳ ಕುಟುಂಬಸ್ಥರು ಇನ್ನು ಮುಂದೆ ಈ ಸಬ್ಸಿಡಿ ಪಡೆಯಲು ಅರ್ಹರಾಗಿರುವುದಿಲ್ಲ. ಆರ್ಥಿಕ ನೆರವನ್ನು ತರ್ಕಬದ್ಧಗೊಳಿಸುವ, ಸಮಾನ ಹಂಚಿಕೆ ಖಚಿತಪಡಿಸುವ ಹಾಗೂ ಸಬ್ಸಿಡಿ ದುರ್ಬಳಕೆ ತಡೆಯುವ ಉದ್ದೇಶದಿಂದ ಆಗಸ್ಟ್ 21 ರಂದು ಈ ಹೊಸ ಮಾರ್ಗಸೂಚಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೊರಡಿಸಲಾಗಿದೆ.
ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಗೀರಥ್ ಚೌಧರಿ ಅವರು ತಮ್ಮ ಜಮೀನಿಗೆ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಿಂದ 99 ಲಕ್ಷ ರೂ. ಸಬ್ಸಿಡಿ ಪಡೆದಿದ್ದರು. ಹಾಗೆಯೇ, ಹಿರಿಯ ಐಎಎಸ್ ಅಧಿಕಾರಿ ಹಾಗೂ ಪಶುಸಂಗೋಪನಾ ಇಲಾಖೆಯ ಹಾಲಿ ಕಾರ್ಯದರ್ಶಿ ನರೇಶ್ ಪಾಲ್ ಗಂಗ್ವಾರ್ ಅವರ ಪತ್ನಿ, ಪುತ್ರ ಮತ್ತು ತಾಯಿ ಕೂಡ ಈ ಯೋಜನೆಯ ಫಲಾನುಭವಿಗಳಾಗಿದ್ದರು ಎಂಬ ಅಂಶ ಇತ್ತೀಚಿನ ಮಾಧ್ಯಮ ತನಿಖಾ ವರದಿಗಳಿಂದ ಬಹಿರಂಗವಾಗಿತ್ತು. ಕ್ಯಾಪ್ಸಿಕಂ, ಸೌತೆಕಾಯಿ, ಟೊಮೆಟೊ ಹಾಗೂ ಗುಲಾಬಿಯಂತಹ ಹೂವುಗಳ ವಾಣಿಜ್ಯ ಬೇಸಾಯವನ್ನು ಉತ್ತೇಜಿಸುವ ಈ ಯೋಜನೆಯಲ್ಲಿ, ಯೋಜನಾ ವೆಚ್ಚದ ಶೇ 50ರಷ್ಟು (ಗರಿಷ್ಠ 1 ಕೋಟಿ ರೂ.ವರೆಗೆ) ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಗಣ್ಯರು ಇದರ ಲಾಭ ಪಡೆಯುತ್ತಿರುವುದು ವಿವಾದಕ್ಕೀಡಾದ ಬೆನ್ನಲ್ಲೇ ನಿಯಮಗಳನ್ನು ಬಿಗಿಗೊಳಿಸಲಾಗಿದೆ.
ತಿದ್ದುಪಡಿ ಮಾಡಲಾದ ಮಾರ್ಗಸೂಚಿಗಳ ಅನ್ವಯ, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು, ಹಾಲಿ ಕ್ಯಾಬಿನೆಟ್ ಮತ್ತು ರಾಜ್ಯ ಸಚಿವರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮೇಯರ್‌ಗಳು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಇನ್ನು ಮುಂದೆ ಸಬ್ಸಿಡಿ ಪಡೆಯುವಂತಿಲ್ಲ. ಅಲ್ಲದೆ, ಡಿ-ಗ್ರೂಪ್ (MTS) ನೌಕರರನ್ನು ಹೊರತುಪಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ನೌಕರರು, ಸಾರ್ವಜನಿಕ ವಲಯದ ಉದ್ಯಮಗಳು (PSU) ಹಾಗೂ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಕೂಡ ಅನರ್ಹರಾಗಿದ್ದಾರೆ. ತಿಂಗಳಿಗೆ 10 ಸಾವಿರ ರೂ.ಗೂ ಅಧಿಕ ಪಿಂಚಣಿ ಪಡೆಯುವ ನಿವೃತ್ತ ನೌಕರರು (ಡಿ-ಗ್ರೂಪ್ ಹೊರತುಪಡಿಸಿ) ಮತ್ತು ‘ರೈತರ ಗುಂಪು’ಗಳಿಗೂ ಈ ನಿರ್ಬಂಧ ಅನ್ವಯವಾಗಲಿದೆ.
ಹೊಸ ನಿಯಮಗಳಲ್ಲಿ ‘ಕುಟುಂಬ’ದ ವ್ಯಾಖ್ಯಾನವನ್ನೂ ವಿಸ್ತರಿಸಲಾಗಿದೆ. ಈ ಹಿಂದೆ ಕೇವಲ ಪತಿ, ಪತ್ನಿ ಮತ್ತು ಅವಲಂಬಿತ ಅಪ್ರಾಪ್ತ ಮಕ್ಕಳನ್ನು ಮಾತ್ರ ಕುಟುಂಬ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಅರ್ಜಿದಾರರ ಪತ್ನಿ ಅಥವಾ ಪತಿ, ತಂದೆ, ತಾಯಿ, ಪುತ್ರರು ಮತ್ತು ಪುತ್ರಿಯರನ್ನು ಕುಟುಂಬದ ವ್ಯಾಪ್ತಿಗೆ ತರಲಾಗಿದೆ. ಒಂದು ಕುಟುಂಬದ ಯಾವುದೇ ಸದಸ್ಯ ಒಮ್ಮೆ ಸಬ್ಸಿಡಿ ಪಡೆದರೆ, ಉಳಿದ ಸದಸ್ಯರು ಮತ್ತೆ ಸಹಾಯಧನ ಪಡೆಯುವಂತಿಲ್ಲ. ಅಲ್ಲದೆ, ತಪ್ಪು ಮಾಹಿತಿ ನೀಡಿ ಸಬ್ಸಿಡಿ ಪಡೆದರೆ ಬಡ್ಡಿ ಸಮೇತ ಹಣವನ್ನು ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ. ಇದರ ಜೊತೆಗೆ ಸಾಮಾನ್ಯ ವರ್ಗದ ರಾಜ್ಯಗಳ ಫಲಾನುಭವಿಗಳಿಗೆ ನೀಡುತ್ತಿದ್ದ ಶೇ 50ರಷ್ಟು ಸಬ್ಸಿಡಿಯನ್ನು ಶೇ 35ಕ್ಕೆ ಇಳಿಕೆ ಮಾಡಲಾಗಿದ್ದು, ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ ಶೇ 45ಕ್ಕೆ ನಿಗದಿಪಡಿಸಲಾಗಿದೆ. ಸಬ್ಸಿಡಿ ಪಡೆದವರು ನಿಗದಿತ ಅವಧಿಯೊಳಗೆ ಅದನ್ನು ಬಡ್ಡಿ ಸಮೇತ ಹಿಂದಿರುಗಿಸಿ ಯೋಜನೆಯಿಂದ ಸ್ವಇಚ್ಛೆಯಿಂದ ಹೊರಬರುವ ಅವಕಾಶವನ್ನೂ ಕಲ್ಪಿಸಲಾಗಿದೆ.




