ಸರ್ಕಾರಿ ಶಾಲೆಯೊಂದನ್ನು ಪರಿಶೀಲಿಸಲು ತೆರಳಿದ್ದ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ. ಸಿಜೆಪಿ ಸಹ ಸಂಚಾಲಕ ಆಶುತೋಷ್ ರಂಕಾ ಸೇರಿದಂತೆ ಹಲವು ಕಾರ್ಯಕರ್ತರು ಹಲ್ಲೆಗೊಳಗಾಗಿ ಗಾಯಗೊಂಡಿದ್ದು, ವಾಹನಗಳು ಹಾಗೂ ಮೊಬೈಲ್‌ಗಳನ್ನು ಹಾನಿಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಶುಕ್ರವಾರ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ದೀಪ್ಕೆ, “ಸಿಜೆಪಿ ಕಾರ್ಯಕರ್ತರ ರಕ್ತಕ್ಕಾಗಿ ಬಿಜೆಪಿ ಗೂಂಡಾಗಳು ಕಾಯುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಘಟನೆಯನ್ನು ತಡೆಯುವಲ್ಲಿ ರಾಜಸ್ಥಾನ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿರುವ ಅವರು, ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದ್ದಾರೆ.
ರಾಂಪುರ-ಕನ್ವಾರ್‌ಪುರ ಗ್ರಾಮದ ಸರ್ಕಾರಿ ಶಾಲೆಯೊಂದನ್ನು ಪರಿಶೀಲಿಸಲು ಸಿಜೆಪಿ ತಂಡ ತೆರಳಿತ್ತು. ಈ ಶಾಲೆ ಕಳೆದ ಒಂದು ವರ್ಷದಿಂದ ಎಮ್ಮೆಗಳ ಕೊಟ್ಟಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ರಂಕಾ ಆರೋಪಿಸಿದ್ದಾರೆ.
ಸಿಜೆಪಿ ತಂಡ ಸ್ಥಳಕ್ಕೆ ತೆರಳುವ ಮೊದಲೇ ಬಿಜೆಪಿ ಕಾರ್ಯಕರ್ತರು ಅಲ್ಲಿದ್ದರು. ತಂಡ ಬಂದ ಬಳಿಕ ತಮ್ಮ ಮೇಲೆ ಮೊದಲು ಹಲ್ಲೆ ನಡೆಸಲಾಗಿದೆ ಎಂದು ರಂಕಾ ಆರೋಪಿಸಿದ್ದಾರೆ. ಸ್ಥಳದಲ್ಲಿ ಮಾಧ್ಯಮದವರೂ ಇದ್ದರು ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೂ ಹಿಂಸಾಚಾರ ಮುಂದುವರಿಯಿತು ಎಂದು ಅವರು ಹೇಳಿದ್ದಾರೆ. “ಕಲ್ಲು ತೂರಾಟ ನಡೆಯುತ್ತಿದ್ದರೂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ನಮ್ಮ ಕಾರ್ಯಕರ್ತರ ಕೈ ಮುರಿದಿದೆ. ವಾಹನಗಳ ಗಾಜು ಒಡೆದಿದ್ದಾರೆ. ಕಲ್ಲು ತೂರಾಟ ನಡೆಸಲಾಗಿದೆ” ಎಂದು ರಂಕಾ ಪಿಟಿಐಗೆ ತಿಳಿಸಿದ್ದಾರೆ.
ತಮ್ಮ ತಂಡದಲ್ಲಿದ್ದ ಮಹಿಳೆಯರ ಮೇಲೂ ಕಲ್ಲು ತೂರಲಾಗಿದೆ, ಅವರ ಮೊಬೈಲ್‌ಗಳನ್ನು ಒಡೆದಿದ್ದಾರೆ. ಈ ದಾಳಿ ಪೂರ್ವನಿಯೋಜಿತವಾಗಿತ್ತು. ತಮ್ಮ ಅಂಗಿ ಹರಿದಿದ್ದು, ತಂಡದ ಮತ್ತೊಬ್ಬ ಸದಸ್ಯರ ಕೈ ಮುರಿದಿದೆ ಎಂದು ಆರೋಪಿಸಿದ್ದಾರೆ. ಹಲ್ಲೆಯಲ್ಲಿ ಭಾಗಿಯಾದವರನ್ನು 48 ಗಂಟೆಯೊಳಗೆ ಬಂಧಿಸಬೇಕು ಎಂದು ರಂಕಾ ಆಗ್ರಹಿಸಿದ್ದಾರೆ. ಅಲ್ಲದೆ, ಸಿಜೆಪಿ ನಡೆಸುತ್ತಿರುವ ಶಾಲಾ ಪರಿಶೀಲನೆಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯುವಂತೆ ರಾಜಸ್ಥಾನದ ಶಾಲಾ ಶಿಕ್ಷಣ ಸಚಿವ ಮದನ್ ದಿಲಾವರ್ ಅವರನ್ನು ಒತ್ತಾಯಿಸಿದ್ದಾರೆ. ಆರೋಪಿಗಳನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿರುವ ಅವರು, ಪ್ರತಿಭಟನೆ ವೇಳೆ ಸಚಿವ ಮದನ್ ದಿಲಾವರ್ ಅವರ ರಾಜೀನಾಮೆಗೂ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಲ್ದ್ವಾನಿ ವಿವಾದ | ಪಕ್ಷದ ನಾಯಕರ ಆನ್‌ಲೈನ್ ಪೋಸ್ಟ್‌ಗಳ ಮೇಲೆ ನಿಗಾ ಇರಿಸಲು ರಾಹುಲ್ ಸೂಚನೆ
ಸರ್ಕಾರಿ ಶಾಲೆಗೆ ಭೇಟಿ ನೀಡಲು ಸಿಜೆಪಿ ತಂಡ ಮುಂದಾದಾಗ ಗ್ರಾಮಸ್ಥರು ಅವರನ್ನು ತಡೆದಿದ್ದರು ಎಂದು ಪಿಟಿಐ ವರದಿ ಮಾಡಿದೆ. ಶಾಲೆಯ ಅಭಿವೃದ್ಧಿಗೆ ಈಗಾಗಲೇ ₹12 ಲಕ್ಷ ಮಂಜೂರಾಗಿದೆ. ಗ್ರಾಮಸ್ಥರೇ ಶಾಲೆಯ ನಿರ್ಮಾಣ ಕಾರ್ಯ ಕೈಗೊಳ್ಳಲು ಸಮರ್ಥರಾಗಿದ್ದು, ಸಿಜೆಪಿಯ ನೆರವು ತಮಗೆ ಅಗತ್ಯವಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಈ ವಿಚಾರವನ್ನು ರಾಜಕೀಯಗೊಳಿಸಲು ತಾವು ಬಯಸುವುದಿಲ್ಲ ಎಂದಿರುವ ಗ್ರಾಮಸ್ಥರು, ಸಿಜೆಪಿಯ ಸಿದ್ಧಾಂತಗಳನ್ನೂ ವಿರೋಧಿಸಿದ್ದಾರೆ. ದೇಶವನ್ನು ವಿಭಜಿಸುವಂತೆ ಕರೆ ನೀಡುವ ಮತ್ತು ಭಗವಾನ್ ರಾಮನ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವ ಪಕ್ಷವನ್ನು ತಾವು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಸೌಲಭ್ಯಗಳ ಕೊರತೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಸಿಜೆಪಿ ‘ಸ್ಕೂಲ್ ಠೀಕ್ ಕರೋ’ ಅಭಿಯಾನ ನಡೆಸುತ್ತಿದೆ. ಇದರ ಭಾಗವಾಗಿ ರಾಜಸ್ಥಾನದ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ.




